ನವದೆಹಲಿ: ಇಂಜಿನಿಯರಿಂಗ್ ಕಾಲೇಜುಗಳು ಹಾಗೂ ಸೀಟುಗಳ ಒಟ್ಟು ಸಂಖ್ಯೆ ಕಳೆದ ಒಂದು ದಶಕದಲ್ಲೇ ಅತ್ಯಂತ ಕಡಿಮೆ ಪ್ರಮಾಣಕ್ಕೆ ಕುಸಿದಿದೆ. 2015-16ರಿಂದ ಇಂಜಿನಿಯರಿಂಗ್ ಕಾಲೇಜುಗಳನ್ನು ಮುಚ್ಚಲು ಸಂಸ್ಥೆಗಳು ನಿರಂತರವಾಗಿ ಅರ್ಜಿ ಸಲ್ಲಿಸುತ್ತಲೇ ಇವೆ.
ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ (ಎಐಸಿಟಿಇ) ಪ್ರಕಟಿಸಿದ ಇತ್ತೀಚಿನ ಅಂಕಿ ಅಂಶ ಪ್ರಕಾರ ಸ್ನಾತಕ, ಸ್ನಾತಕೋತ್ತರ ಮತ್ತು ಡಿಪ್ಲೊಮಾ ಮಟ್ಟದಲ್ಲಿ ಎಂಜಿನಿಯರಿಂಗ್ ಸೀಟ್ ಸಂಖ್ಯೆ 23.28 ಲಕ್ಷಕ್ಕೆ ಕುಸಿದಿದೆ. ಹತ್ತು ವರ್ಷಗಳಲ್ಲಿ ಇದು ಅತ್ಯಂತ ಕಡಿಮೆಯಾಗಿದೆ. ಸಂಸ್ಥೆಗಳ ಮುಚ್ಚುವಿಕೆ ಹಾಗೂ ಪ್ರವೇಶದಲ್ಲಿ ಕಡಿತವಾದ್ದರಿಂದ ಈ ವರ್ಷ 1.46 ಲಕ್ಷ ಸೀಟ್ ಕಡಿಮೆಯಾಗಿದೆ. ಸೀಟ್ ಸಂಖ್ಯೆಯಲ್ಲಿ ಗಣನೀಯ ಕುಸಿತವಾದರೂ ದೇಶದಲ್ಲಿ ತಾಂತ್ರಿಕ ಶಿಕ್ಷಣ ಕ್ಷೇತ್ರದ ಒಟ್ಟು ಸೀಟ್ಗಳಲ್ಲಿ ಎಂಜಿನಿಯರಿಂಗ್ ಕ್ಷೇತ್ರದ್ದೇ ಶೇಕಡ 80ರಷ್ಟು ಆಗಿದೆ. ಆರ್ಕಿಟೆಕ್ಚರ್, ಆಡಳಿತ ನಿರ್ವಹಣೆ, ಹೋಟೆಲ್ ಆಡಳಿತ ಮತ್ತು ಫಾರ್ಮಸಿ ಇವೇ ಮೊದಲಾದವು ಇತರ ತಾಂತ್ರಿಕ ಶಿಕ್ಷಣ ವಲಯಗಳಾಗಿವೆ.
32 ಲಕ್ಷ ಸೀಟ್: 2014-15 ಇಂಜಿನಿಯರಿಂಗ್ ಶಿಕ್ಷಣದ ಉಚ್ಛಾ ್ರು ವರ್ಷವಾಗಿತ್ತು. ಆ ವರ್ಷ ಎಐಸಿಟಿಟಿ ಅನುಮೋದಿತ ಎಲ್ಲ ಸಂಸ್ಥೆಗಳಲ್ಲಿ ಒಟ್ಟು ಸುಮಾರು 32 ಲಕ್ಷ ಸೀಟ್ ಇದ್ದವು. ಏಳು ವರ್ಷಗಳ ಹಿಂದೆ ಆರಂಭವಾದ ಕನ್ಸಾಲಿಡೇಷನ್ ಪ್ರಕ್ರಿಯೆ ಸೀಟ್ ಸಂಖ್ಯೆ ಕುಸಿತಕ್ಕೆ ಕಾರಣ ಎಂದು ಹೇಳಲಾಗುತ್ತಿದೆ. ಬೇಡಿಕೆ ಕುಸಿದಿದ್ದರಿಂದ ಇಂಜಿನಿಯರಿಂಗ್ ಕಾಲೇಜ್ಗಳು ಮುಚ್ಚುವ ಒತ್ತಡಕ್ಕೆ ಒಳಗಾಗಿವೆ. ಅಂದಿನಿಂದ ಸುಮಾರು 400 ಇಂಜಿನಿಯರಿಂಗ್ ಕಾಲೇಜ್ಗಳು ಚಟುವಟಿಕೆ ಸ್ಥಗಿತಗೊಳಿಸಿವೆ. ಕರೊನಾ ಸಾಂಕ್ರಾಮಿಕತೆಯಿಂದ ಸಮಸ್ಯೆ ಉಂಟಾದ ಕಳೆದ ವರ್ಷ ಹೊರತುಪಡಿಸಿದರೆ 2015-16ರಿಂದ ಪ್ರತಿ ವರ್ಷ ಸರಾಸರಿ 50 ಇಂಜಿನಿಯರಿಂಗ್ ಕಾಲೇಜ್ಗಳು ಮುಚ್ಚಿವೆ. ಈ ವರ್ಷ 63 ಕಾಲೇಜ್ ಮುಚ್ಚಲು ಎಐಸಿಟಿಇ ಅನುಮತಿ ಪಡೆದಿವೆ.
