ಶಿವಮೊಗ್ಗ: ಜಲವಿದ್ಯುತ್ ಉತ್ಪಾದನೆಗೆ ನೀರೊದಗಿಸುವ ಜಲಾಶಯಗಳು ಈ ಬಾರಿ ಭರ್ತಿ ಆಗಿರುವುದರಿಂದ ಉಷ್ಣ ವಿದ್ಯುತ್ ಸ್ಥಾವರಗಳ ಮೇಲೆ ಒತ್ತಡ ಕಡಿಮೆಯಾಗಿದೆ. ರಾಜ್ಯದೆಲ್ಲೆಡೆ ವ್ಯಾಪಕ ಮಳೆ ಆಗಿರುವುದರಿಂದ ಕೃಷಿ, ಗೃಹ ಬಳಕೆಯ ವಿದ್ಯುತ್ ಬೇಡಿಕೆಯೂ ತಗ್ಗಿದೆ.
ಜಲವಿದ್ಯುತ್ ಉತ್ಪಾದನೆಯ ವೆಚ್ಚ ತೀರಾ ಕಡಿಮೆ ಆಗಿರುವುದರಿಂದ ಕೆಪಿಸಿ (ಕರ್ನಾಟಕ ಪವರ್ ಕಾರ್ಪೋರೇಷನ್)ಗೆ ಹೆಚ್ಚು ಲಾಭದಾಯಕವಾಗಲಿದೆ. ಮೇ ತಿಂಗಳಲ್ಲಿ ಉಷ್ಣ ವಿದ್ಯುತ್ ಸ್ಥಾವರಗಳು ಸುಮಾರು 70 ಮಿಲಿಯನ್ ಯೂನಿಟ್ ವಿದ್ಯುತ್ ಉತ್ಪಾದನೆ ಮಾಡುವಂತೆ ಬೇಡಿಕೆ ಸಲ್ಲಿಸಲಾಗುತ್ತಿತ್ತು. ಈಗ ಅದರ ಅರ್ಧದಷ್ಟನ್ನು ಮಾತ್ರ ಉಷ್ಣ ವಿದ್ಯುತ್ ಸ್ಥಾವರಗಳು ಉತ್ಪಾದಿಸುತ್ತಿವೆ.
ಕಳೆದ ವರ್ಷ ಸಮರ್ಪಕ ಮಳೆಯಾಗ ಕಾರಣ ಜಲ ವಿದ್ಯುತ್ ಉತ್ಪಾದನೆ ನಿರೀಕ್ಷಿತ ಪ್ರಮಾಣದಲ್ಲಿ ಆಗಿರಲಿಲ್ಲ. ಉಷ್ಣ ವಿದ್ಯುತ್ ಸ್ಥಾವರಗಳಿಗೆ ಕೆಲ ಸಮಯ ಕಲ್ಲಿದ್ದಲು ಪೂರೈಕೆಯಲ್ಲೂ ಸಮಸ್ಯೆ ಉದ್ಭವವಾಗಿತ್ತು. ಇದರಿಂದ ವಿದ್ಯುತ್ ಪೂರೈಕೆಯಲ್ಲಿ ಅಡಚಣೆ ಉಂಟಾಗುತ್ತಿತ್ತು.
ಕಳೆದ ವರ್ಷ ಜೂನ್‌ನಲ್ಲಿ ಮುಂಗಾರು ಆರಂಭ ವಿಳಂಬವಾದ ಪರಿಣಾಮ ಲಿಂಗನಮಕ್ಕಿ ಜಲಾಶಯದಲ್ಲಿ ದಿನೇದಿನೆ ನೀರಿನ ಪ್ರಮಾಣ ಕುಸಿದಿತ್ತು. ಆ ಸಂದರ್ಭ ಡ್ಯಾಂ ಪವರ್ ಹೌಸ್‌ನ ಎರಡೂ ಘಟಕಗಳಲ್ಲೂ ಉತ್ಪಾದನೆ ಸ್ಥಗಿತಗೊಳಿಸಲಾಗಿತ್ತು. ಆದರೆ ಮುಂದಿನ ಮುಂಗಾರು ಮಳೆಯವರೆಗೂ ವಿದ್ಯುತ್‌ಗೆ ತೊಂದರೆ ಇಲ್ಲ ಎನ್ನುವ ಸ್ಥಿತಿ ಈಗಿದೆ.
