ನ್ಯೂಸ್

ಎಲ್ಲಾ ಯುವಕರಿಗೂ ಉದ್ಯೋಗ- ಹೊಸದೊಂದು ಯೋಜನೆ ಶುರು ಮಾಡಿದೆ ಲಂಡನ್‌ ಸರ್ಕಾರ

ಲಂಡನ್‌: ಕರೊನಾ ಹಾವಳಿಯಿಂದ ಉಂಟಾದ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಬಹುತೇಕ ಎಲ್ಲಾ ದೇಶಗಳ ಆರ್ಥಿಕ ಸ್ಥಿತಿಯೂ ಕುಸಿದು ಹೋಗಿದೆ. ಇನ್ನೊಂದೆಡೆ ಅನೇಕ ಮಂದಿ ಉದ್ಯೋಗವನ್ನೂ ಕಳೆದುಕೊಳ್ಳುವ ಸ್ಥಿತಿ ಎದುರಾಗಿದೆ.

ಇದೇ ಬೆನ್ನಲ್ಲಿ ಆರ್ಥಿಕತೆಯನ್ನೂ ಸುಧಾರಿಸಬೇಕು, ಜತೆಗೆ ಯುವಕರಿಗೆ ಉದ್ಯೋಗವನ್ನೂ ದೊರಕಿಸಿಕೊಡಬೇಕು ಎನ್ನುವ ಮಹತ್ವ ಯೋಚನೆ ಇಂಗ್ಲೆಂಡ್‌ ಸರ್ಕಾರಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ ಬ್ರಿಟಿಷ್ ಹಣಕಾಸು ಸಚಿವ ರಿಷಿ ಸುನಕ್ ಬುಧವಾರ ಯುವಕರ ನಿರುದ್ಯೋಗವನ್ನು ತಡೆಯುವ ಹೊಸ ಯೋಜನೆಯನ್ನು ಪ್ರಕಟಿಸಿದ್ದಾರೆ.

2 ಬಿಲಿಯನ್ ಪೌಂಡ್ ಕಿಕ್‌ಸ್ಟಾರ್ಟ್ ಯೋಜನೆ ಇದಾಗಿದೆ. 16ರಿಂದ 24 ವರ್ಷ ವಯಸ್ಸಿನ ನಿರುದ್ಯೋಗಿ ಯುವಕರನ್ನು ನೇಮಿಸಿಕೊಳ್ಳಲು ಈ ಯೋಜನೆ ಅನುವು ಮಾಡಿಕೊಡುತ್ತದೆ, ಸರ್ಕಾರದ ಹಣವನ್ನು ಬಳಸಿಕೊಂಡು ವಾರಕ್ಕೆ 25 ಗಂಟೆಗಳ ಕಾಲ ರಾಷ್ಟ್ರೀಯ ಕನಿಷ್ಠ ವೇತನ ನೀಡುವ ಮೂಲಕ ಎಲ್ಲಾ ಯುವಕರಿಗೂ ಉದ್ಯೋಗ ದೊರಕಿಸಿಕೊಡುವ ಯೋಜನೆ ಇದಾಗಿದೆ.

"ಯುವಜನರು ಹೆಚ್ಚಿನ ಆರ್ಥಿಕ ಬಿಕ್ಕಟ್ಟುಗಳನ್ನು ಎದುರಿಸುತ್ತಾರೆ, ಈ ಸಮಯದಲ್ಲಿ ಅವರು ಅಪಾಯದಲ್ಲಿದ್ದಾರೆ. ಆದ್ದರಿಂದ ಅವರಿಗೆ ಧೈರ್ಯ ತುಂಬುವ ನಿಟ್ಟಿನಲ್ಲಿ ಇಂಥದ್ದೊಂದು ಯೋಜನೆ ರೂಪಿಸಲಾಗಿದೆ ಎಂದಿದ್ದಾರೆ ಸಚಿವರು.

ಕಬ್ರಿಟನ್‌ನ ಆರ್ಥಿಕತೆಯು ಈ ವರ್ಷ ಶೇ.10ರಷ್ಟು ಕುಗ್ಗಿದೆ. ಕರೊನಾ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಕುಸಿದಿರುವ ಆರ್ಥಿಕತೆಯನ್ನು ಹೆಚ್ಚಿಸುವ ಕ್ರಮಗಳ ಕುರಿತು ಸಂಸತ್ತಿಗೆ ಈ ಬಗ್ಗೆ ಪ್ರಸ್ತಾವವನ್ನು ಇಡಲಾಗಿದೆ. ಈ ಎಲ್ಲಾ ಕ್ಷೇತ್ರಗಳಲ್ಲಿ ಯುವಕರಿಗೆ ತರಬೇತಿ ನೀಡುವ ಸಲುವಾಗಿ 111 ಮಿಲಿಯನ್ ಪೌಂಡ್ ಮೀಸಲು ಇರಿಸುವ ಯೋಜನೆ ರೂಪಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. ಈ ಮೂಲಕ ಯುವಕರಿಗೆ ಉದ್ಯೋಗ ನೀಡಿದರೆ ದೇಶದ ಆರ್ಥಿಕತೆ ಶೀಘ್ರದಲ್ಲಿಯೇ ಹೆಚ್ಚಳವಾಗುವ ಭರವಸೆ ಇದೆ ಎಂದು ಅವರು ಹೇಳಿದ್ದಾರೆ.