ನ್ಯೂಸ್

ಜಮ್ಮು-ಕಾಶ್ಮೀರದ ಶೋಪಿಯಾನ್​ನಲ್ಲಿ ಎನ್​ಕೌಂಟರ್​: ಕನಿಷ್ಠ ಮೂವರು ಉಗ್ರರು ಬಲೆಗೆ

ಶ್ರೀನಗರ: ಜಮ್ಮು-ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ಭಾನುವಾರ ಬೆಳಗ್ಗೆ ರಕ್ಷಣಾಪಡೆ ಜಂಟಿ ಕಾರ್ಯಾಚರಣೆ ಆರಂಭಿಸಿದ ವೇಳೆ ಉಗ್ರರು ಗುಂಡಿನ ದಾಳಿ ಆರಂಭಿಸಿದ ಕಾರಣ ಅಲ್ಲಿ ಗುಂಡಿನ ಚಕಮಕಿ ನಡೆದಿದೆ. ಪ್ರಾಥಮಿಕ ಮಾಹಿತಿ ಪ್ರಕಾರ, ಕನಿಷ್ಠ ಮೂವರು ಉಗ್ರರು ಈಗ ರಕ್ಷಣಾ ಪಡೆಯ ಕಾರ್ಯಾಚರಣೆಯ ನಡುವೆ ಸಿಲುಕಿದ್ದಾರೆ.

ದಕ್ಷಿಣ ಕಾಶ್ಮೀರದ ಶೋಪಿಯಾನ್​ನಲ್ಲಿನ ರೆಬಾನ್ ಗ್ರಾಮದಲ್ಲಿ ಈ ಗುಂಡಿನ ಚಕಮಕಿ ನಡೆದಿದೆ. ರಕ್ಷಣಾ ಪಡೆ ಬಲೆಯ ನಡುವೆ ಸಿಲುಕಿರುವ ಉಗ್ರರು ಅಲ್ಲಿಂದ ಪರಾರಿಯಾಗುವುದಕ್ಕೆ ಗುಂಡಿನ ದಾಳಿ ಶುರುಮಾಡಿದ ಕಾರಣ ರಕ್ಷಣಾ ಪಡೆಯೂ ಪ್ರತಿದಾಳಿ ನಡೆಸಿದೆ.

ಸೆಂಟ್ರಲ್ ರಿಸರ್ವ್ ಪೊಲೀಸ್ ಫೋರ್ಸ್​ನ 178ನೇ ಬೆಟಾಲಿಯನ್​, ಜೈನಾಪೂರದ ರಾಷ್ಟ್ರೀಯ ರೈಫಲ್ಸ್​ ಆ್ಯಂಡ್ ಸ್ಪೆಷಲ್ ಆಪರೇಶನ್ ಗ್ರೂಪ್​ ಈ ಕಾರ್ಯಾಚರಣೆಯಲ್ಲಿ ಭಾಗಿಯಾಗಿವೆ. ಕಾರ್ಯಾಚರಣೆಯ ಪೂರ್ಣ ವಿವರ ಇನ್ನೂ ಲಭ್ಯವಾಗಿಲ್ಲ.