ಬೆಂಗಳೂರು: ಬಂಡವಾಳ ಹೂಡಿಕೆ, ಕೈಗಾರಿಕೆಗಳನ್ನು ಸ್ಥಾಪಿಸಲು ಮುಂದೆ ಬರುವವರಿಗೆ ಕೇಂದ್ರ ಸರ್ಕಾರ ನೀಡುವ ಉತ್ತೇಜನ ಎಲ್ಲ ರಾಜ್ಯಗಳಿಗೆ ಸಮಾನವಾಗಿರಲಿ ಎಂಬುದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ ಅಭಿಮತವಾಗಿದೆ.
ಗುಜರಾತಿನ ಸಾನಂದ್‌ನಲ್ಲಿ ಸೆಮಿಕಂಡಕ್ಟರ್ ಉತ್ಪಾದನಾ ಘಟಕವನ್ನು ಸ್ಥಾಪಿಸುತ್ತಿರುವ ಅಮೆರಿಕ ಮೂಲದ ಮೈಕ್ರಾನ್ ಟೆಕ್ನಾಲಜಿ ಕಂಪನಿ ಸೃಷ್ಟಿಸಲಿರುವ ಪ್ರತೀ ಉದ್ಯೋಗಕ್ಕೆ ದೇಶದ ಬೊಕ್ಕಸದಿಂದ 3.20 ಕೋಟಿ ರೂ.ಗಳಷ್ಟು ಪ್ರೋತ್ಸಾಹ ಧನ ಕೊಡುತ್ತಿರುವುದು ಸರಿಯಲ್ಲವೆಂದು ಆಕ್ಷೇಪಿಸಿದ್ದಾರೆ.
ಸಾಮಾಜಿಕ ಜಾಲತಾಣದ ತಮ್ಮ ಖಾತೆಯಲ್ಲಿ ಈ ಕುರಿತು ಎಂ.ಬಿ.ಪಾಟೀಲ್ ಸಂದೇಶ ಹಂಚಿಕೊಂಡಿದ್ದು, ಕೇಂದದ ಬೃಹತ್ ಕೈಗಾರಿಕಾ ಸಚಿವ ಎಚ್.ಡಿ.ಕುಮಾರಸ್ವಾಮಿ ಪ್ರಶ್ನೆ ಎತ್ತಿರುವುದು ಸರಿಯಾಗಿದೆ ಎಂದು ಬೆಂಬಲಿಸಿದ್ದಾರೆ.
ಇದೇ ನೀತಿ ಮುಂದುವರಿಯುವುದಾದರೆ, ದೇಶದ ಎಲ್ಲ ರಾಜ್ಯಗಳಿಗೂ ಇದೇ ರೀತಿಯ ಸಮಾನ ಸೂತ್ರ ಮತ್ತು ಅವಕಾಶ ಸಿಗಲಿದೆ. ಕೈಗಾರಿಕಾ ಬೆಳವಣಿಗೆಗೆ ಸೂಕ್ತವಾದ ಕಾರ್ಯ ಪರಿಸರ ಸೃಷ್ಟಿಸಲು ಈ ರೀತಿಯ ಪ್ರೋತ್ಸಾಹ ಧನ ನೀಡುತ್ತಿದ್ದರೆ ಅದು ಸ್ವಾಗತಾರ್ಹ.
ಇದು ವಾಸ್ತವವಾಗಿದ್ದರೆ, ಎಲ್ಲ ರಾಜ್ಯಗಳಿಗೂ ಇಂತಹ ಸಮಾನ ಅವಕಾಶ ಸಿಗಬೇಕು. ಆಗ ಮಾತ್ರ ದೇಶದೆಲ್ಲೆಡೆ ಕೈಗಾರಿಕಾ ಬೆಳವಣಿಗೆ ಕಾಣಬಹುದು.ಆದರೆ ಕೇಂದ್ರದ ಈಗಿನ ನೀತಿಯು ಪ್ರಧಾನಿ ನರೇಂದ್ರ ಮೋದಿ ಅವರ ತವರು ರಾಜ್ಯವಾದ ಗುಜರಾತಿನ ಬಗ್ಗೆ ಮಾತ್ರ ವಿಶೇಷ ಒಲವನ್ನು ತೋರಿಸುವಂತಿದೆ. ಇದು ತಾರತಮ್ಯ ಹಾಗೂ ಅಸಮಾನತೆಗೆ ದಾರಿ ಮಾಡಿಕೊಡಲಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಗುಜರಾತ್‌ಗೆ ಬಂದಿರುವ ಉದ್ಯಮಕ್ಕೆ ಭಾರೀ ಪ್ರಮಾಣದ ಪ್ರೋತ್ಸಾಹಕ ಧನವನ್ನು ಕೇಂದ್ರ ಸರ್ಕಾರದ ಬೊಕ್ಕಸದಿಂದಲೇ ನೀಡುತ್ತಿದ್ದರೆ ಇದನ್ನು ಸಾರ್ವಜನಿಕ ವಲಯದ ಉದ್ಯಮವೆಂದೇ ಪರಿಗಣಿಸಬಹುದು ಎಂದೂ ಎಂ.ಬಿ.ಪಾಟೀಲ ಪ್ರತಿಪಾದಿಸಿದ್ದಾರೆ.
ಗುಜರಾತ್‌ನಲ್ಲಿ ಮೈಕ್ರಾನ್ ಕಂಪನಿ 2.70 ಬಿಲಿಯನ್ ಡಾಲರ್ ವೆಚ್ಚದಲ್ಲಿ ತನ್ನ ಉತ್ಪಾದನಾ ಘಟಕ ಸ್ಥಾಪಿಸುತ್ತಿದ್ದು, 5,000 ಉದ್ಯೋಗಗಳನ್ನು ಸೃಷ್ಟಿಸುವುದಾಗಿ ಹೇಳಿದೆ. ಇದಕ್ಕೆ ಪ್ರತಿಯಾಗಿ ಕೇಂದ್ರ ಸಕಾರ ಶೇಕಡಾ 50 ಮತ್ತು ಗುಜರಾತ್ ಸರ್ಕಾರದಿಂದ ಶೇಕಡ 20ರಷ್ಟು ಪ್ರೋತ್ಸಾಹ ಧನವನ್ನು ಅದು ಪಡೆಯುತ್ತಿದೆ.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಬೊಕ್ಕಸದಿಂದ ಖಾಸಗಿ ಕಂಪನಿಗೆ 2 ಬಿಲಿಯನ್ ಡಾಲರ್ ಸಂದಾಯ ಆಗುತ್ತಿದೆ. ಇದರ ಹಿಂದಿರುವ ತರ್ಕ ಸಮರ್ಥನೀಯವಲ್ಲ ಎಂದು ಎಚ್.ಡಿ.ಕುಮಾರಸ್ವಾಮಿಯವರು ಶುಕ್ರವಾರ ಹೇಳಿದ್ದಾರೆ ಎಂದು ಎಂ.ಬಿ.ಪಾಟೀಲ ಉಲ್ಲೇಖಿಸಿದ್ದಾರೆ.