ಎನ್.ಎಲ್. ಶಿವಮಾದು
ಬೆಂಗಳೂರು: ದೇಶಾದ್ಯಂತ ಇಂದು ಪ್ರೌಢ ಶಾಲೆಗಳಲ್ಲಿಯೂ ಮಕ್ಕಳು ಗಣಿತ, ಕಾಗುಣಿತ ಓದುವಲ್ಲಿ ಹಿಂದುಳಿಯುತ್ತಿರುವುದು ಸಂಶೋಧನೆಗಳಿಂದ ತಿಳದುಬಂದಿರುವ ಪರಿಣಾಮ, ಶಾಲಾ ಶಿಕ್ಷಣ ಇಲಾಖೆಯು ಪೂರ್ವ ಪ್ರಾಥಮಿಕ ಹಂತದಲ್ಲಿಯೇ ಸಂಖ್ಯಾಶಾಸಕ್ಕೆ ಒತ್ತು ನೀಡಿ ಚಟುವಟಿಕಾ ಪುಸ್ತಕಗಳನ್ನು ಸಿದ್ಧಪಡಿಸಿದೆ.
ಇದೇ ಮೊದಲ ಬಾರಿಗೆ ಆರಂಭಿಕ ಬಾಲ್ಯ ಆರೈಕೆ ಮತ್ತು ಶಿಕ್ಷಣ (ಇಸಿಸಿಇ) ವಿದ್ಯಾರ್ಥಿಗಳಿಗೆ ಅಭ್ಯಾಸ ಪುಸ್ತಕ, ಶಿಕ್ಷಕರ ಕೈಪಿಡಿ ಮತ್ತು ಶಿಕ್ಷಕರ ತರಬೇತಿ ಸಾಹಿತ್ಯದ ‘ಕರಡು ಪ್ರತಿ’ಗಳನ್ನು ಪ್ರಕಟಿಸಿದೆ. 2025-26ನೇ ಸಾಲಿನಿಂದ ರಾಜ್ಯದ ಸರ್ಕಾರಿ ಪೂರ್ವ ಪ್ರಾಥಮಿಕ ತರಗತಿ (ಎಲ್‌ಕೆಪ, ಯುಕೆಜಿ) ವಿದ್ಯಾರ್ಥಿಗಳಿಗೆ ಕಲಿಕಾ ಗುಣಮಟ್ಟವನ್ನು ಉತ್ತಮಪಡಿಸಲು ಭಾಷೆ-1- ಕನ್ನಡ, ಭಾಷೆ-2-ಇಂಗ್ಲಿಷ್ ಮತ್ತು ದ್ವಿ ಭಾಷೆಯಲ್ಲಿ ಗಣಿತ ಹಾಗೂ ಪರಿಸರ ಅಧ್ಯಯನ ಅಭ್ಯಾಸ ಪುಸ್ತಕರು, ಶಿಕ್ಷಕರ ಕೈಪಿಡಿ ಮತ್ತು ತರಬೇತಿ ಸಾಹಿತ್ಯಗಳನ್ನು ರಾಜ್ಯದ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಸಂಸ್ಥೆ (ಡಿಎಸ್‌ಇಆರ್‌ಟಿ) ಸಿದ್ಧಪಡಿಸಿದೆ.
ಅಭ್ಯಾಸ ಪುಸ್ತಕಗಳು ಹೇಗೆ ಅನುಕೂಲ:
ಪೂರ್ವ ಪ್ರಾಥಮಿಕ ಹಂತವು ಪ್ರಮುಖ ಘಟ್ಟವಾಗಿದೆ. ಈ ಹಂತದಲ್ಲಿ ಮಕ್ಕಳು ವಿಷಯವನ್ನು ಉತ್ತಮವಾಗಿ ಅರ್ಥಮಾಡಿಕೊಳ್ಳಲು ಮತ್ತು ಭಾಷೆಯನ್ನು ಸರಿಯಾಗಿ ಬಳಸುವ ಮೂಲಕ ಸಂವಹನ ಮತ್ತು ಕಲಿಕೆಯನ್ನು ಸುಧಾರಿಸಲು ಸದೃಢ ಅಡಿಪಾಯದ ಅವಶ್ಯಕತೆಯನ್ನು ಮನಗಂಡು ಚಿತ್ರಸಹಿತ ಚಟುವಟಿಕೆ ಪುಸ್ತಕಗಳನ್ನು ಸಿದ್ಧಪಡಿಸಲಾಗಿದೆ. ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಸಂವಹನ ಮತ್ತು ಅಭಿವ್ಯಕ್ತಿ ಕೌಶಲವನ್ನು ಉತ್ತಮಪಡಿಸಲು ಅನುಕೂಲವಾಗಲಿದೆ.
4ರಿಂದ 6 ವಯಸ್ಸಿನ ಮಕ್ಕಳ ಕಲಿಕೆಗಾಗಿ ವಿನ್ಯಾಸಗೊಳಿಸಲಾಗಿದ್ದು, ಇವುಗಳಲ್ಲಿ ಅಕ್ಷರ ಮತ್ತು ಪದಗಳನ್ನು ಗುರುತಿಸುವಿಕೆ, ಉಚ್ಚಾರಣೆ ಮತ್ತು ಬರವಣಿಗೆ, ಮೂಲಭೂತ ಸಂಖ್ಯಾಜ್ಞಾನ ಮತ್ತು ಸುತ್ತಲಿನ ಪರಿಸರ ಅರಿವನ್ನು ಮೂಡಿಸಲು ಅರ್ಥಪೂಃರ್ಣ ಹಾಗೂ ಸರಳ ಚಟುವಟಿಕೆಗಳನ್ನು ಅಳವಡಿಸಲಾಗಿದೆ.
