ಕುದ್ಮಲ್ ರಂಗರಾವ್ ಪುಸ್ತಕ ಕುರಿತ ಚರ್ಚೆ ಹಾಗೂ ಉಪನ್ಯಾಸ ಕಾರ್ಯಕ್ರಮವನ್ನು ಕುವೆಂಪು ವಿವಿ ಕುಲಪತಿ ಪ್ರೊ. ಶರತ್ ಅನಂತಮೂರ್ತಿ ಉದ್ಘಾಟಿಸಿದರು. ಡಾ. ಸಿರಾಜ್ ಅಹಮ್ಮದ್, ಸುಧೀರ್‌ಕುಮಾರ್ ಮುರೊಳ್ಳಿ, ಡಾ. ಪಿ.ಚಂದ್ರಿಕಾ ಇತರರಿದ್ದರು. 
ನ್ಯೂಸ್

ಪುಸ್ತಕಗಳ ಅಧ್ಯಯನದಲ್ಲಿ ತೊಡಗಿಸಿಕೊಳ್ಳಿ

ಅರವಿಂದ ಅಕ್ಲಾಪುರ

ಶಿವಮೊಗ್ಗ: ವಿದ್ಯಾರ್ಥಿಗಳಿಗೆ ತೌಲನಿಕ ಅಧ್ಯಯನ ಬಹಳ ಮುಖ್ಯ. ವಿದ್ಯಾರ್ಥಿಗಳು ತರಗತಿಯಲ್ಲಿ ಪಾಠ ಕೇಳುವುದೇ ಮುಖ್ಯವಲ್ಲ, ಪುಸ್ತಕಗಳನ್ನೂ ಓದಬೇಕು. ತೌಲನಿಕ ಅಧ್ಯಯನ ನಡೆಸಬೇಕು ಎಂದು ಕುವೆಂಪು ವಿವಿ ಕುಲಪತಿ ಪ್ರೊ. ಶರತ್ ಅನಂತಮೂರ್ತಿ ಹೇಳಿದರು.

ಕರ್ನಾಟಕ ಸಾಹಿತ್ಯ ಅಕಾಡೆಮಿ, ಚಕೋರ ಸಾಹಿತ್ಯ ವೇದಿಕೆ, ಸಹ್ಯಾದ್ರಿ ಕಲಾ ಕಾಲೇಜಿನಿಂದ ಬುಧವಾರ ಏರ್ಪಡಿಸಿದ್ದ ಬಹುಮುಖಿ ಪ್ರಕಾಶನದ ‘ನೀವು ಕಂಡರಿಯದ ಕುದ್ಮಲ್ ರಂಗರಾವ್’ ಪುಸ್ತಕ ಕುರಿತ ಚರ್ಚೆ ಹಾಗೂ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸ್ಥಳೀಯ ಪ್ರದೇಶದಲ್ಲಿ ನಮ್ಮನ್ನು ತೊಡಗಿಸಿಕೊಳ್ಳುವ ಮೂಲಕ ಹೊರ ಜಗತ್ತಿಗೆ ತೆರೆದುಕೊಳ್ಳಬೇಕು. ಕುವೆಂಪು ವಿವಿಯಲ್ಲಿ ನಡೆಯುವ ಸಾಹಿತ್ಯ ಕಾರ್ಯಕ್ರಮಗಳಿಗಿಂತ ಹೆಚ್ಚು ಕಾರ್ಯಕ್ರಮಗಳು ಸಹ್ಯಾದ್ರಿ ಕಾಲೇಜಿನಲ್ಲಿಯೇ ನಡೆಯುತ್ತಿರುವುದು ಶ್ಲಾಘನೀಯ ಎಂದರು.

ಕುದ್ಮಲ್ ರಂಗರಾವ್ ಪುಸ್ತಕ ಕುರಿತು ವಿಶೇಷ ಉಪನ್ಯಾಸ ನೀಡಿದ ವಕೀಲ ಸುಧೀರ್‌ಕುಮಾರ್ ಮುರೊಳ್ಳಿ, ಕುದ್ಮಲ್ ರಂಗರಾವ್ ಸಮಾಜ ಸುಧಾರಕರು. ಹಿಂದು ಧರ್ಮದಲ್ಲಿನ ಮೌಢ್ಯಗಳನ್ನು ತೊಡೆದುಹಾಕಲು ಹೋರಾಟ ಮಾಡಿದ್ದರು ಎಂದು ಹೇಳಿದರು.

ಜಾತ್ಯತೀತ ಎನ್ನುವುದು ವಿದೇಶದಿಂದ ಬಂದಿದ್ದಲ್ಲ. ಇದು ಈ ನೆಲದಲ್ಲೇ ಹುಟ್ಟಿದ್ದು. ಒಡೆದಾಳುವ ಮಾತು ಬಿಟ್ಟು ಒಂದಾಗುವ ಮಾತುಗಳು ಒಬ್ಬ ವ್ಯಕ್ತಿಯ ಶ್ರೇಷ್ಠತೆ ಬೆಳೆಸುತ್ತದೆ. ಜಾತಿ ಕೆಡುಕುಗಳನ್ನು ದೂರ ಮಾಡಲು ರಂಗರಾವ್ ಬಂಡಾಯವನ್ನೇ ಸಾರಿದರು. ದಲಿತರಿಗೆ ಶಿಕ್ಷಣ ನೀಡಿದ್ದಕ್ಕೆ ಅವಮಾನ ಎದುರಿಸಿದರು. ಇಂತಹ ವ್ಯಕ್ತಿಗಳ ಪುಸ್ತಕಗಳನ್ನು ವಿದ್ಯಾರ್ಥಿಗಳು ಓದಬೇಕು ಎಂದು ತಿಳಿಸಿದರು.

ಸಹ್ಯಾದ್ರಿ ಕಲಾ ಕಾಲೇಜಿನ ಪ್ರಾಚಾರ್ಯ ಡಾ. ಸಿರಾಜ್ ಅಹಮ್ಮದ್, ಸಾಹಿತ್ಯ ಅಕಾಡೆಮಿ ಸದಸ್ಯೆ ಡಾ. ಪಿ.ಚಂದ್ರಿಕಾ, ಸಂಚಾಲಕ ಶಂಕರ್ ಸಿಹಿಮೊಗ್ಗೆ, ವಿದ್ಯಾರ್ಥಿ ಕ್ಷೇಮಾಧಿಕಾರಿ ಡಾ. ಕೆ.ಎನ್.ಮಂಜುನಾಥ್, ಡಾ. ಮಹಾದೇವಸ್ವಾಮಿ, ಡಾ. ಪ್ರಸನ್ನಕುಮಾರ್, ಡಾ. ಎಂ.ಹೆಚ್. ಪ್ರಹ್ಲಾದಪ್ಪ ಇದ್ದರು.