ನ್ಯೂಸ್

ಬಿಎಂಟಿಸಿ ಕೇಂದ್ರ ಕಚೇರಿಯಲ್ಲಿ ನೌಕರ ಆತ್ಮಹತ್ಯೆ

ಬೆಂಗಳೂರು: ಶಾಂತಿನಗರದ ಬಿಎಂಟಿಸಿ ಕೇಂದ್ರ ಕಚೇರಿಯಲ್ಲಿ ನೌಕರ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಬೆಳಗಾವಿ ಜಿಲ್ಲೆ ಅಥಣಿ ಮೂಲದ ಮಹೇಶ್ ಹುಕ್ಕಲಿ (40) ಮೃತರು. ಸೋಮವಾರ ಸಂಜೆ ಕಚೇರಿಯ ರೆಕಾರ್ಡ್ ರೂಮ್‌ನಲ್ಲಿ  ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ. ಮಂಗಳವಾರ ಮಧ್ಯಾಹ್ನ 2.30ರಲ್ಲಿ ಅಧಿಕಾರಿಯೊಬ್ಬರು ಹೋದಾಗ ಪ್ರಕರಣ ಬೆಳಕಿಗೆ ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಥಣಿ ಮೂಲದ ಮಹೇಶ್ ಹುಕ್ಕಲಿ, ಪತ್ನಿ ಮತ್ತು ಇಬ್ಬರು ಹೆಣ್ಣು ಮಕ್ಕಳೊಂದಿಗೆ ಕೆಂಗೇರಿಯಲ್ಲಿ ವಾಸವಾಗಿದ್ದರು. ಬಿಎಂಟಿಸಿ ಕೇಂದ್ರ ಕಚೇರಿಯಲ್ಲಿ ಸಹಾಯಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು.

ಸೋಮವಾರ ಬೆಳಗ್ಗೆ ರೆಕಾರ್ಡ್ ರೂಂನ ಕೀ ಬಗ್ಗೆ ಸೆಕ್ಯೂರಿಟಿ ಗಾರ್ಡ್‌ನಲ್ಲಿ ವಿಚಾರಿಸಿದ್ದರು. ಬಳಿಕ ಸಂಜೆ ಹೊತ್ತಿಗೆ ಬಿ ಬ್ಲಾಕ್ 3ನೇ ಮಹಡಿಯಲ್ಲಿ ಇರುವ ರೆಕಾರ್ಡ್ ರೂಂಗೆ ಹೋಗಿ ಒಳಗಿಂದ ಲಾಕ್ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬೆಳಗ್ಗೆ ಪ್ರಕರಣ ಬೆಳಕಿಗೆ ಬಂದಿದ್ದು, ವಿಷಯ ತಿಳಿದ ವಿಲ್ಸನ್ ಗಾರ್ಡ್‌ನ್ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ.

ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಿ ಕುಟುಂಬಸ್ಥರಿಗೆ ಹಸ್ತಾಂತರಿಸಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಘಟನ ಸ್ಥಳದಲ್ಲಿ ಯಾವುದೇ ಮರಣಪತ್ರ ಪತ್ತೆಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವಿಲ್ಸನ್ ಗಾರ್ಡನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.