ಪುಸ್ತಕಗಳಲ್ಲಿ ಏನೆಲ್ಲ ಅಂಶಗಳಿವೆ?
ಚಟುವಟಿಕೆ ಪುಸ್ತಕಗಳಲ್ಲಿ ಕತೆ, ಹಾಡು, ಪ್ರಾಸಗೀತೆಗಳು, ಸುತ್ತಲಿನ ಸಸ್ಯ ಮತ್ತು ಪ್ರಾಣಿಗಳನ್ನು ಗುರುತಿಸುವುದು, ಕಲೆ ಮತ್ತು ಕರಕುಶಲ ಚಟುವಟಿಕೆಗಳು, ಚಿತ್ರ ಬರೆಯುವುದು, ಬಣ್ಣ ತುಂಬುವುದು, ಪದಗಳನ್ನು ಸ್ಪಷ್ಟವಾಗಿ ಉತ್ತರಿಸುವುದು ಹಾಗೂ ಬರೆಯುವುದು ಒಳಗೊಂಡಂತೆ ಸೃಜನಶೀಲ ಆಟ ಅಥವಾ ರಚನಾತ್ಮಕ ಕಲಿಕಾ ಚಟುವಟಿಕೆಗಳನ್ನು ಅಳವಡಿಸಲಾಗಿದೆ. ಈ ಮೂಲಕ ಕ್ರಿಯಾಶೀಲತೆಯನ್ನು ಕಲಿಕೆಯೊಂದಿಗೆ ಸಮನ್ವಯಗೊಳಿಸುವ ಪ್ರಯತ್ನ ಇದಾಗಿದೆ.
ಭಾವನಾತ್ಮಕ ನಡವಳಿಕೆ, ಸಾಮರ್ಥ್ಯ ವೃದ್ಧಿ
- ಆಟಿಕೆ ಮತ್ತು ಆಟಗಳ ಮೂಲಕ ಕಲಿಕೆಯೊಂದಿಗೆ ಇತರ ವಿವಿಧ ಚಟುವಟಿಕೆಗಳನ್ನು ಒಳಗೊಂಡಿದೆ. ಕತೆ, ಹಾಡುಗಳಲ್ಲಿ ವಿಮರ್ಶಾತ್ಮಕ ಚಿಂತನೆ, ಸಮಸ್ಯೆ ಪರಿಹರಿಸುವ ಸಾಮರ್ಥ್ಯ ಹೊಂದಲಾಗಿದೆ. ವ್ಯಕ್ತಿಯ ಸಾಮಾಜಿಕ ಮತ್ತು ಭಾವನಾತ್ಮಕ ನಡವಳಿಕೆ ಮತ್ತು ಒಟ್ಟು ಆರೋಗ್ಯವು ಆರಂಭಿಕ ವರ್ಷಗಳಲ್ಲಿ ಕಲಿಕೆ ಮೇಲೆ ಅವಲಂಬಿತವಾಗಿದ್ದು, ಆರಂಭಿಕ ವರ್ಷಗಳಲ್ಲಿ ಮಕ್ಕಳಿಗೆ ಉತ್ತಮ ಪೋಷಣೆ ಅತ್ಯಗತ್ಯವಾಗಿದೆ ಎನ್ನುತ್ತಾರೆ.
ಆಕ್ಷೇಪಣೆ ಆಹ್ವಾನ:
ಕೈಪಿಡಿ ಕರಡು ಪ್ರತಿಗಳನ್ನು ಸಿಎಸ್‌ಇಆರ್‌ಟಿ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ. ತಮ್ಮ ಆಕ್ಷೇಪಣೆ, ಸಲಹೆ, ಸೂಚನೆಗಳಿದ್ದಲ್ಲಿ ಶಿಕ್ಷಕರು, ಪಾಲಕರು ಹಾಗೂ ಅಧಿಕಾರಿಗಳಿಂದ ಅಭಿಪ್ರಾಯ ಪಡೆದು ಮತ್ತಷ್ಟು ಉತ್ತಮವಾಗಿ ಸಿದ್ಧಪಡಿಸಲಾಗುತ್ತದೆ. ಆಸಕ್ತರು ಒಂದು ವಾರದೊಳಗೆ ತಮ್ಮ ಅಭಿಪ್ರಾಯವನ್ನು ತಿಳಿಸಬಹುದಾಗಿದೆ.
ಈ ಪುಸ್ತಕದಲ್ಲಿನ ಚಟುವಟಿಕೆಗಳು ವಿಮರ್ಶಾತ್ಮಕ ಚಿಂತನೆ, ಸೃಜನಶೀಲತೆ ಮತ್ತು ಸಮಸ್ಯೆ ಪರಿಹರಿಸುವಂತಹ ಕೌಶಲಗಳನ್ನು ಪಡೆಯಲು ಮಕ್ಕಳಿಗೆ ಸಹಕಾರಿಯಾಗುತ್ತದೆ. ಇದೇ ಮೊದಲ ಬಾರಿಗೆ ಪೂರ್ವ ಪ್ರಾಥಮಿಕ ತರಗತಿ ವಿದ್ಯಾರ್ಥಿಗಳಿಗೆ ವ್ಯವಸ್ಥಿತ ಕಲಿಕಾ ಲ ಆಧಾರಿತ ಚಟುವಟಿಕಾ ಪುಸ್ತಕಗಳನ್ನು ಅಭಿವೃದ್ಧಿಪಡಿಸಲಾಗಿದೆ. - ಎಚ್.ಎನ್. ಗೋಪಾಲಕೃಷ್ಣ, ಡಿಎಸ್‌ಇಆರ್‌ಟಿ ನಿರ್ದೇಶಕ