ಗುಣಮಟ್ಟ ಕುಸಿತ
ತಾಂತ್ರಿಕ ಶಿಕ್ಷಣದ ಗುಣಮಟ್ಟ ಕುಸಿದಿರುವುದು ಕೂಡ ಬೇಡಿಕೆ ಕುಸಿತಕ್ಕೆ ಒಂದು ಕಾರಣ ಎಂದು ಹೇಳಲಾಗುತ್ತಿದೆ. ಸಡಿಲ ನಿಯಂತ್ರಣ, ಭ್ರಷ್ಟಾಚಾರ, ಮೂಲಸೌಕರ್ಯ, ಲ್ಯಾಬ್, ಬೋಧಕರ ಕೊರತೆಯ ವಿಷಚಕ್ರ, ತರಗತಿಗಳಲ್ಲಿ ತಾಂತ್ರಿಕ ಶಿಕ್ಷಣದ ವಾತಾವರಣ ಕಲ್ಪಿಸುವಲ್ಲಿನ ವೈಫಲ್ಯ ಇವೇ ಮೊದಲಾದವು ಗುಣಮಟ್ಟ ಕುಸಿತಕ್ಕೆ ಕಾರಣಗಳು.
ಹೊಸ ಕಾಲೇಜು ಕಡಿಮೆ
ಹೊಸ ಇಂಜಿನಿಯರಿಂಗ್ ಕಾಲೇಜು ಸ್ಥಾಪನೆಯೂ ಐದು ವರ್ಷಗಳಲ್ಲೇ ಅತಿ ಕಡಿಮೆಯಾಗಿದೆ. 2020-21ರಿಂದ ಎರಡು ವರ್ಷ ಹೊಸ ಇಂಜಿನಿಯರಿಂಗ್ ಕಾಲೇಜ್ ಸ್ಥಾಪನೆಗೆ ನಿರ್ಬಂಧ ಹೇರಿ (ಮಾರಟೋರಿಯಂ) ಎಐಸಿಟಿಇ 2019ರಲ್ಲಿ ಆದೇಶ ಹೊರಡಿಸಿತ್ತು. ಐಐಟಿ-ಹೈದರಾಬಾದ್ ಅಧ್ಯಕ್ಷ ಬಿ.ವಿ.ಆರ್. ಮೋಹನ್ ರೆಡ್ಡಿ ನೇತೃತ್ವದ ಸರ್ಕಾರಿ ಸಮಿತಿಯೊಂದು ಮಾಡಿದ್ದ ಶಿಫಾರಸಿನ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ. ಆದರೂ 2021-22ನೇ ಶೈಕ್ಷಣಿಕ ವರ್ಷದಲ್ಲಿ 54 ಹೊಸ ಸಂಸ್ಥೆಗಳ ಆರಂಭಕ್ಕೆ ಅನುಮೋದನೆ ನೀಡಲಾಗಿದೆ ಎಂದು ಎಐಸಿಟಿಇ ಅಧ್ಯಕ್ಷ ಅನಿಲ್ ಸಹಸ್ರಬುದ್ಧೆ ತಿಳಿಸಿದ್ದಾರೆ. ಅವುಗಳು ಹಿಂದುಳಿದ ಜಿಲ್ಲೆಗಳಲ್ಲಿನ ಸಂಸ್ಥೆಗಳಾಗಿದ್ದು ಈಗಾಗಲೇ ಅನುಮತಿಗಾಗಿ ಕಾಯುತ್ತಿದ್ದವು ಹಾಗೂ ರಾಜ್ಯ ಸರ್ಕಾರಗಳು ಆರಂಭಿಸಲು ಬಯಸಿದ್ದ ಸಂಸ್ಥೆಗಳಾಗಿವೆ ಎಂದು ವಿವರಿಸಿದ್ದಾರೆ. ಮಾರಟೋರಿಯಂ ಜಾರಿಗೆ ಬರುವ ಹಿಂದಿನ ವರ್ಷಗಳಲ್ಲಿ 143 (2017-18), 158 (2018-19) ಮತ್ತು 153 (2019-20) ಎಂಜಿನಿಯರಿಂಗ್ ಕಾಲೇಜ್ಗಳ ಸ್ಥಾಪನೆಗೆ ಮಂಡಳಿ ಪರವಾನಗಿ ನೀಡಿತ್ತು.