ಮುಂಬೈ: ಬಾಲಿವುಡ್ನ ಟಾಪ್ ನಟರಲ್ಲಿ ಇಮ್ರಾನ್ ಹಶ್ಮಿ ಕೂಡ ಒಬ್ಬರು. ಚಿತ್ರರಂಗದಲ್ಲಿ ತಮ್ಮ ನಟನ ಕೌಶಲದಿಂದಲೇ ಛಾಪು ಮೂಡಿಸಿರುವ ನಟ. ಇತ್ತೀಚೆಗೆ ಇಮ್ರಾನ್ ನಟನೆಯ ವೆಬ್ಸಿರೀಸ್ ಶೋಟೈಮ್ನ ಭಾಗ 2 ಒಟಿಟಿಯಲ್ಲಿ ಬಿಡುಗಡೆಯಾಗಿದೆ. ಈ ವೆಬ್ ಸರಣಿ ಪ್ರಚಾರಕ್ಕಾಗಿ ತೆರಳಿದ್ದ ಖಾಸಗಿ ವಾಹಿನಿಯ ಸಂದರ್ಶನವೊಂದರಲ್ಲಿ ತಾವು ವಿಶ್ವಸುಂದರಿ ಐಶ್ವರ್ಯಾ ರೈ ಬಚ್ಚನ್ ಬಳಿ ಕ್ಷಮೆಯಾಚಿಸುವುದಾಗಿ ತಿಳಿಸಿದ್ದಾರೆ.
ಐಶ್ವರ್ಯಾ ರೈ ಅವರನ್ನು ಪ್ಲಾಸ್ಟಿಕ್ಗೆ ಹೋಲಿಸಿದ್ದಕ್ಕಾಗಿ ವಿಷಾದಿಸುತ್ತೀರಾ ಎಂದು ಇಮ್ರಾನ್ ಅವರನ್ನು ಕೇಳಿದಾಗ, ಹೌದು ಈ ಬಗ್ಗೆ ನಾನು ವಿಷಾದಿಸುತ್ತೇನೆ. ನನ್ನ ಹೇಳಿಕೆಯಿಂದ ನನಗೆ ತುಂಬಾ ಮುಜುಗರವಾಗಿದೆ. ನಾನು ಐಶ್ವರ್ಯಾ ರೈ ಅವರನ್ನು ತುಂಬಾ ಗೌರವಿಸುತ್ತೇನೆ ಎಂದು ಹೇಳಲು ಬಯಸುತ್ತೇನೆ. ಆದರೆ ನನ್ನ ಹೇಳಿಕೆ ಅಹಿತಕರವಾಗಿರಬಹುದು ಎಂದು ಹೇಳಿದ್ದಾರೆ.
ಅಲ್ಲದೆ ಅದನ್ನು ಶೋ ಒಂದರಲ್ಲಿ ಆಟ ಆಡುವಾಗ ತಮಾಷೆಯಾಗಿ ಹೇಳಿದ್ದು. ಶೋನಲ್ಲಿ ಇಂತಹ ಹಲವು ಆಟಗಳು ಇರುತ್ತಿದ್ದವು. ಮೊದಲು ಜನರು ಅಷ್ಟೊಂದು ಸಂವೇದನಾಶೀಲರಾಗಿರಲಿಲ್ಲ ಈಗ ಜನರು ತುಂಬಾ ಸೂಕ್ಷ್ಮವಾಗಿದ್ದಾರೆ. ಇಂದಿನ ಸಂಸ್ಕೃತಿಯಲ್ಲಿ, ಜನರು ಕೆಟ್ಟ ವಿಷಯಗಳನ್ನು ಬಹಳ ಬೇಗನೆ ಊಹಿಸುತ್ತಾರೆ. ಇಂದಿನ ಸಮಾಜದಲ್ಲಿ ಅಂತಹ ಉತ್ತರಗಳನ್ನು ನೀಡಲು ಸಾಧ್ಯವಿಲ್ಲ ಎಂದು ಭಾವಿಸುತ್ತೇನೆ ಎಂದರು.
ಕಾಫಿ ವಿಥ್ ಕರಣ್ನ ನಾಲ್ಕನೇ ಸೀಸನ್ ರ್ಯಾಪಿಡ್ ಫೈರ್ ರೌಂಡ್ನಲ್ಲಿ ಐಶ್ವರ್ಯಾ ರೈ ಬಚ್ಚನ್ ಅವರನ್ನು ಇಮ್ರಾನ್ ರಶ್ಮಿ ಪ್ಲಾಸ್ಟಿಕ್ಗೆ ಹೋಲಿಸಿದ್ದರು. ಈ ಹೇಳಿಕೆಯ ನಂತರ ಇಮ್ರಾನ್ ಅವರನ್ನು ನೆಟ್ಟಿಗರು ಟ್ರೋಲ್ಮಾಡಿದ್ದರು ಹಾಗೂ ಸಾಕಷ್ಟು ಟೀಕೆ ಮಾಡಿದ್ದರು. ಇಮ್ರಾನ್ ಹಶ್ಮಿ ಅವರ ಈ ಹೇಳಿಕೆಗೆ ಐಶ್ವರ್ಯಾ ರೈ ನೇರವಾಗಿ ಪ್ರತಿಕ್ರಿಯಿಸಿಲ್ಲ. ಆದರೆ 2019ರಲ್ಲಿ ಫಿಲ್ಮ್‌ಫೇರ್‌ಗೆ ನೀಡಿದ ಸಂದರ್ಶನದಲ್ಲಿ ಐಶ್ವರ್ಯಾ ರೈ ತನ್ನ ಬಗ್ಗೆ ಹೇಳಲಾದ ಕೆಟ್ಟ ವಿಷಯವೆಂದರೆ ನನ್ನನ್ನು ನಕಲಿ ಮತ್ತು ಪ್ಲಾಸ್ಟಿಕ್ ಎಂದು ಹೇಳಿರುವುದು ಎಂದಿದ್ದರು. (ಏಜೆನ್ಸೀಸ್)