ಬೆಂಗಳೂರು: ಐಟಿ ದಾಳಿಯ ವೇಳೆ ರಾಜ್ಯ ಗುತ್ತಿಗೆದಾರರ ಸಂಘದ ಉಪಾಧ್ಯಕ್ಷ ಆರ್.ಅಂಬಿಕಾಪತಿ ಅವರ ಫ್ಲ್ಯಾಟ್‌ನಲ್ಲಿ 42 ಕೋಟಿ ರೂ. ಪತ್ತೆಯಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಆದಾಯತೆರಿಗೆ (ಐಟಿ) ಅಧಿಕಾರಿಗಳಿ ಅಂಬಿಕಾಪತಿ ಮನೆಯಲ್ಲಿ ನಡೆಸುತ್ತಿದ್ದ ಶೋಧ ಕಾರ್ಯಾಚರಣೆ ಶನಿವಾರ ಅಂತ್ಯಗೊಂಡಿದ್ದು, ಅಂಬಿಕಾಪತಿ ಕುಟುಂಬದ ಜತೆ ಹಣಕಾಸು ವ್ಯವಹಾರದ ನಂಟು ಹೊಂದಿರುವ ಪ್ರಭಾವಿ ರಾಜಕಾರಣಿಗಳ ಎದೆಯಲ್ಲಿ ನಡುಕ ಶುರುವಾಗಿದೆ.
ಅಂಬಿಕಾಪತಿ ಮತ್ತು ಅವರ ಪತ್ನಿ ಹಾಗೂ ಮಾಜಿ ಕಾಪೋರೇಟರ್ ಅಶ್ವತ್ಥಮ್ಮ, ಮಕ್ಕಳಿಗೆ ಸೇರಿದ ಮನೆ, ಫ್ಲ್ಯಾಟ್‌ಗಳಲ್ಲಿ ಗುರುವಾರದಿಂದ ಸತತ 48 ತಾಸು ಶೋಧ ನಡೆಸಿದ ಐಟಿ ಅಧಿಕಾರಿಗಳು ಮಹತ್ವದ ದಾಖಲೆಪತ್ರಗಳನ್ನು ಜಪ್ತಿ ಮಾಡಿ ಶನಿವಾರ ಸಂಜೆ ಪಂಚನಾಮೆ ಪ್ರಕ್ರಿಯೆ ಪೂರ್ಣಗೊಳಿಸಿದರು.
ತನಿಖೆ ಚುರುಕು:
ಸುಲ್ತಾನ್‌ಪಾಳ್ಯ ಬಳಿಯ ಆತ್ಮಾನಂದ ಕಾಲನಿಯಲ್ಲಿರುವ ಅಂಬಿಕಾಪತಿ ಅವರಿಗೆ ಸೇರಿದ ಫ್ಲ್ಯಾಟ್‌ನಲ್ಲಿ ೪೨ ಕೋಟಿ ರೂ. ಸಿಕ್ಕಿರುವ ಸಂಬಂಧ ಐಟಿ ಅಧಿಕಾರಿಗಳು ತನಿಖೆ ಚುರುಕುಗೊಳಿಸಿದ್ದಾರೆ. ಮಾನ್ಯತಾ ಟೆಕ್‌ಪಾರ್ಕ್ ಬಳಿಯ ಅಂಬಿಕಾಪತಿ ಅವರ ನಿವಾಸದ ಲಾಕರ್‌ನಲ್ಲಿ ಎರಡು ಸೂಟ್‌ಕೇಸ್‌ಗಳು ಸಿಕ್ಕಿದ್ದು, ಅವುಗಳಲ್ಲಿ ಅಪಾರ ಪ್ರಮಾಣದ ಆಸ್ತಿ ಪತ್ರಗಳು, ಹಣಕಾಸು ವ್ಯವಹಾರಕ್ಕೆ ಸಂಬಂಧಿಸಿದ ದಾಖಲೆಗಳು ಪತ್ತೆಯಾಗಿವೆ. ಜತೆಗೆ, ೪೨ ಕೋಟಿ ರೂ.ಗಳಿಗೆ ಸಂಬಂಧಪಟ್ಟಂತೆ ಕೆಲ ರಾಜಕಾರಣಿಗಳು, ಗುತ್ತಿಗೆದಾರರು ಮತ್ತು ಮಧ್ಯವರ್ತಿಗಳ ಹೆಸರಿರುವ ಚೀಟಿಗಳು ಸಿಕ್ಕಿವೆ. ಈ ಹಣವನ್ನು ಯಾರಿಂದ ಸಂಗ್ರಹಿಸಲಾಗಿದೆ ಮತ್ತು ಯಾರಿಗೆ ಹಣ ತಲುಪಿಸಬೇಕಿತ್ತು ಎಂಬ ಮಾಹಿತಿ ಚೀಟಿಗಳಲ್ಲಿದೆ ಎಂದು ಮೂಲಗಳು ತಿಳಿಸಿವೆ.
