ನ್ಯೂಸ್

ದ್ವಿಪಕ್ಷೀಯ ಸಂಬಂಧ ಬಲವರ್ಧನೆಗೆ ಒತ್ತು; ಸೌದಿ-ಭಾರತ ಮಂಡಳಿಯ ಪ್ರಥಮ ಸಭೆ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಮತ್ತು ಸೌದಿ ಅರೇಬಿಯಾ ರಾಜಕುಮಾರ ಮಹಮದ್ ಬಿನ್ ಸಲ್ಮಾನ್ ಸೋಮವಾರ ಇಲ್ಲಿ ಕಾರ್ಯತಂತ್ರಾತ್ಮಕ ಪಾಲುದಾರಿಕೆ ಮಂಡಳಿಯ ಪ್ರಪ್ರಥಮ ನಾಯಕರ ಸಭೆಯನ್ನು ನಡೆಸಿದರು. ರಕ್ಷಣೆ, ಇಂಧನ ಭದ್ರತೆ, ಮತ್ತು ವಾಣಿಜ್ಯ ಹಾಗೂ ಹೂಡಿಕೆ, ಆರೋಗ್ಯಕಾಳಜಿ, ಆಹಾರ ಭದ್ರತೆ, ಸಹಿತ ದ್ವಿಪಕ್ಷೀಯ ಸಹಕಾರಕ್ಕೆ ಸಂಬಂಧಿಸಿದ ಮಹತ್ವದ ವಿಷಯಗಳನ್ನು ಉಭಯ ನಾಯಕರು ರ್ಚಚಿಸಿದರು ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಂ ಬಾಗ್ಚಿ ಎಕ್ಸ್​ನಲ್ಲಿ ತಿಳಿಸಿದ್ದಾರೆ.

ಸಲ್ಮಾನ್ ಭಾರತಕ್ಕೆ ನೀಡುತ್ತಿರುವ ಎರಡನೇ ಭೇಟಿ ಇದಾಗಿದೆ. 2019ರ ಫೆಬ್ರವರಿಯಲ್ಲಿ ಅವರು ಮೊದಲ ಬಾರಿಗೆ ಭಾರತಕ್ಕೆ ಆಗಮಿಸಿದ್ದರು. ಜಿ20 ಶೃಂಗಸಭೆಯಲ್ಲಿ ಭಾಗವಹಿಸಲು ಸೆಪ್ಟೆಂಬರ್ 8ರಂದೇ ಭಾರತಕ್ಕೆ ಆಗಮಿಸಿದ್ದ ಸಲ್ಮಾನ್, ಪ್ರಧಾನಿ ಜತೆ ದ್ವಿಪಕ್ಷೀಯ ಮಾತುಕತೆ ನಡೆಸುವ ಉದ್ದೇಶದಿಂದ ವಾಸ್ತವ್ಯವನ್ನು ವಿಸ್ತರಿಸಿದ್ದರು. ಸೌದಿ ರಾಜಕುಮಾರನೊಂದಿಗೆ ತಾವು ‘ಫಲಪ್ರದ ಮಾತುಕತೆ’ ನಡೆಸಿದ್ದಾಗಿ ಪ್ರಧಾನಿ ಮೋದಿ ಹೇಳಿದ್ದಾರೆ. ಗ್ರಿಡ್ ಸಂಪರ್ಕ, ಪರ್ಯಾಯ ಇಂಧನ, ಆಹಾರ ಭದ್ರತೆ ಮತ್ತು ಸೆಮಿಕಂಡಕ್ಟರ್ ಮುಂತಾದ ಕ್ಷೇತ್ರಗಳಲ್ಲಿ ವಾಣಿಜ್ಯ ಸಂಬಂಧ ಮತ್ತು ಸಹಕಾರದ ‘ವಿಪುಲ’ ಅವಕಾಶದ ಕುರಿತು ಉಭಯ ನಾಯಕರು ವಿಸೃತ ಸಮಾಲೋಚನೆ ನಡೆಸಿದರು.

