ನ್ಯೂಸ್

ನಾಸಿಕ ಔಷಧದಿಂದ ಕರೊನಾ ಅಂತ್ಯ

ವಾಷಿಂಗ್ಟನ್: ಕರೊನಾದ ವಿವಿಧ ತಳಿಗಳನ್ನು ಪರಿಣಾಮಕಾರಿಯಾಗಿ ತಡೆಯುವ ಶಕ್ತಿ ನಾಸಿಕ ಔಷಧಕ್ಕೆ ಇದೆ ಎಂದು ಅಮೆರಿಕದ ವರ್ಜೀನಿಯಾ ವಿಶ್ವವಿದ್ಯಾಲಯದ ಸಂಶೋಧಕರು ಹೇಳಿದ್ದಾರೆ.

ಸೋಂಕು ತಡೆಗೆ ಲಭ್ಯವಿರುವ ಲಸಿಕೆಗಳನ್ನು ಪಡೆಯುವುದರಿಂದ ಗಂಭೀರವಾಗಿ ರೋಗ ಪೀಡಿತರಾಗುವುದನ್ನು ತಡೆಯಬಹುದು. ಆದರೆ, ಇದರಿಂದ ಸೋಂಕು ಹರಡದಂತೆ ಪರಿಣಾಮಕಾರಿಯಾಗಿ ತಡೆಯಲು ಆಗುವುದಿಲ್ಲ. ಹೀಗಾಗಿ ರೂಪಾಂತರಗೊಳ್ಳುವ ತಳಿಗಳಿಗೆ ಕಡಿವಾಣ ಹಾಕಬೇಕಿದ್ದರೆ ನಾಸಿಕ ಔಷಧ ಅವಶ್ಯಕ ಎಂದು ಅಧ್ಯಯನಕಾರರು ಅಭಿಪ್ರಾಯಪಟ್ಟಿದ್ದಾರೆ. ಈ ಅಧ್ಯಯನ ವರದಿಯು ‘ಸೈನ್ಸ್ ಇಮ್ಯುನಾಲಜಿ’ಯಲ್ಲಿ ಪ್ರಕಟವಾಗಿದೆ.

ದೀರ್ಘಕಾಲೀನ ಅಡ್ಡ ಪರಿಣಾಮ: ಕೋವಿಡ್ ಸೋಂಕಿಗೆ ಒಳಗಾದವರ ಪೈಕಿ ಶೇ. 10ರಿಂದ 20ರಷ್ಟು ಜನರಿಗೆ ಮಧ್ಯಮಕಾಲದಿಂದ ಹಿಡಿದು ದೀರ್ಘ ಕಾಲದವರೆಗಿನ ಅಡ್ಡಪರಿಣಾಮಗಳು ಕಾಡಿವೆ ಎಂದು ಸರ್ಕಾರ ಲೋಕಸಭೆಗೆ ಶುಕ್ರವಾರ ತಿಳಿಸಿದೆ. ಕೋವಿಡ್ ನಂತರದ ಪರಿಸ್ಥಿತಿ ಕುರಿತಂತೆ 2021ರ ರಾಷ್ಟ್ರೀಯ ಸಮಗ್ರ ಮಾರ್ಗಸೂಚಿಯನ್ನು ಬಿಡುಗಡೆ ಮಾಡಲಾಗಿದ್ದು, ಅದರಲ್ಲಿ ಈ ಅಂಶಗಳನ್ನು ವಿವರಿಸಲಾಗಿದೆ ಎಂದು ಆರೋಗ್ಯ ಖಾತೆ ರಾಜ್ಯ ಸಚಿವೆ ಭಾರತಿ ಪ್ರವೀಣ್ ಪವಾರ್ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಕೋವಿಡ್​ನಿಂದ ಚೇತರಿಸಿಕೊಂಡವರು ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ. ಆದರೆ, 10ರಿಂದ 20ರಷ್ಟು ಮಂದಿ ಈಗಲೂ ಇನ್ನಿತರ ಪರಿಣಾಮಗಳಿಗೆ ಒಳಗಾಗುತ್ತಿದ್ದಾರೆ ಎಂದು ಸಚಿವೆ ಮಾಹಿತಿ ನೀಡಿದ್ದಾರೆ.

ದೈನಿಕ ಸಾವು 60ಕ್ಕೆ: ಭಾರತದಲ್ಲಿ ಶುಕ್ರವಾರ 60 ಮಂದಿ ಸಾವನ್ನಪ್ಪಿದ್ದು, ಒಟ್ಟು ಮೃತರ ಸಂಖ್ಯೆ 5,25,930ಕ್ಕೆ ಏರಿದೆ. 24 ತಾಸಿನಲ್ಲಿ ಹೊಸದಾಗಿ ಸೋಂಕಿಗೆ ಪೀಡಿತರಾದವರ ಸಂಖ್ಯೆ 21,880 ಇದ್ದು, ಒಟ್ಟು ಸೋಂಕಿತರ ಸಂಖ್ಯೆ 4,38,47,065ಕ್ಕೆ ಮುಟ್ಟಿದೆ. ಇದರಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ಶೇ. 0.34 ಇದ್ದರೆ, ಚೇತರಿಕೆ ಪ್ರಮಾಣ ಶೇ. 98.46 ಇದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ.