ನವದೆಹಲಿ: ಕೇಂದ್ರ ಸರ್ಕಾರದ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆ (ನರೇಗಾ) ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿದೆ. ಹಣಕಾಸು ವರ್ಷದ ಮಧ್ಯಭಾಗದಲ್ಲೇ ಸಮಸ್ಯೆ ಉದ್ಭವಿಸಿದ್ದು ಯೋಜನೆಯ ಖಜಾನೆ ಬರಿದಾಗಿರುವುದರಿಂದ 21 ರಾಜ್ಯಗಳಲ್ಲಿ ಹಣಕಾಸಿನ ಬಿಕ್ಕಟ್ಟು ಉಂಟಾಗಿದೆ. ಸಂಸತ್ತಿನ ಚಳಿಗಾಲದ ಅಧಿವೇಶನ ಆರಂಭವಾಗಲು ಇನ್ನೂ ಒಂದು ತಿಂಗಳಿದ್ದು ಪೂರಕ ಬಜೆಟ್ ಅನುದಾನದಿಂದ ಕನಿಷ್ಠ ಅಲ್ಲಿವರೆಗೆ ಯೋಜನೆ ಮುಂದುವರಿಸಲು ಅನುಕೂಲವಾಗಲಿದೆ.
ವಾಸ್ತವವಾಗಿ ನರೇಗಾ 8,686 ಕೋಟಿ ರೂಪಾಯಿ ಧನಾತ್ಮಕ ಬ್ಯಾಲೆನ್ಸ್ ಹೊಂದಿದೆ ಎನ್ನುವುದು ಅದರ ಹಣಕಾಸು ತಖ್ತೆಯಿಂದ ಗೊತ್ತಾಗುತ್ತದೆ. ಹೀಗಾಗಿ, ಕಾರ್ಮಿಕರಿಗೆ ವೇತನ ಹಾಗೂ ಸಾಮಗ್ರಿ ವೆಚ್ಚ ನೀಡಿಕೆ ವಿಳಂಬವಾಗುವ ಸಾಧ್ಯತೆಯಿದೆ. ರಾಜ್ಯಗಳು ತಮ್ಮದೇ ಸಂಪನ್ಮೂಲಗಳಿಂದ ಹಣ ಒದಗಿಸದಿದ್ದರೆ ಈ ಸಮಸ್ಯೆ ತಲೆದೋರಬಹುದು.
ಕರೊನಾ ಸಾಂಕ್ರಾಮಿಕತೆಯಿಂದ ಉಂಟಾಗಿರುವ ಆರ್ಥಿಕ ಬಿಕ್ಕಟ್ಟಿನ ಈ ಸಮಯದಲ್ಲಿ ಕೂಲಿ ವಿಳಂಬಗೊಳಿಸುವ ಮೂಲಕ ಕಾರ್ಮಿಕರನ್ನು ಕೇಂದ್ರ ಸರ್ಕಾರ "ಬಲವಂತದ ಶ್ರಮಕ್ಕೆ' ಒಳಪಡಿಸು ತ್ತಿದೆ ಎಂದು ಹೋರಾಟಗಾರರು ಆರೋಪಿಸಿದ್ದಾರೆ. ಆದರೆ, ರಾಜ್ಯಗಳು "ಕೃತಕವಾಗಿ ಬೇಡಿಕೆ ಸೃಷ್ಟಿಸುತ್ತಿವೆ' ಎಂದಿರುವ ಕೇಂದ್ರ ಸರ್ಕಾರ ರಾಜ್ಯಗಳ ಮೇಲೆ ಹೊಣೆ ವರ್ಗಾಯಿಸಲು ಯತ್ನಿಸುತ್ತಿದೆ. ನರೇಗಾ ಬೇಡಿಕೆ ಆಧಾರಿತ ಯೋಜನೆಯಾಗಿದೆ. ಅದರನ್ವಯ ಗ್ರಾಮೀಣ ಪ್ರದೇಶಗಳಲ್ಲಿ ಕೆಲಸ ಅಗತ್ಯವಿರುವ ಕಾರ್ಮಿಕರಿಗೆ 100 ದಿನ ಕೆಲಸವನ್ನು ಖಾತರಿಪಡಿಸಲಾಗುತ್ತದೆ. ಕಳೆದ ವರ್ಷ, ಕರೊನಾ ಲಾಕ್ಡೌನ್ ವೇಳೆ ಬಜೆಟ್ನಲ್ಲಿ ಇದಕ್ಕೆ 1.11 ಲಕ್ಷ ಕೋಟಿ ರೂಪಾಯಿ ನಿಗದಿಪಡಿಸಲಾಗಿತ್ತು. ದಾಖಲೆಯ 11 ಕೋಟಿ ಕಾರ್ಮಿಕರಿಗೆ ಕೆಲಸ ಒದಗಿಸಿ ಕುಟುಂಬಗಳ ಜೀವನೋಪಾಯಕ್ಕೆ ನೆರವು ಕಲ್ಪಿಸಲಾಗಿತ್ತು.
