ಶನಿವಾರಸಂತೆ: ಶನಿವಾರಸಂತೆ ಮತ್ತು ಕೊಡ್ಲಿಪೇಟೆ ಹೋಬಳಿಗೆ ಸೇರಿದ ವಿವಿಧ ಗ್ರಾಮ ಪಂಚಾಯಿತಿಗಳಿಗೆ ಸಂಬಂಧಿಸಿದ ಕುಂದು ಕೊರತೆ, ಜಟಿಲವಾದ ಸಮಸ್ಯೆಗಳ ಕುರಿತು ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರೊಂದಿಗೆ ಮಾಧ್ಯಮ ಸಂವಾದವನ್ನು ಸೋಮವಾರ ಪ್ರೆಸ್ ಕ್ಲಬ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಶನಿವಾರಸಂತೆ, ದುಂಡಳ್ಳಿ, ಹಂಡ್ಲಿ, ಕೊಡ್ಲಿಪೇಟೆ ಬೆಸೂರು ಮತ್ತು ಆಲೂರು ಸಿದ್ದಾಪುರ ಗ್ರಾ.ಪಂ.ಗಳ ಅಧ್ಯಕ್ಷರು, ಉಪಾಧ್ಯಕ್ಷರು ಪಾಲ್ಗೊಂಡು ತಮ್ಮ ಗ್ರಾ.ಪಂ. ಅಭಿವೃದ್ಧಿಯ ಬಗ್ಗೆ ಮತ್ತು ಸಮಸ್ಯೆಗಳ ಬಗ್ಗೆಯೂ ಹೇಳಿಕೊಂಡರೆ ಪತ್ರಕರ್ತರು ಪ್ರತಿಯೊಂದು ಗ್ರಾ.ಪಂ.ಗಳಲ್ಲಿ ಕಂಡುಬಂದ ಕುಂದುಕೊರತೆ, ಸಮಸ್ಯೆಗಳ ಸರಮಾಲೆಯನ್ನು ಮಾಧ್ಯಮ ಸಂವಾದದಲ್ಲಿ ತೆರೆದಿಟ್ಟರು.
ಕೊಡಗು-ಹಾಸನ ಗಡಿಭಾಗದಲ್ಲಿರುವ ಬೆಸೂರು ಗ್ರಾ.ಪಂ. ಉಪಾಧ್ಯಕ್ಷ ಹರೀಶ್ ಹಕ್ಕುಪತ್ರ ಸಮಸ್ಯೆ ಬಗ್ಗೆ ಮಾತನಾಡಿ, ದೊಡ್ಡ ಭಂಡಾರ ಗ್ರಾಮದಲ್ಲಿ ಸುಮಾರು 40 ಕುಂಟುಂಬ 60 ವರ್ಷಗಳಿಂದ ವಾಸವಿದ್ದಾರೆ. ಆದರೆ ಅರಣ್ಯ ಇಲಾಖೆ ಅವರಿಗೆ ಹಕ್ಕುಪತ್ರ ವಿತರಿಸಲು ಆಕ್ಷೇಪ ವ್ಯಕ್ತಪಡಿಸುತ್ತಿದೆ. ಹೇಮಾವತಿ ಮುಳುಗಡೆಯಾದ ಸರ್ವೇ ನಂ.4733ರಲ್ಲಿ ನೂರು ಮನೆಗಳಿಗೆ ಹಕ್ಕುಪತ್ರ ನೀಡಿಲ್ಲ. ಜಿಲ್ಲಾಧಿಕಾರಿ ಈ ಕುರಿತು ಗಮನ ಹರಿಸುವಂತೆ ಒತ್ತಾಯಿಸಿದರು. ಬೆಸೂರು ಗ್ರಾ.ಪಂ.ವ್ಯಾಪ್ತಿಯಲ್ಲಿ ಕಾಡಾನೆ ಕಾಡುಪ್ರಾಣಿಗಳ ಸಮಸ್ಯೆ, ಗ್ರಾಮೀಣ ರಸ್ತೆಗಳ ದುಸ್ಥಿತಿ, ಗ್ರಾಪಂ ಸಿಬ್ಬಂದಿ ಕೊರತೆ ಪತ್ರಕರ್ತರು ಪ್ರಶ್ನಿಸಿದರು. ಗ್ರಾಪಂ ಅಧ್ಯಕ್ಷೆ ಕಮಲಮ್ಮ ಸಮಜಾಯಿಷಿ ನೀಡಿದರು.
ಕೊಡ್ಲಿಪೇಟೆ ಗ್ರಾಪಂ ಸದಸ್ಯ ಚಂದ್ರಶೇಖರ್ ಪಂಚಾಯಿತಿ ಅಭಿವೃದ್ಧಿ ಕಾರ್ಯ ಕುರಿತು ಮಾತನಾಡಿದರು. ಸಂತೆ, ಮಾರುಕಟ್ಟೆ ಅಭಿವೃದ್ಧಿ, ಹಂಪಾಪುರ ರಸ್ತೆ ಅಭಿವೃದ್ಧಿ ಕಾರ್ಯಕ್ಕೆ ಶಾಸಕರು ಹೆಚ್ಚಿನ ಅನುದಾನ ನೀಡಬೇಕೆಂದು ