ಹೊಳೆಹೊನ್ನೂರು: ನಮ್ಮ ಶಾಲೆಗಳ ಆವರಣದಲ್ಲಿ ಮದ್ಯದ ಖಾಲಿ ಬಾಟಲಿಗಳು ಬಿದ್ದಿರುತ್ತವೆ. ಬೆಳಗ್ಗೆ ನಾವೇ ಬಂದು ಸ್ವಚ್ಛಮಾಡಬೇಕಿದೆ ಎಂದು ಶಾಲಾ ಮಕ್ಕಳು ಮೈದೊಳಲು ಗ್ರಾಪಂಗೆ ದೂರು ನೀಡಿದರು.
ಶಾಲಾ ಆವರಣದಲ್ಲಿ ಗಲೀಜು ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಮೈದೊಳಲು ಗ್ರಾಪಂನಲ್ಲಿ ಆಯೋಜಿಸಿದ್ದ ಮಕ್ಕಳ ಗ್ರಾಮ ಸಭೆಯಲ್ಲಿ ಸುತ್ತಮುತ್ತಲಿನ ಶಾಲೆಗಳ ವಿದ್ಯಾರ್ಥಿಗಳು ಒಕ್ಕೊರಲಿಂದ ಒತ್ತಾಯಿಸಿದರು. ಇದಕ್ಕೆ ದನಿಗೂಡಿಸಿದ ಕೆಲ ಶಿಕ್ಷಕರು ಕುಡಿದು ಗಲೀಜು ಮಾಡುವವರನ್ನು ಪ್ರಶ್ನಿಸಿದರೆ ನಮ್ಮ ಮೇಲೆ ದ್ವೇಷ ಸಾಧಿಸುತ್ತಾರೆಂದು ಸಭೆ ಗಮನಕ್ಕೆ ತಂದರು.
ಮಲ್ಲಾಪುರ ಸರ್ಕಾರಿ ಶಾಲೆಗೆ ಹೊಂದಿಕೊಂಡಂತೆ 11 ಕೆ.ವಿ ವಿದ್ಯುತ್ ತಂತಿ ಹಾದುಹೋಗಿದೆ. ಹತ್ತಾರು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಮಲ್ಲಾಪುರ ಶಾಲೆ ಅಭಿವೃದ್ಧಿಯನ್ನು ಸಂಪೂರ್ಣ ಕಡೆಗಣಿಸಲಾಗಿದೆ ಎಂದು ಕೆಲ ಶಿಕ್ಷಕರು ದೂರಿದರು. ಮಲ್ಲಾಪುರದಲ್ಲಿ ಕುಡಿಯುವ ನೀರಿನ ಸಮಸ್ಯೆ ಕಾಡುತ್ತದೆ. ಮೈದೊಳಲಿನ ಪಿಎಂಶ್ರೀ ಶಾಲೆಯಲ್ಲಿ ಕೊಠಡಿಗಳ ಕೊರತೆ ಇದೆ. ಶಾಲೆಗೆ ರಸ್ತೆ ನಿರ್ಮಾಣ ಮಾಡಬೇಕು ಎಂದು ಮಕ್ಕಳು ಗ್ರಾಪಂ ಗಮನಕ್ಕೆ ತಂದರು.
ಅಂಗನವಾಡಿ ಕಾರ್ಯಕರ್ತೆ ಶಾರದಮ್ಮ ಮಾತನಾಡಿ, ಮಕ್ಕಳು ತಮ್ಮ ಮೇಲಿನ ಕಿರುಕುಳ ಹಾಗೂ ಲೈಂಗಿಕ ದೌರ್ಜನ್ಯ ನಡೆದರೆ ಸಂಕೋಚಪಡದೆ ತಾಯಿ, ಇಲ್ಲವೆ ಶಿಕ್ಷಕಿಯರ ಬಳಿ ಹೇಳಬೇಕೆಂದು ತಿಳಿಸಿದರು.
ಮಕ್ಕಳ ಗ್ರಾಮ ಸಭೆ ಅಧ್ಯಕ್ಷೆ ಉಮಾ, ಗ್ರಾಪಂ ಅಧ್ಯಕ್ಷೆ ಗೀತಮ್ಮ, ಉಪಾಧ್ಯಕ್ಷೆ ವಿನೋದಮ್ಮ, ಆಯುರ್ವೇದ ವೈದ್ಯ ಡಾ. ಸುರೇಂದ್ರ, ಮುಖ್ಯ ಶಿಕ್ಷಕ ತಿಪ್ಪೇಶ್, ಗ್ರಾಪಂ ಅಭಿವೃದ್ಧಿ ಅಧಿಕಾರಿ ಲಕ್ಷ್ಮೀಬಾಯಿ, ಲಕ್ಷ್ಮೀಕಾಂತ, ಚಂದ್ರೋಜಿರಾವ್, ಪರಮೇಶ್ವರಪ್ಪ, ರಾಮು, ಚಂದ್ರೋಜಿರಾವ್, ನಂದಿನಿ, ಕೆ.ಎಚ್.ಪರಮೇಶ್ವರ ರಾವ್, ಮಂಜುನಾಥ್ ಇತರರಿದ್ದರು.