ಶಿಕಾರಿಪುರದ ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆಯಿಂದ ಏರ್ಪಡಿಸಿದ್ದ ಶಿಕ್ಷಕರ ದಿನಾಚರಣೆಯನ್ನು ಶಾಸಕ ಬಿ.ವೈ.ವಿಜಯೇಂದ್ರ ಉದ್ಘಾಟಿಸಿದರು. ಕೆ.ಕುಬೇರಪ್ಪ, ಎಂ.ಬಿ.ಶಿವಕುಮಾರ್ ಇತರರಿದ್ದರು. 
ನ್ಯೂಸ್

ಹೊಸ ವಿಷಯಗಳ ಅಧ್ಯಯನದಲ್ಲಿ ತೊಡಗಿಸಿಕೊಳ್ಳಿ

ಶಿಕಾರಿಪುರ: ಗುರು ಪರಂಪರೆಗೆ ವಿಶೇಷ ಗೌರವ ನೀಡುವ ದೇಶ ನಮ್ಮದು. ವಿದ್ಯಾರ್ಥಿಗಳಲ್ಲಿ ಸದ್ವಿಚಾರ ಮೂಡಿಸುವ ಶಿಕ್ಷಕ ವೃತ್ತಿ ಸೇವೆಯು ಅತ್ಯಂತ ಶ್ರೇಷ್ಠ ಎಂದು ಶಾಸಕ ಬಿ.ವೈ.ವಿಜಯೇಂದ್ರ ಹೇಳಿದರು.

ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆಯಿಂದ ಏರ್ಪಡಿಸಿದ್ದ ಶಿಕ್ಷಕರ ದಿನಾಚರಣೆ ಉದ್ಘಾಟಿಸಿ ಮಾತನಾಡಿ, ಶಿಕ್ಷಕರು ಹೊಸ ವಿಷಯಗಳ ಬಗ್ಗೆ ಹೆಚ್ಚು ಅಧ್ಯಯನಶೀಲರಾಗಬೇಕು. ಇದರಿಂದ ಮಕ್ಕಳಿಗೆ ಆಧುನಿಕ ಸಂಗತಿಗಳ ಕುರಿತು ಅರಿವು ಮೂಡಿಸಲು ಸಹಕಾರಿಯಾಗುತ್ತದೆ ಎಂದು ತಿಳಿಸಿದರು.

ಮಕ್ಕಳಿಗೆ ಶಿಕ್ಷಣದ ಜತೆಯಲ್ಲಿ ರಾಷ್ಟ್ರೀಯ ಚಿಂತನೆ, ಸದ್ವಿಚಾರ ಹಾಗೂ ಸಂಸ್ಕಾರ ಕಲಿಸಬೇಕು. ಉತ್ತಮ ಪ್ರಜೆಗಳನ್ನು ರೂಪಿಸುವ ಮಹತ್ತರ ಜವಾಬ್ದಾರಿ ಶಿಕ್ಷಕರ ಮೇಲಿರುತ್ತದೆ. ಎಂತಹ ಕಷ್ಟದ ಸನ್ನಿವೇಶ ಎದುರಾದರೂ ಸಮರ್ಥವಾಗಿ ಎದುರಿಸುವ ಮನೋಭಾವ ಬೆಳೆಸಬೇಕು. ಸಕಾರಾತ್ಮಕ ಆಲೋಚನೆಗಳನ್ನು ಮಕ್ಕಳಿಗೆ ಕಲಿಸಬೇಕು ಎಂದರು.

ಸಂಸ್ಥೆಯ ಆಡಳಿತ ಸಮನ್ವಯಾಧಿಕಾರಿ ಕೆ.ಕುಬೇರಪ್ಪ ಮಾತನಾಡಿ, ಸಂಸ್ಥೆಯು ಎಲ್ಲ ಶಾಲಾ ಕಾಲೇಜುಗಳಲ್ಲಿ ಉತ್ತಮ ಫಲಿತಾಂಶ ಬರುವಲ್ಲಿ ಶಿಕ್ಷಕರು ಹೆಚ್ಚಿನ ಶ್ರಮವಹಿಸಿ ಕೆಲಸ ಮಾಡುತ್ತಿದ್ದಾರೆ. ಶಿಕ್ಷಣದ ಜತೆಯಲ್ಲಿ ಜೀವನ ಮೌಲ್ಯಗಳ ಬಗ್ಗೆ ಮಕ್ಕಳಿಗೆ ಕಲಿಸಲಾಗುತ್ತದೆ ಎಂದು ತಿಳಿಸಿದರು.

ಕುಮದ್ವತಿ ಶಿಕ್ಷಣ ಮಹಾವಿದ್ಯಾಲಯ ಪ್ರಾಚಾರ್ಯ ಡಾ. ಜಿ.ಎಸ್.ಶಿವಕುಮಾರ್ ಬರೆದಿರುವ ಶೈಕ್ಷಣಿಕ ತಂತ್ರಜ್ಞಾನ 1, ಡಾ. ರವಿ ಮತ್ತು ಡಾ. ಕೆ.ಎಸ್.ಕಿರಣ್‌ಕುಮಾರ್ ಬರೆದಿರುವ ಯುಜಿಸಿ-ಎನ್‌ಇಟಿ 2015-2019ರವರೆಗಿನ ಪ್ರಶ್ನೆಪತ್ರಿಕೆ ಕ್ರಿಡಿಕರಣ ಮತ್ತು ಉತ್ತರಿಸುವಿಕೆ, ಶಿಕ್ಷಣ ಮಹಾವಿದ್ಯಾಲಯದ ದೈಹಿಕ ಶಿಕ್ಷಣ ನಿರ್ದೇಶಕ ಎನ್.ಜಿ.ರವಿಕುಮಾರ್ ಬರೆದಿರುವ ದೈಹಿಕ ಮತ್ತು ಆರೋಗ್ಯ ಶಿಕ್ಷಣ ಪುಸ್ತಕಗಳನ್ನು ಬಿಡುಗಡೆಗೊಳಿಸಲಾಯಿತು.

ಸಂಸ್ಥೆಯಲ್ಲಿ 15 ವರ್ಷಗಳಿಂದ ಸೇವೆ ಸಲ್ಲಿಸಿದ ಭೋದಕ ಹಾಗೂ ಭೋದಕೇತರ ವರ್ಗದವರಿಗೆ ಸೇವಾ ಸಿರಿ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಸಂಸ್ಥೆ ಅಧ್ಯಕ್ಷ ಎಂ.ಬಿ.ಶಿವಕುಮಾರ್, ಡಾ. ಜಿ.ಎಸ್.ಶಿವಕುಮಾರ ಇತರರಿದ್ದರು.