ಜಿಲ್ಲಾಧಿಕಾರಿ ಕಚೇರಿಯಲ್ಲಿ ಡಿಸಿ ಗುರುದತ್ತ ಹೆಗಡೆ ಗ್ರಾಹಕರ ಸಂರಕ್ಷಣಾ ಸಭೆ ನಡೆಸಿದರು. ಅವಿನ್, ರಾಜು, ಕೆ.ಎನ್.ವೆಂಕಟಗಿರಿ, ಎಂ.ಎಸ್.ಜಯಸ್ವಾಮಿ ಇದ್ದರು. 
ನ್ಯೂಸ್

ಆಹಾರ ಕಲಬೆರಕೆ ತಡೆಗೆ ಒತ್ತು ನೀಡಿ: ಡಿಸಿ

ಶಿವಮೊಗ್ಗ: ಆಹಾರ ಕಲಬೆರಕೆ ತಡೆಗಟ್ಟುವ ಕುರಿತು ವ್ಯಾಪಕವಾಗಿ ದಾಳಿ ನಡೆಸಿ ಪ್ರಕರಣಗಳನ್ನು ದಾಖಲಿಸಬೇಕೆಂದು ಆಹಾರ ಸುರಕ್ಷತಾ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಸೂಚನೆ ನೀಡಿದರು.

ಡಿಸಿ ಕಚೇರಿಯಲ್ಲಿ ಬುಧವಾರ ಗ್ರಾಹಕರ ಸಂರಕ್ಷಣಾ ಸಭೆ ನಡೆಸಿದ ಅವರು, ಮಾರುಕಟ್ಟೆ ಹಾಗೂ ಯಾವುದೇ ಕ್ಷೇತ್ರದಲ್ಲಿ ಗ್ರಾಹಕರಿಗೆ ಅನಾನುಕೂಲವಾಗದಂತೆ ಕ್ರಮ ವಹಿಸಬೇಕು. ಆಹಾರ ಕಲಬೆರಕೆ ಕುರಿತು ಸಾಕಷ್ಟು ದೂರುಗಳು ಬರುತ್ತಿದ್ದು ಆಹಾರ ಕಲಬೆರಕೆ ತಡೆಟ್ಟುವ ಕೆಲಸ ಆಗಬೇಕಿದೆ ಎಂದು ಸೂಚಿಸಿದರು.
ರೈಲ್ವೆ ನಿಲ್ದಾಣ, ಬಸ್ ನಿಲ್ದಾಣಗಳಲ್ಲಿ ಕುಡಿಯುವ ನೀರು, ತಂಪು ಪಾನೀಯಗಳು, ಬಿಸ್ಕತ್ತು, ಚಾಕಲೇಟುಗಳಿಗೆ ಗ್ರಾಹಕರಿಂದ ಹೆಚ್ಚುವರಿಯಾಗಿ ಹಣ ಪಡೆದುಕೊಳ್ಳುತ್ತಿರುವ ಬಗ್ಗೆಯೂ ದೂರುಗಳು ಬಂದಿದ್ದು, ಈ ಬಗ್ಗೆ ತಪಾಸಣೆ ನಡೆಸಿ ದಂಡ ವಿಧಿಸುವಂತೆ ಕಾನೂನು ಮಾಪನ ಶಾಸ್ತ್ರ ಇಲಾಖೆ ಸಹಾಯಕ ನಿಯಂತ್ರಕರಿಗೆ ಹಾಗೂ ಭದ್ರಾವತಿ ತಾಲೂಕಿನಲ್ಲಿ ಬೆಲ್ಲ ತಯಾರಿಕಾ ಘಟಕಗಳಲ್ಲಿ ರಾಸಾಯನಿಕ ವಸ್ತು ಬಳಕೆ ಮಾಡಲಾಗುತ್ತಿದೆ ಎನ್ನುವ ದೂರುಗಳಿದ್ದು ಈ ಕುರಿತು ಪರಿಶೀಲನೆ ನಡೆಸಿ ಕ್ರಮ ವಹಿಸಲು ಆಹಾರ ಸುರಕ್ಷತಾ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ನಿಲ್ದಾಣಗಳಲ್ಲಿ ಶೌಚ ಗೃಹಗಳ ಬಳಕೆಗೆ ಹೆಚ್ಚುವರಿ ಶುಲ್ಕ ವಸೂಲಾತಿ ಮಾಡುತ್ತಿರುವ ಕುರಿತು ಹಾಗೂ ಕಾರ್ಗೋ ಸೇವೆಗಳಿಗೂ ಹೆಚ್ಚುವರಿ ಮೊತ್ತ ವಸೂಲಿ ಮಾಡುತ್ತಿರುವ ಕುರಿತು ದೂರುಗಳು ಬಂದಿದ್ದು ಈ ಬಗ್ಗೆ ಸೂಕ್ತ ವಿಚಾರಣೆ ನಡೆಸಿ ತಪ್ಪಿತಸ್ಥರಿಗೆ ಶಿಸ್ತು ಕ್ರಮ ತೆಗೆದುಕೊಳ್ಳಬೇಕೆಂದು ಕೆಎಸ್‌ಆರ್‌ಟಿಸಿ ನಿಗಮದ ಅಧಿಕಾರಿಗಳಿಗೆ ಸೂಚಿಸಿದರು.
ಹೋಟೆಲ್ ಹಾಗೂ ಫಾಸ್ಟ್‌ಫುಡ್ ತಯಾರಿಕಾ ಅಂಗಡಿಗಳಲ್ಲಿ ನಿಷೇಧಿತ ಆಹಾರಗಳ ಬಣ್ಣಗಳನ್ನು ಬಳಸುತ್ತಿರುವ ಬಗ್ಗೆ ಹಾಗೂ ಅತಿ ಹೆಚ್ಚು ಅಜಿನೋ ಮೋಟೋ ಮತ್ತು ಟೇಸ್ಟಿಂಗ್ ಪೌಡರ್ ಬಳಕೆ ಮಾಡುತ್ತಿರುವ ಬಗ್ಗೆ ಸೂಕ್ತ ತಿಳುವಳಿಕೆ ನೀಡಿ ಹೋಟೆಲ್ ಮಾಲೀಕರು ಹಾಗೂ ಗ್ರಾಹಕರಿಗೆ ಜಾಗೃತಿ ಮೂಡಿಸುವಂತೆ ಆಹಾರ ಸುರಕ್ಷತಾ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರು.
ಮೆಡಿಕಲ್ ಸ್ಟೋರ್‌ಗಳು ಮತ್ತು ಜನೌಷಧ ಕೇಂದ್ರಗಳಲ್ಲಿ ಅಗತ್ಯ ಔಷಧಿಗಳು ಕಳಪೆ ಗುಣಮಟ್ಟದಿಂದ ಕೂಡಿರುವ ಬಗ್ಗೆ ಸಾರ್ವಜನಿಕರಿಂದ ಆಕ್ಷೇಪಣೆಗಳು ಕೇಳಿಬರುತ್ತಿದ್ದು ನಿಯಮಿತ ತಪಾಸಣೆ ಮತ್ತು ಅನಿರೀಕ್ಷಿತ ದಾಳಿಗಳನ್ನು ನಡೆಸುವಂತೆ ಸಹಾಯಕ ಔಷಧ ನಿಯಂತ್ರಕರಿಗೆ ತಿಳಿಸಿದರು.
ಆಹಾರ ಮತ್ತು ಗ್ರಾಹಕರ ಸರಬರಾಜು ಇಲಾಖೆ ಉಪ ನಿರ್ದೇಶಕ ಅವಿನ್, ಕಾನೂನು ಮಾಪನ ಶಾಸ್ತ್ರ ಇಲಾಖೆ ಸಹಾಯಕ ನಿಯಂತ್ರಕ ರಾಜು, ಆಹಾರ ಸುರಕ್ಷತಾ ಇಲಾಖೆ ಅಧಿಕಾರಿಗಳು, ಗ್ರಾಹಕ ರಕ್ಷಣಾ ಪರಿಷತ್ ಸದಸ್ಯರಾದ ಎಂ.ಎಸ್.ಜಯಸ್ವಾಮಿ, ವಿವಿಧ ಇಲಾಖೆಗಳ ಅಧಿಕಾರಿಗಳು ಪಾಲ್ಗೊಂಡಿದ್ದರು.

