ನವದೆಹಲಿ: ಜಾಗತಿಕ ಆರ್ಥಿಕ ಸಂಕಷ್ಟದ ನಡುವೆ ಇಂದು ಮಂಡನೆಯಾಗುತ್ತಿರುವ ಕೇಂದ್ರ ಬಜೆಟ್ ಮೇಲೆ ವಿಶ್ವದ ದೃಷ್ಟಿ ನೆಟ್ಟಿದೆ. ದೇಶದಲ್ಲಿ ಬೆಲೆ ಏರಿಕೆಗಳಿಂದ ತತ್ತರಿಸುವ ಜನ ಸಾಮಾನ್ಯರ ನಿರೀಕ್ಷೆ ಹೆಚ್ಚಾಗಿದ್ದು, ಇನ್ನು ಕೆಲವೇ ಕ್ಷಣಗಳಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡನೆ ಮಾಡಲಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಸರ್ಕಾರದ 10ನೇ ಪೂರ್ಣ ಪ್ರಮಾಣದ ಬಜೆಟ್ ಇದಾಗಿದ್ದು, ವಿತ್ತ ಸಚಿವೆಯಾಗಿ ನಿರ್ಮಲಾ ಸೀತಾರಾಮನ್ ಅವರು ಮಂಡಿಸುತ್ತಿರುವ 5ನೇ ಬಜೆಟ್ ಆಗಿದೆ. ಈ ಬಾರಿಯು ಸೂಟ್ಕೇಸ್ ಸಂಪ್ರದಾಯವಿಲ್ಲ ಮತ್ತು ಮುದ್ರಣದ ಪ್ರತಿಗಳು ಇರುವುದಿಲ್ಲ. ಕಳೆದ ಬಾರಿಯಂತೆ ಇ ಬಜೆಟ್ ಮಂಡನೆಯಾಗಲಿದೆ. ಕಳೆದ ಬಾರಿಯಂತೆ “ಬಹಿ ಖಾತಾ” ಸಂಪ್ರದಾಯವನ್ನು ಬದಿಗಿಟ್ಟು ಟ್ಯಾಬ್ ಮೂಲಕ ಆಯವ್ಯಯ ಮಂಡನೆ ಮಾಡಲಿದ್ದಾರೆ.
ಇಂದೆಲ್ಲ ಬಜೆಟ್ ಪ್ರತಿಗಳಿದ್ದ ಸೂಟ್ಕೇಸ್ ಹಿಡಿದುಕೊಂಡು ಸಂಸತ್ತಿಗೆ ಆಗಮಿಸಲಾಗುತ್ತಿತ್ತು. ಸೂಟ್ಕೇಸ್ ವಿದೇಶಿ ಸಂಸ್ಕೃತಿ ಆಗಿದ್ದರಿಂದ ಅದಕ್ಕೆ ಗುಡ್ಬೈ ಹೇಳಿದ್ದ ನಿರ್ಮಲಾ ಸೀತಾರಾಮನ್ ಸಾಂಪ್ರದಾಯಿಕ “ಬಹಿ ಖಾತಾ” ಹಿಡಿದು ಸಂಸತ್ತಿಗೆ ಆಗಮಿಸುವ ಮೂಲಕ ಹೊಸ ಪದ್ಧತಿಗೆ ನಾಂದಿ ಹಾಡಿದ್ದರು.
2021ರಲ್ಲಿ ಬಹಿ ಖಾತಾ ಪದ್ಧತಿಗೆ ಆಧುನಿಕ ಸ್ಪರ್ಶ ನೀಡಿದ್ದ ನಿರ್ಮಲಾ ಸೀತಾರಾಮನ್ ಬಜೆಟ್ ಅನ್ನು ಟ್ಯಾಬ್ ಮೂಲಕ ಮಂಡನೆ ಮಾಡಿದ್ದರು. ಈ ಮೂಲಕ ಬಜೆಟ್ಗೆ ಡಿಜಿಟಲ್ ಸ್ಪರ್ಶ ನೀಡಿದ್ದರು. ಅಲ್ಲದೆ, ಮೊದಲ ಬಾರಿಗೆ ಕಾಗದರಹಿತ ಬಜೆಟ್ ಮಂಡನೆ ಮಾಡಿದ ಹೆಸರಿಗೆ ಪಾತ್ರರಾದರು. ಈ ಬಾರಿಯು ಅದನ್ನೆ ಮುಂದುವರಿಸಿರುವ ನಿರ್ಮಲಾ ಸೀತಾರಾಮನ್ ಟ್ಯಾಬ್ ಮೂಲಕ ಬಜೆಟ್ ಮಂಡನೆ ಮಾಡಲಿದ್ದಾರೆ. (ಏಜೆನ್ಸೀಸ್)