ನೋಟಿಸ್ ಜಾರಿಗೊಳಿಸಿದ ಐಟಿ:
ದಾಳಿ ವೇಳೆ ಪತ್ತೆಯಾಗಿರುವ ೪೨ ಕೋಟಿ ರೂ.ಗೆ ಸಂಬಂಧಪಟ್ಟಂತೆ ಸೂಕ್ತ ದಾಖಲಾತಿಗಳೊಂದಿಗೆ ಮಂಗಳವಾರ (ಅ.೧೭) ವಿಚಾರಣೆಗೆ ಹಾಜರಾಗುವಂತೆ ಐಟಿ ಅಧಿಕಾರಿಗಳು, ಅಂಬಿಕಾಪತಿ ದಂಪತಿಯ ಪುತ್ರರಾದ ಪ್ರದೀಪ್ ಮತ್ತು ಪ್ರತಾಪ್ ಅವರಿಗೆ ನೋಟಿಸ್ ಜಾರಿ ಮಾಡಿದ್ದಾರೆ. ಪ್ರದೀಪ್ ಮತ್ತು ಮತ್ತೊಬ್ಬ ಪುತ್ರ ಮೆಟ್ರೋ ಕಾರ್ಪ್ ಕಂಪನಿಯ ಪಾಲುದಾರರಾಗಿದ್ದಾರೆ. ಇಷ್ಟು ದೊಡ್ಡ ಮೊತ್ತದ ಹಣಕ್ಕೆ ಸಂಬಂಧಪಟ್ಟಂತೆ ಅಂಬಿಕಾಪತಿ ಕುಟುಂಬವು ದಾಖಲೆ ಸಮೇತ ಲೆಕ್ಕ ಕೊಡಬೇಕಿದೆ. ಒಂದೊಮ್ಮೆ ದಾಖಲೆ ಕೊಡಲು ವಿಲವಾದರೆ ಬಂಧನವಾಗುವ ಸಾಧ್ಯತೆಯೂ ಇದೆ.
ಹಣದ ಮೂಲದ ಬಗ್ಗೆ ತನಿಖೆ:
೪೨ ಕೋಟಿ ರೂ. ಹಣದ ಮೂಲವನ್ನು ಕೆದಕಲು ಅಧಿಕಾರಿಗಳು ತನಿಖೆಯನ್ನು ಮತ್ತಷ್ಟು ತೀವ್ರಗೊಳಿಸಲಿದ್ದಾರೆ. ಎಲ್ಲಿಂದ ಹಣ ಬಂತು? ಈ ಹಣ ಯಾರದ್ದು? ಎಲ್ಲಿಗೆ ಸಾಗಿಸಲು ಸಿದ್ಧತೆ ನಡೆದಿತ್ತು ಎಂಬುದರ ಬಗ್ಗೆ ಎಲ್ಲಾ ಆಯಾಮದಲ್ಲಿ ತನಿಖೆ ನಡೆಯಲಿದೆ. ಲಾಕರ್‌ನಲ್ಲಿ ಸಿಕ್ಕಿರುವ ಚೀಟಿಗಳಲ್ಲಿ ನಮೂದಾಗಿರುವ ರಾಜಕಾರಣಿಗಳು, ಗುತ್ತಿಗೆದಾರರು, ಮಧ್ಯವರ್ತಿಗಳಿಗೂ ನೋಟಿಸ್ ನೀಡಲು ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ.
ಇದು ಹವಾಲ ಹಣವಲ್ಲ:
ನೋಟಿಸ್ ಸಂಬಂಧ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿರುವ ಅಂಬಿಕಪತಿ ಪುತ್ರ ಪ್ರದೀಪ್, ‘‘೧೫ ವರ್ಷಗಳಿಂದ ರಿಯಲ್ ಎಸ್ಟೇಟ್ ಹಾಗೂ ಬೇರೆ ವ್ಯವಹಾರ ಮಾಡುತ್ತಿದ್ದೇವೆ. ಹಣಕ್ಕೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ಐಟಿ ಅಧಿಕಾರಿಗಳಿಗೆ ಸಲ್ಲಿಸಿ ಹಣವನ್ನು ಬಿಡಿಸಿಕೊಳ್ಳುತ್ತೇವೆ. ಅದು ಹವಾಲ ಹಣವಲ್ಲ, ನಮ್ಮ ವ್ಯವಹಾರಕ್ಕೆ ಸಂಬಂಧಿಸಿದ್ದು. ಆ ಹಣಕ್ಕೆ ಸಂಬಂಧಪಟ್ಟಂತೆ ಅನಗತ್ಯವಾಗಿ ನಮ್ಮ ತಂದೆಯ ಹೆಸರು ಎಳೆದು ತರುವುದು ಬೇಡ. ಮಂಗಳವಾರ ಅಧಿಕಾರಿಗಳ ಎದುರು ವಿಚಾರಣೆಗೆ ಹಾಜರಾಗಿ ಸೂಕ್ತ ದಾಖಲೆ ಒದಗಿಸುತ್ತೇವೆ ಎಂದು ಹೇಳಿದ್ದಾರೆ.