ಬೆಳವಣಿಗೆಯ ಆಶಾವಾದ

ಮುಂಬರುವ ದಿನಗಳಲ್ಲಿ ನಮ್ಮ ದೇಶಗಳ ನಡುವಿನ ವಾಣಿಜ್ಯ ಸಂಪರ್ಕಗಳು ಇನ್ನಷ್ಟು ಬೆಳೆಯುವ ಬಗ್ಗೆ ನಮಗೆ ಭರವಸೆಯಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಗ್ರಿಡ್ ಸಂಪರ್ಕ, ನವೀಕರಿಸಬಹುದಾದ ಇಂಧನ, ಆಹಾರ ಭದ್ರತೆ, ಸೆಮಿಕಂಡಕ್ಟರ್​ಗಳು ಮತ್ತು ಸರಬರಾಜು ಸರಪಣಿಯಲ್ಲಿ ಸಹಕಾರದ ಅವಕಾಶ ಹೇರಳವಾಗಿದೆ ಎಂದು ಪ್ರಧಾನಿ ತಮ್ಮ ಎಕ್ಸ್ ಖಾತೆಯಲ್ಲಿ ಬರೆದಿದ್ದಾರೆ.

38 ವರ್ಷದ ಸುಧಾರಕ

ಸೌದಿ ಅರೇಬಿಯಾದ 38 ವರ್ಷದ ರಾಜಕುಮಾರ ಮಹಮದ್ ಬಿನ್ ಸಲ್ಮಾನ್, ತಮ್ಮ ದೇಶದಲ್ಲಿ ಬದಲಾವಣೆಯ ಹರಿಕಾರ ಎಂದೇ ಖ್ಯಾತರಾಗಿದ್ದಾರೆ. ಕಟ್ಟಾ ಸಂಪ್ರದಾಯವಾದಿ ದೇಶದಲ್ಲಿ ಆಧುನಿಕತೆಯ ಗಾಳಿ ಬೀಸುವಂತೆ ಮಾಡುತ್ತಿರುವ ಶ್ರೇಯಸ್ಸು ಅವರದ್ದಾಗಿದೆ. ‘ಕಾಯಕವೇ ಕೈಲಾಸ’ ಎನ್ನುವಂತೆ ದೇಶದ ಪ್ರಗತಿಗಾಗಿ ದುಡಿಯುತ್ತಿರುವ ರಾಜಕುಮಾರ ಸಲ್ಮಾನ್, ವಸ್ತುಶಃ ತೈಲ ಸಮೃದ್ಧ ದೇಶದ ಆಡಳಿತಗಾರನೇ ಆಗಿದ್ದಾರೆ. ಅವರು ಕಿಂಗ್ ಸೌದ್ ವಿಶ್ವವಿದ್ಯಾಲಯದಿಂದ ಕಾನೂನು ಪದವಿ ಪಡೆದವರಾಗಿದ್ದಾರೆ.