ಖರ್ಚು ಎಷ್ಟು?: 2021ರ ಅಕ್ಟೋಬರ್ 29ರ ಹೊತ್ತಿಗೆ ಒಟ್ಟು 79,810 ಕೋಟಿ ರೂಪಾಯಿ ವೆಚ್ಚವಾಗಿದ್ದು ಹಣಕಾಸು ಕೊರತೆ ಎದುರಾಗಿದೆ. 21 ರಾಜ್ಯಗಳಲ್ಲಿ ನಿಗದಿಗಿಂತ ಹೆಚ್ಚಿನ ಹಣ ರ್ಖಚಾಗಿದೆ. ಆಂಧ್ರಪ್ರದೇಶ, ತಮಿಳುನಾಡು ಮತ್ತು ಬಂಗಾಳದಲ್ಲಿನ ಪರಿಸ್ಥಿತಿ ತೀರಾ ಕೆಟ್ಟದಾಗಿದೆ. ಕೂಲಿ ಮತ್ತು ಸಾಮಗ್ರಿಗಳಿಗೆ ಹಣ ಬಿಡುಗಡೆ ಮಾಡಲು ಬದ್ಧವಾಗಿರುವುದಾಗಿ ಕೇಂದ್ರ ಸರ್ಕಾರ ಶನಿವಾರ ಸ್ಪಷ್ಟಪಡಿಸಿದೆ. ಕಳೆದ ವರ್ಷ ಬಜೆಟ್ ಅನುದಾನಕ್ಕಿಂತ 50,000 ಕೋಟಿ ರೂಪಾಯಿಗಳನ್ನು ಹೆಚ್ಚುವರಿಯಾಗಿ ಒದಗಿಸಲಾಗಿತ್ತು ಎಂದು ಹಣಕಾಸು ಸಚಿವಾಲಯ ತಿಳಿಸಿದೆ.
ಹಣದ ಕೊರತೆ ಇಲ್ಲ ಎಂದ ಕೇಂದ್ರ
2021&22ನೇ ಸಾಲಿನ ಬಜೆಟ್ನಲ್ಲಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಗೆ 73,000 ಕೋಟಿ ರೂಪಾಯಿಯನ್ನು ಬಜೆಟ್ನಲ್ಲಿ ತೆಗೆದಿರಿಸಲಾಗಿತ್ತು. ರಾಷ್ಟ್ರವ್ಯಾಪಿ ಲಾಕ್ಡೌನ್ ಮುಗಿದಿದೆ. ಒಂದು ವೇಳೆ ಹಣದ ಕೊರತೆಯಾದರೆ ಪೂರಕ ಬಜೆಟ್ನ ಅನುದಾನ ಒದಗಿಸಲಾಗುವುದೆಂದು ಕೇಂದ್ರ ಸರ್ಕಾರ ಹೇಳಿದೆ.