ನಾಡಿಗೆ ಬೆಳಕು ನೀಡುವ ಲಿಂಗನಮಕ್ಕಿ ಜಲಾಶಯ ಸಂಪೂರ್ಣ ಭರ್ತಿಯಾಗಲು ದಿನಗಣನೆ ಆರಂಭವಾಗಿದೆ. ಸೂಪಾ ಜಲಾಶಯದಲ್ಲೂ ನೀರು ಸಂಗ್ರಹ ಗರಿಷ್ಠ ಮಟ್ಟದಲ್ಲಿದೆ. ಮಾಣಿ ಜಲಾಶಯ ಶೇ.70ರಷ್ಟು ಭರ್ತಿಯಾಗಿದೆ. ಇನ್ನೂ ಮಳೆಗಾಲ ಇರುವುದರಿಂದ ಇದು ತುಂಬುವುದು ಅಸಾಧ್ಯವೇನಲ್ಲ. ಹೀಗಾಗಿ ಜಲವಿದ್ಯುತ್ ಉತ್ಪಾದನಾ ಘಟಕಗಳ ಸ್ಥಿತಿ ಅತ್ಯಂತ ಆಶಾದಾಯಕವಾಗಿದೆ.
ಲಿಂಗನಮಕ್ಕಿ ಕೊಡುಗೆ ದೊಡ್ಡದು: 1,436 ಮೆಗಾವಾಟ್ ವಿದ್ಯುತ್ ಪೂರೈಸುವ ಸಾಮರ್ಥ್ಯವಿರುವ ಲಿಂಗನಮಕ್ಕಿಯಲ್ಲಿ ಶರಾವತಿ ಜಲವಿದ್ಯುದಾಗಾರ 10 ವಿದ್ಯುತ್ ಉತ್ಪಾದನಾ ಘಟಕಗಳನ್ನು ಹೊಂದಿದೆ. ಪ್ರತಿ ಘಟಕವೂ 103.50 ಮೆ.ವಾ ವಿದ್ಯುತ್ ಉತ್ಪಾದಿಸುವ ಕ್ಷಮತೆ ಹೊಂದಿವೆ. ಗೇರುಸೊಪ್ಪದ ನಾಲ್ಕು ಉತ್ಪಾದನಾ ಘಟಕಗಳ ಪೈಕಿ ಪ್ರತಿಯೊಂದೂ ತಲಾ 60 ಮೆ.ವಾ. ವಿದ್ಯುತ್ ಉತ್ಪಾದಿಸುತ್ತವೆ. ಲಿಂಗನಮಕ್ಕಿ ಡ್ಯಾಂ ಪವರ್ ಹೌಸ್‌ನಲ್ಲಿ 27.5 ಮೆ.ವಾ. ಸಾಮರ್ಥ್ಯದ 2 ಘಟಕ, ಮಹಾತ್ಮ ಗಾಂಧಿ ಜಲ ವಿದ್ಯುದಾಗಾರದಲ್ಲಿ 13.2 ಮೆ.ವಾ. ಸಾಮರ್ಥ್ಯದ 4 ಘಟಕ ಮತ್ತು 21.6 ಮೆ.ವಾ. ಉತ್ಪಾದನಾ ಸಾಮರ್ಥ್ಯದ ನಾಲ್ಕು ಘಟಕಗಳಿವೆ. ಜಲವಿದ್ಯುತ್ ಉತ್ಪಾದನೆಗೆ ಲಿಂಗನಮಕ್ಕಿ ಜಲಾಶಯದ ಕೊಡುಗೆ ದೊಡ್ಡದು.
ಉತ್ಪಾದನಾ ವೆಚ್ಚ ಕಡಿಮೆ:ಲಿಂಗನಮಕ್ಕಿ ಜಲಾಶಯದ ನೀರನ್ನು ಬಳಸಿ ಉತ್ಪಾದಿಸುವ ವಿದ್ಯುತ್‌ಗೆ ಅತ್ಯಂತ ಕಡಿಮೆ ಉತ್ಪಾದನಾ ವೆಚ್ಚ ತಗುಲುತ್ತದೆ ಎಂಬುದು ವಿಶೇಷ. ಶರಾವತಿ ಹಾಗೂ ಲಿಂಗನಮಕ್ಕಿ ಘಟಕಗಳಲ್ಲಿ ಪ್ರತಿ ಯೂನಿಟ್‌ಗೆ 60.04 ಪೈಸೆ, ಮಹಾತ್ಮ ಗಾಂಧಿ ಪವರ್ ಹೌಸ್‌ನಲ್ಲಿ 87.49 ಪೈಸೆ ಹಾಗೂ ಗೇರುಸೊಪ್ಪದಲ್ಲಿ 1 ರೂ. 83 ಪೈಸೆ ಖರ್ಚು ಮಾಡಲಾಗುತ್ತದೆ. ಇದು ಕೆಪಿಸಿಗೆ ಅತ್ಯಂತ ಲಾಭದಾಯಕವಾಗಿದೆ.