ಸಾಂಪ್ರದಾಯಿಕ ಸ್ವಾಗತ

ಸೋಮವಾರ ಬೆಳಗ್ಗೆ ರಾಷ್ಟ್ರಪತಿ ಭವನಕ್ಕೆ ಆಗಮಿಸಿದ ಸೌದಿ ನಾಯಕನಿಗೆ ಸಾಂಪ್ರದಾಯಿಕ ಸ್ವಾಗತ ಕೋರಲಾಯಿತು. ರಾಷ್ಟ್ರಪತಿ ದ್ರೌಪದಿ ಮುಮು, ಪಿಎಂ ಮೋದಿ ಹಾಗೂ ಇತರ ಸಚಿವರು ಸಲ್ಮಾನ್ ಅವರನ್ನು ಬರಮಾಡಿಕೊಂಡರು. ರಾಷ್ಟ್ರಪತಿ ಭವನದಲ್ಲಿ ಆತಿಥ್ಯ ಸ್ವೀಕರಿಸಿ ಮಾತನಾಡಿದ ಸಲ್ಮಾನ್, ಜಿ20 ಶೃಂಗಸಭೆಯನ್ನು ಯಶಸ್ವಿಯಾಗಿ ನಡೆಸಿಕೊಟ್ಟ ಭಾರತವನ್ನು ಅಭಿನಂದಿಸಿದರು. ‘ಉಭಯ ದೇಶಗಳಿಗೆ ಮಹಾನ್ ಭವಿಷ್ಯವನ್ನು ಸೃಷ್ಟಿಸಲು ನಾವು ಒಟ್ಟಾಗಿ ಕೆಲಸ ಮಾಡುತ್ತೇವೆ’ ಎಂದು ಹೇಳಿದರು. ನಂತರ ಸಲ್ಮಾನ್ ಅವರು ಹೈದರಾಬಾದ್ ಹೌಸ್​ನಲ್ಲಿ ಪ್ರಧಾನಿ ಮೋದಿಯವರೊಂದಿಗೆ ಮಾತುಕತೆ ನಡೆಸಿದರು. ಅವರೊಂದಿಗೆ ಸೌದಿಯ ಹಿರಿಯ ಸಚಿವರ ಸಹಿತ ಉನ್ನತ ಮಟ್ಟದ ನಿಯೋಗವಿತ್ತು.

ಏನಿದು ಪಾಲುದಾರಿಕೆ ಮಂಡಳಿ?

2019ರ ಅಕ್ಟೋಬರ್​ನಲ್ಲಿ ಪ್ರಧಾನಿ ಮೋದಿ ಸೌದಿ ಅರೇಬಿಯಾಕ್ಕೆ ಭೇಟಿ ನೀಡಿದ್ದಾಗ ಭಾರತ-ಸೌದಿ ಕಾರ್ಯತಂತ್ರಾತ್ಮಕ ಪಾಲುದಾರಿಕೆ ಮಂಡಳಿಯನ್ನು ಸ್ಥಾಪಿಸಲಾಗಿತ್ತು. ವಿವಿಧ ಕ್ಷೇತ್ರಗಳಲ್ಲಿ ದ್ವಿಪಕ್ಷೀಯ ಬಾಂಧವ್ಯವನ್ನು ಸುಗಮಗೊಳಿಸುವುದು ಹಾಗೂ ಬಲಪಡಿಸುವುದು ಅದರ ಉದ್ದೇಶವಾಗಿತ್ತು. ಮಂಡಳಿಯ ಪ್ರಥಮ ಸಭೆಯ ಅಧ್ಯಕ್ಷತೆಯನ್ನು ಮೋದಿ ಮತ್ತು ಸಲ್ಮಾನ್ ಜಂಟಿಯಾಗಿ ವಹಿಸಿದ್ದರು.

ವೆಸ್ಟ್ ಕೋಸ್ಟ್ ರಿಫೈನರಿ ಯೋಜನೆಯ (ಮಹಾರಾಷ್ಟ್ರದಲ್ಲಿ ಸ್ಥಾಪಿಸಲು ಉದ್ದೇಶಿಸಲಾಗಿರುವ ಪೆಟ್ರೋ ಕೆಮಿಕಲ್ ಸಂಕೀರ್ಣ) ಆರಂಭಿಕ ಅನುಷ್ಠಾನಕ್ಕೆ ಪಿಎಂ ಮೋದಿ ಮತ್ತು ಕ್ರೌನ್ ಪ್ರಿನ್ಸ್ ಬಿನ್ ಸಲ್ಮಾನ್ ತಮ್ಮ ಸಂಪೂರ್ಣ ಬೆಂಬಲ ನೀಡಿದ್ದಾರೆ. ಇದಕ್ಕಾಗಿ ಈಗಾಗಲೇ 50 ಶತಕೋಟಿ ಡಾಲರ್ ಹಣ ಮೀಸಲಿಡಲಾಗಿದೆ.

| ಔಸಫ್ ಸಯೀದ್ ವಿದೇಶಾಂಗ ಸಚಿವಾಲಯದ ಕಾರ್ಯದರ್ಶಿ (ಸಾಗರೋತ್ತರ ಭಾರತೀಯ ವ್ಯವಹಾರಗಳು)