ನ್ಯೂಸ್

ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ 'ಗೋಮಾಂಸ' ಅಡುಗೆ ಮಾಡಿದ ವಿದ್ಯಾರ್ಥಿಗಳು! ಬಳಿಕ ಏನಾಯ್ತು ನೋಡಿ

ಭುವನೇಶ್ವರ: ಒಡಿಶಾದ ಬರ್ಹಾಂಪುರ ಜಿಲ್ಲೆಯ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಆವರಣದಲ್ಲಿ ಗೋಮಾಂಸ ತಂದು ಅಡುಗೆ ಮಾಡಿದ ಆರೋಪದ ಮೇಲೆ ಏಳು ವಿದ್ಯಾರ್ಥಿಗಳನ್ನು ಹೊರಹಾಕಲಾಗಿದೆ.

ಬರ್ಹಾಂಪುರದ ಪಾರಾಲ ಮಹಾರಾಜ ಎಂಜಿನಿಯರಿಂಗ್ ಕಾಲೇಜು ಹಾಸ್ಟೆಲ್​ನ ಕೊಠಡಿಯಲ್ಲಿ ಗೋಮಾಂಸದ ಅಡುಗೆ ಮಾಡಿ ತಿಂದಿರುವ ವಿದ್ಯಾರ್ಥಿಗಳ ವಿರುದ್ಧ ಅವರ ಪೋಷಕರಿಗೆ ತಿಳಿಸಲಾಗಿತ್ತು. ನಿರ್ಬಂಧಿತ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಕ್ಕಾಗಿ ಕಾಲೇಜು ಹಾಸ್ಟೆಲ್​ನಿಂದ ವಿದ್ಯಾರ್ಥಿಗಳನ್ನು ಹೊರಹಾಕಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ವಿದ್ಯಾರ್ಥಿಗಳು ಬುಧವಾರ ತಮ್ಮ ಹಾಸ್ಟೆಲ್ ಕೋಣೆಯಲ್ಲಿ ಗೋಮಾಂಸವನ್ನು ಬೇಯಿಸಿ, ಸಂಸ್ಥೆಯ ನಿಯಮ ಮತ್ತು ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಾರೆ. ಇವರಲ್ಲಿ ಒಬ್ಬ ವಿದ್ಯಾರ್ಥಿಗೆ 2ಸಾವಿರ ರೂಪಾಯಿ ದಂಡ ಸಹ ವಿಧಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಈ ಅಕ್ರಮ ಚಟುವಟಿಕೆ ಬಗ್ಗೆ ವಿದ್ಯಾರ್ಥಿಗಳ ಮತ್ತೊಂದು ಗುಂಪು ಪ್ರಾಂಶುಪಾಲರಿಗೆ ದೂರು ನೀಡಿತ್ತು. ಅದರಂತೆ ವಿಚಾರಣೆಯ ನಂತರ ವಿದ್ಯಾರ್ಥಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.

ತಪ್ಪಿತಸ್ಥ ವಿದ್ಯಾರ್ಥಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಬಜರಂಗದಳ ಮತ್ತು ವಿಎಚ್‌ಪಿ ಕಾರ್ಯಕರ್ತರು ಒತ್ತಾಯಿಸಿದ್ದರು.