ವರುಷಕೊಂದು ಹೊಸತು ಜನ್ಮ, ಹರುಷಕೊಂದು ಹೊಸತು ನೆಲೆಯು... ಇದು ವರಕವಿ ದ.ರಾ. ಬೇಂದ್ರೆಯವರ ಯುಗಾದಿ ಕವನದಲ್ಲಿರುವ ಆಶಯ. ಅದನ್ನೇ ಈ ಕರೊನಾ ಕಾಲದಲ್ಲಿ ಹೊಸ ಕ್ಯಾಲೆಂಡರ್ ವರ್ಷಕ್ಕೂ ಅನ್ವಯಿಸಬಹುದು. ಕಷ್ಟ-ನಷ್ಟದಿಂದ ಕಂಗೆಟ್ಟಿರುವ ಜನ ಹೊಸ ವರ್ಷದ ಹೊಸ್ತಿಲಲ್ಲಿ ದುಡಿಮೆಯ ಹೊಸ ಮಾರ್ಗಗಳನ್ನು ಹುಡುಕುತ್ತಿದ್ದಾರೆ. ಅಂಥವರಿಗೆ ನೆರವಾಗಲೆಂದೇ ವಿಜಯವಾಣಿ ವಿವಿಧ ರಂಗಗಳ ಪರಿಣತರನ್ನು ಮಾತನಾಡಿಸಿದೆ. 2021 ನಿಮ್ಮ ಪಾಲಿಗೆ ‘ಯಶಸ್ವಿ ವರ್ಷ’ವಾಗಲು 21 ಸಾಧಕರು ನೀಡಿರುವ 21 ಐಡಿಯಾಗಳು ಇಲ್ಲಿವೆ.
ಶಿಕ್ಷಣದಲ್ಲೂ ಉದ್ಯೋಗ
ಇಂದು ಜ್ಞಾನ ಕ್ಷೇತ್ರದಲ್ಲಿ ತ್ವರಿತ ಬದಲಾವಣೆಗಳಾಗುತ್ತಿವೆ. ಬೃಹತ್ ದತ್ತಾಂಶ, ಯಂತ್ರ ಕಲಿಕೆ, ಆರ್ಟಿಫಿಷಿಯಲ್ ಇಂಟೆಲಿಜನ್ಸ್ ನಂಥ ಪ್ರಕಾರಗಳಿಂದ ವೈಜ್ಞಾನಿಕ-ತಾಂತ್ರಿಕ ಪ್ರಗತಿಯಾಗಲಿದೆ. ವಿಶ್ವಾದ್ಯಂತ ಅನೇಕ ಕೌಶಲ್ಯರಹಿತ ಉದ್ಯೋಗಗಳನ್ನು ಯಂತ್ರಗಳೇ ನಿರ್ವಹಿಸಬಹುದು. ಗಣಿತ, ಕಂಪ್ಯೂಟರ್ ವಿಜ್ಞಾನ, ದತ್ತಾಂಶ ವಿಜ್ಞಾನಗಳೊಂದಿಗೆ ವಿಜ್ಞಾನ, ಸಮಾಜ ವಿಜ್ಞಾನ, ಮಾನವಿಕ ಶಾಸ್ತ್ರ ಮತ್ತಿತರ ವಿಜ್ಞಾನಗಳು ಮೇಳವಿಸಿರುವ ಬಹುಶಿಸ್ತೀಯ ಸಾಮರ್ಥ್ಯವಿರುವ ಕೌಶಲ ಸಹಿತ ಉದ್ಯೋಗಿಗಳಿಗೆ ಹೆಚ್ಚಿನ ಬೇಡಿಕೆ ಉಂಟಾಗುತ್ತದೆ. ಹೊಸ ಸನ್ನಿವೇಶಗಳಿಗೆ ಮತ್ತು ವಾಸ್ತವಗಳಿಗೆ ಹೊಸ ಉಪಕ್ರಮಗಳ ಅಗತ್ಯವಿರುತ್ತದೆ. ಇತ್ತೀಚೆಗೆ ಹೆಚ್ಚುತ್ತಿರುವ ಸೋಂಕಿನ ಪರಿಸ್ಥಿತಿಯು ಯಾವಾಗ ಸಾಂಪ್ರದಾಯಿಕ ಹಾಗೂ ಖುದ್ದು ಹಾಜರಾತಿ ಶಿಕ್ಷಣ ಸಾಧ್ಯವಿಲ್ಲವೋ ಅಂತಹ ಸಂದರ್ಭದಲ್ಲಿ ಗುಣಮಟ್ಟದ ಶಿಕ್ಷಣದ ಪರ್ಯಾಯ ಮಾದರಿಗಳೊಂದಿಗೆ ನಾವು ಸಿದ್ಧವಿರಬೇಕು, ಅದೊಂದು ಉದ್ಯೋಗಾವಕಾಶವೂ ಹೌದು. ಪರಿಣಾಮಕಾರಿ ಆನ್ಲೈನ್ ಬೋಧಕರಾಗಲು ಶಿಕ್ಷಕರಿಗೆ ಸೂಕ್ತ ತರಬೇತಿ ಮತ್ತು ಬೆಳವಣಿಗೆಯ ಅಗತ್ಯವಿದೆ. ಸಾಂಪ್ರದಾಯಿಕ ತರಗತಿಯ ಉತ್ತಮ ಬೋಧಕನು ತಾನೇತಾನಾಗಿ ಆನ್ಲೈನ್ ತರಗತಿಯಲ್ಲೂ ಉತ್ತಮ ಬೋಧಕನೇ ಆಗಿರುತ್ತಾನೆ ಎಂದು ಊಹೆ ಮಾಡಲಾಗದು. ದಕ್ಷತೆ, ಗುಣಮಟ್ಟವನ್ನು ಖಾತ್ರಿಗೊಳಿಸುವುದು, ಕೌಶಲ ರೂಢಿಸಿಕೊಳ್ಳುವುದು ಉದ್ಯೋಗ ಸೃಷ್ಟಿಸಲು ಹಾಗೂ ಉಳಿಸಿಕೊಳ್ಳಲು ಮುಖ್ಯವಾಗುತ್ತದೆ. ಮಾಹಿತಿ- ಸಂವಹನ ತಂತ್ರಜ್ಞಾನ, ಬಾಹ್ಯಾಕಾಶದಂತಹ ಕ್ಷೇತ್ರಗಳಲ್ಲಿ ಭಾರತ ಮುಂಚೂಣಿಯಲ್ಲಿದೆ. ಡಿಜಿಟಲ್ ಭಾರತ ಆಂದೋಲನವು ದೇಶವನ್ನು ತಂತ್ರಜ್ಞಾನ ಕ್ಷೇತ್ರದಲ್ಲಿ ಸಬಲೀಕರಣಗೊಂಡ ಸಮಾಜವಾಗಿ ಜ್ಞಾನಾಧಾರಿತ ಆರ್ಥಿಕತೆಯಾಗಿ ಪರಿವರ್ತಿಸಲು ನೆರವಾಗುತ್ತಿದೆ. ಈ ಪರಿವರ್ತನೆಯಲ್ಲಿ ಶೈಕ್ಷಣಿಕ ಕ್ಷೇತ್ರ ಮಹತ್ವದ ಪಾತ್ರ ವಹಿಸಲಿದೆ.
| ಪ್ರೊ. ತಿಮ್ಮೇಗೌಡ ಉಪಾಧ್ಯಕ್ಷ, ಉನ್ನತ ಶಿಕ್ಷಣ ಪರಿಷತ್