ಸಾಗರದಲ್ಲಿ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ರ‌್ಯಾಂಕ್ ವಿಜೇತ ವಿದ್ಯಾರ್ಥಿನಿಯರನ್ನು ಸನ್ಮಾನಿಸಲಾಯಿತು. ಗೋಪಾಲಕೃಷ್ಣ ಬೇಳೂರು, ಲೋಕೇಶ್, ಸುಮಂಗಲಾ ರಾಮಕೃಷ್ಣ, ವೀಣಾ ನಾಯ್ಡು, ಅಬ್ದುಲ್ ರೆಹಮಾನ್ ಇತರರಿದ್ದರು.  
ನ್ಯೂಸ್

ಮಕ್ಕಳ ಆಸಕ್ತಿಗೆ ತಕ್ಕಂತೆ ಪ್ರೋತ್ಸಾಹಿಸಿ

ಸಾಗರ: ಪಾಲಕರು ಯಾವ ಕಾರಣಕ್ಕೂ ಮಕ್ಕಳಿಗೆ ಒತ್ತಡ ಹೇರಬಾರದು. ಪಠ್ಯದ ಜತೆಗೆ ಮಕ್ಕಳ ಆಸಕ್ತಿದಾಯಕ ಕ್ಷೇತ್ರ ಗುರುತಿಸಿ ಪ್ರೋತ್ಸಾಹಿಸಬೇಕು ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.

ಸಾಗರದ ನಗರಸಭೆ ರಂಗಮಂದಿರದಲ್ಲಿ ಸರ್ಕಾರಿ ಬಾಲಕಿಯರ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ಸಾಂಸ್ಕೃತಿಕ, ಕ್ರೀಡಾ ಚಟುವಟಿಕೆಗಳ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

ಪಿಯು ಶಿಕ್ಷಣ ಅತ್ಯಂತ ಮಹತ್ವದ ಘಟ್ಟ. ಇಲ್ಲಿ ಓದಿಗೆ ಎಷ್ಟು ಆದ್ಯತೆ ನೀಡುತ್ತೀರೋ ಅಷ್ಟೇ ಆದ್ಯತೆಯನ್ನು ಪಠ್ಯೇತರ ಚಟುವಟಿಕೆಗಳಾದ ಎನ್‌ಎಸ್‌ಎಸ್, ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೂ ಒತ್ತು ನೀಡಬೇಕು. ಯಾವ ಮಕ್ಕಳು ಹೇಗೆ ಭವಿಷ್ಯ ರೂಪಿಸಿಕೊಳ್ಳುತ್ತಾರೆ ಎಂದು ಹೇಳಲು ಸಾಧ್ಯವಿಲ್ಲ. ಆದರೆ ಪಿಯುಸಿ ಹಂತದಲ್ಲಿಯೇ ಭವಿಷ್ಯಕ್ಕೆ ಬೇಕಾದ ಭದ್ರ ಬುನಾದಿ ಹಾಕಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಈಗಾಗಲೇ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಉತ್ತಮ ಶಿಕ್ಷಣ ನೀಡಲಾಗುತ್ತಿದೆ. ಸರ್ಕಾರ ಶಿಕ್ಷಣ, ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ನೀಡುತ್ತಿದೆ. ಅನುದಾನ ಸದ್ಬಳಕೆ ಆಗಬೇಕು. ಮಕ್ಕಳು ದ್ವಿತೀಯ ಪಿಯುಸಿಯಲ್ಲಿ ಉನ್ನತ ಶ್ರೇಣಿಯಲ್ಲಿ ಪಾಸಾಗುವ ಮೂಲಕ ಪಾಲಕರ ಕನಸು ಈಡೇರಿಸಬೇಕು ಎಂದು ತಿಳಿಸಿದರು.

ರ‌್ಯಾಂಕ್ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಹಿರಿಯ ಉಪನ್ಯಾಸಕ ಲೋಕೇಶ್, ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷೆ ಸುಮಂಗಲಾ ರಾಮಕೃಷ್ಣ, ಸದಸ್ಯರಾದ ವೀಣಾ ನಾಯ್ಡು, ಅಬ್ದುಲ್ ರೆಹಮಾನ್, ಪ್ರಮುಖರಾದ ಮರಿಯಾ ಲೀಮಾ, ಗಣಪತಿ, ರವಿ, ಕೆ.ಹೊಳೆಯಪ್ಪ, ಕಲಸೆ ಚಂದ್ರಪ್ಪ ಇತರರಿದ್ದರು.