ಅರಸೀಕೆರೆ (ಗ್ರಾಮಾಂತರ): ಬಾಲಕಾರ್ಮಿಕ ಪದ್ಧತಿ ಸಮಾಜದಲ್ಲಿ ಒಂದು ಕಳಂಕವಾಗಿದೆ. ಈ ವ್ಯವಸ್ಥೆಯಿಂದ ಮಕ್ಕಳನ್ನು ದೂರವಿಟ್ಟು ಗುಣಮಟ್ಟದ ಶಿಕ್ಷಣ ನೀಡುವುದರೊಂದಿಗೆ ಉತ್ತಮ ಪ್ರಜೆಗಳನ್ನಾಗಿ ರೂಪಿಸುವಲ್ಲಿ ಎಲ್ಲರ ಜವಬ್ದಾರಿಯೊಂದಿಗೆ ಕರ್ತವ್ಯ ಕೂಡ ಆಗಿದೆ ಎಂದು ಕಾನೂನು ಸೇವಾ ಸಮಿತಿ ಅಧ್ಯಕ್ಷರು ಆದ ಹಿರಿಯ ಸಿವಿಲ್ ನ್ಯಾಯಾಧೀಶ ಕಿರಣ್‌ಕುಮಾರ್ ಡಿ.ವಡಿಗೇರಿ ಹೇಳಿದರು.
ತಾಲೂಕಿನ ಮುದ್ದನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜಿಲ್ಲಾ ಮತ್ತು ತಾಲೂಕು ಕಾರ್ಮಿಕ ಇಲಾಖೆ, ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಸಾರ್ವಜನಿಕ ಶಿಕ್ಷಣ ಇಲಾಖೆ, ಪೊಲೀಸ್ ಇಲಾಖೆ ಸಹಯೋಗದಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ತಾಲೂಕು ಬಾಲಕಾರ್ಮಿಕ ಮತ್ತು ಕಿಶೋರಾವಸ್ಥೆ ಕಾರ್ಮಿಕ ನಿಷೇಧ ಮತ್ತು ನಿಯಂತ್ರಣ ಕಾಯ್ದೆ 1986 ತಿದ್ದುಪಡಿ ಕಾಯ್ದೆ-2016 ಹಾಗೂ ವಿಶ್ವ ಜಲ ದಿನ ಕುರಿತು ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಬಾಲಕಾರ್ಮಿಕ ಪದ್ಧತಿ ಅನಿಷ್ಟವಾಗಿದ್ದು, ಇದನ್ನು ಕೊನೆಗಾಣಿಸಲು ಅನೇಕ ಕಠಿಣ ಕಾನೂನುಗಳನ್ನು ಜಾರಿಗೆ ತರಲಾಗಿದೆ. ಇದನ್ನು ಶಾಲಾ-ಕಾಲೇಜುಗಳ ಮಕ್ಕಳಿಗೆ ಅರಿವು ಮೂಡಿಸುವುದು ಎಲ್ಲರ ಜವಬ್ದಾರಿಯಾಗಿದೆ. ಆ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕಿದೆ. ಪಾಲಕರು, ಶಿಕ್ಷಕರು ಬಾಲಕಾರ್ಮಿಕ ವಿರೋಧಿ ಚಟುವಟಿಕೆ ಹೆಚ್ಚಾಗಿ ಪ್ರಚಾರ ಮಾಡುವುದರ ಮೂಲಕ ಮಕ್ಕಳನ್ನು ಜೀತ ಪದ್ಧತಿ ಮತ್ತು ಬಾಲಕಾರ್ಮಿಕ ವ್ಯೆಹದಿಂದ ಪಾರು ಮಾಡಬೇಕಿದೆ. ಶಿಕ್ಷಣದ ಜತೆಯಲ್ಲಿ ಮಕ್ಕಳ ಮನಸ್ಸಿನಲ್ಲಿ ಭವಿಷ್ಯದ ಬಗ್ಗೆ ಅವರಲ್ಲಿ ಕನಸುಗಳನ್ನು ಬಿತ್ತಿ ಸಮಾಜದ ಮುಖ್ಯವಾಹಿನಿಗೆ ತರಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದರು.
ಜಿಲ್ಲಾ ಕಾರ್ಮಿಕ ಅಧಿಕಾರಿ ಕೆ.ಎನ್.ಯಮುನಾ ಮಾತನಾಡಿ, ಕಾರ್ಮಿಕ ಇಲಾಖೆಯು ನಗರವೂ ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲಿ ಬಾಲಕಾರ್ಮಿಕ ಪದ್ಧತಿ ವಿರುದ್ಧ ಸಾಕಷ್ಟು ಜಾಗೃತಿ ಮೂಡಿಸುತ್ತಿದೆ. ಮಕ್ಕಳೇ ಮುಂದಿನ ಪ್ರಜೆಗಳಾಗಿದ್ದು, ಅವರೇ ದೇಶದ ಆಧಾರಸ್ತಂಭಗಳಾಗಿದ್ದಾರೆ. ನ್ಯಾಯಾಂಗ ಇಲಾಖೆಯು ನಮ್ಮ ಇಲಾಖೆಯೊಂದಿಗೆ ಕೈಜೋಡಿಸಿ ಬಾಲಕಾರ್ಮಿಕ ಪದ್ಧತಿ ಬಗ್ಗೆ ಮಕ್ಕಳಲ್ಲಿ ಜಾಗೃತಿ ಮೂಡಿಸುತ್ತಿರುವುದು ನಮ್ಮ ಇಲಾಖೆಗೆ ಮತ್ತಷ್ಟು ಶಕ್ತಿ ಬಂದಂತಾಗಿದೆ. ಮಕ್ಕಳಲ್ಲಿ ಶಿಕ್ಷಣದ ಬಗ್ಗೆ ಅರಿವು ಮೂಡಿಸಲು ಮತ್ತು ಉತ್ತೇಜನ ನೀಡಲು ಕಾರ್ಮಿಕ ಸಮುದಾಯಕ್ಕೆ ಅನೇಕ ಸವಲತ್ತುಗಳನ್ನು ಸರ್ಕಾರವು ನಮ್ಮ ಇಲಾಖೆ ಮೂಲಕ ನೀಡುತ್ತಿದೆ. ಪಾಲಕರು ಯಾವುದೇ ಕಾರಣಕ್ಕೂ ಅಪ್ರಾಪ್ತ ಮಕ್ಕಳನ್ನು ಕೂಲಿ ಕೆಲಸ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ದುಡಿಮೆಗೆ ದೂಡುವುದು ಶಿಕ್ಷಾರ್ಹ ಅಪರಾಧವಾಗಿದೆ ಎಂದು ಕಿವಿಮಾತು ಹೇಳಿದರು.
ನಿವೃತ್ತ ಶಿಕ್ಷಕ ಗುರುಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ವಕೀಲರ ಸಂಘದ ಅಧ್ಯಕ್ಷ ಕೆ.ಜಿ.ಸದಾನಂದ ಮಾನಾಡಿದರು. ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಪರಶಿವಮೂರ್ತಿ, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಯಶೋದಮ್ಮ, ಕಾರ್ಮಿಕ ನಿರೀಕ್ಷಕರಾದ ವೈ.ಎನ್.ಶಶಿಕಲಾ , ಗ್ರಾಮಾಂತರ ಪೊಲೀಸ್ ಠಾಣೆ ಉಪನಿರೀಕ್ಷಕ ಶಿವಾನಂದ ರಡ್ಡರಹಟ್ಟಿ, ಗ್ರಾಮಾಂತರ ಪೊಲೀಸ್ ಠಾಣೆ ಎಸ್‌ಐ ದಿಲೀಪ್‌ಕುಮಾರ್, ಸಿಆರ್‌ಪಿ ವಿಷ್ಣುವರ್ಧನ್, ಸುಷ್ಮಾ, ಲೀಲಾಬಾಯಿ, ಸುರೇಶನಾಯಕ್, ಸಂಪತ್‌ನಾಯಕ , ಅನಿಲ್ ಕುಮಾರ್ ಸೇರಿದಂತೆ ಶಾಲಾ ವಿದ್ಯಾರ್ಥಿಗಳು ಭಾಗವಹಿಸಿದ್ದರು.