ಶಿವಮೊಗ್ಗ: ಬದುಕಿನ ಉನ್ನತಿಗಾಗಿ ವಿಭಿನ್ನ ವಿಷಯಗಳ ಅಧ್ಯಯನದಲ್ಲಿ ತೊಡಗಿಸಿಕೊಳ್ಳಿ ಎಂದು ಡಿವಿಎಸ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ಕೊಳಲೆ ರುದ್ರಪ್ಪ ಗೌಡ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮತ್ತು ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಆಶ್ರಯದಲ್ಲಿ ಮಂಗಳವಾರ ಪದವಿ ಕಾಲೇಜುಗಳ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ್ದ ಸಂವಿಧಾನ ಮತ್ತು ಡಾ. ಬಿ.ಆರ್.ಅಂಬೇಡ್ಕರ್ ಎಂಬ ವಿಷಯದ ಕುರಿತ ರಸಪ್ರಶ್ನೆ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು.
ಕನ್ನಡದ ಶ್ರೇಷ್ಠತೆಯನ್ನು ಎಷ್ಟು ಕೊಂಡಾಡಿದರೂ ಸಾಲದು. ಬುಕರ್ ಪ್ರಶಸ್ತಿ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕನ್ನಡ ಸಾಹಿತ್ಯದ ಪ್ರಕಾರಗಳು ಮತ್ತಷ್ಟು ಪ್ರಜ್ವಲಿಸಬೇಕು. ಹಿರಿಯರಿಗೆ ಗೌರವ ನೀಡಬೇಕು. ಆಧುನಿಕತೆಯ ಅಂಧತ್ವ ನಿಮ್ಮನ್ನು ಕಾಡದಿರುವಂತೆ ನೋಡಿಕೊಳ್ಳಿ. ಸಂವಿಧಾನದ ಆಶಯಗಳಿಗೆ ಹೆಚ್ಚು ಶಕ್ತಿ ತುಂಬುವ ಕಾರ್ಯ ಯುವ ಸಮೂಹದಿಂದ ನಡೆಯಲಿ ಎಂದು ಹೇಳಿದರು.
ಕಸಾಪ ಜಿಲ್ಲಾಧ್ಯಕ್ಷ ಡಿ.ಮಂಜುನಾಥ ಮಾತನಾಡಿ, ವಿಶ್ವದಲ್ಲಿಯೆ ಶ್ರೇಷ್ಠವಾದ ಸಂವಿಧಾನ ಭಾರತಕ್ಕಿದೆ. ಆಧುನಿಕ ಸೌಲಭ್ಯಗಳು ಇಲ್ಲದ ಕಾಲದಲ್ಲಿಯೂ ಸಂವಿಧಾನ ರಚನಾ ಸಮಿತಿಯು ಸಾರ್ವಜನಿಕ ಚರ್ಚೆಗೆ ಮುಕ್ತವಾಗಿ ಅವಕಾಶ ನೀಡಿತ್ತು. ಸುಮಾರು 769 ಜನ ತಮ್ಮ ಅಭಿಪ್ರಾಯ ತಿಳಿಸಿದ್ದರು ಎಂಬುದೇ ಅದ್ಭುತ ಸಂಗತಿ. ಸ್ವಾತಂತ್ರೃ ಚಳವಳಿಗಳನ್ನು ನಾವು ಓದಿದ್ದೇವೆ. ಆದರೆ ಸ್ವತಃ ನೋಡಿದವರ ಅಭಿಲಾಷೆ, ಅನುಭವದ ಮಾತುಗಳನ್ನು ಕೇಳಿದಾಗ ರೋಮಾಂಚನವಾಗುತ್ತದೆ ಎಂದರು.
ರಸಪ್ರಶ್ನೆ ಕಾರ್ಯಕ್ರಮದಿಂದ ಪ್ರೌಢಶಾಲಾ ವಿದ್ಯಾರ್ಥಿಗಳು ವಂಚಿತರಾಗಿದ್ದಾರೆ. ಇಲಾಖೆ ನೀಡಿದ ಆದೇಶವೊಂದು ಇಂತಹ ಪರಿಸ್ಥಿತಿಗೆ ಕಾರಣವಾಗಿದೆ. ಸೃಜನಶೀಲತೆ ಬಿತ್ತುವ ಪ್ರೌಢಶಾಲಾ ಮತ್ತು ಪದವಿಪೂರ್ವ ಹಂತದಲ್ಲಿ ಪ್ರತಿಭೆಯನ್ನು ಚಿವುಟುವ ಕಾರ್ಯ ನಡೆಯುತ್ತಿರುವುದು ಬೇಸರದ ಸಂಗತಿ ಎಂದು ಹೇಳಿದರು.
ನಿವೃತ್ತ ಪ್ರಾಚಾರ್ಯ ಡಾ. ಎಚ್.ಟಿ.ಕೃಷ್ಣಮೂರ್ತಿ, ಜಿಲ್ಲಾ ಕಸಾಪ ಕೋಶಾಧ್ಯಕ್ಷ ಎಂ.ನವೀನ್‌ಕುಮಾರ್, ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಕೋಶಾಧ್ಯಕ್ಷ ಮಧುಸೂದನ್ ಐತಾಳ್, ಸರ್ ಎಂವಿ ವಿಜ್ಞಾನ ಕಾಲೇಜಿನ ಸಹ ಪ್ರಾಧ್ಯಾಪಕ ಶೋಯೆಬ್ ಅಹಮದ್ ಇತರರಿದ್ದರು. ಜಿಲ್ಲೆಯ ವಿವಿಧ ಪದವಿ ಕಾಲೇಜುಗಳ 23 ತಂಡಗಳು ಭಾಗವಹಿಸಿದ್ದವು