ಆರ್‌ಟಿಸಿಗೆ ಹೆಚ್ಚುವರಿ ಶುಲ್ಕ ಸಂಗ್ರಹ
ಇಂಟರ್‌ನೆಟ್ ಕೇಂದ್ರಗಳಲ್ಲಿ ಪಹಣಿ ಮತ್ತಿತರೆ ದಾಖಲೆ ಪಡೆಯುವ ವೇಳೆ ಸಾರ್ವಜನಿಕರಿಂದ ಹೆಚ್ಚುವರಿ ಶುಲ್ಕ ಪಡೆಯಲಾಗುತ್ತಿದೆ. ಆದ್ದರಿಂದ ಶುಲ್ಕ ವಿವರದ ನಾಮಫಲಕಗಳನ್ನು ಪ್ರದರ್ಶಿಸಬೇಕು. ಸಕಾಲ ಕುರಿತು ಕಾನೂನು, ಎಸ್‌ಓಪಿ ಇದ್ದರೂ ವಿವಿಧ ಇಲಾಖೆಗಳಲ್ಲಿ ಸಮರ್ಪಕವಾಗಿ ಅನುಷ್ಠಾನ ಆಗುತ್ತಿಲ್ಲವೆಂದು ಗ್ರಾಹಕ ರಕ್ಷಣಾ ಪರಿಷತ್ ಸದಸ್ಯ ಕೆ.ಎನ್.ವೆಂಕಟಗಿರಿ ದೂರಿದರು. ಇದಕ್ಕೆ ಪ್ರತಿಕ್ರಿಯಿಸಿದ ಡಿಸಿ, ಇಂಟರ್‌ನೆಟ್ ಕೇಂದ್ರಗಳಲ್ಲಿ ತಾವು ನೀಡುವ ಸೇವೆಗಳ ಶುಲ್ಕದ ವಿವರವಿರುವ ಫಲಕ ಪ್ರದರ್ಶಿಸಬೇಕು. ಇಲ್ಲವಾದಲ್ಲಿ ಪರವಾನಗಿ ರದ್ದುಗೊಳಿಸಲಾಗುವುದು. ಸಕಾಲ ಗಮನಿಸಲಾಗುತ್ತಿದೆ. ಸುಸೂತ್ರವಾಗಿ ನಡೆಯುತ್ತಿದೆ. ಸಮರ್ಪಕ ಅನುಷ್ಠಾನ ಆಗದೇ ಇರುವ ಬಗ್ಗೆ ಮಾಹಿತಿ ನೀಡಿದರೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.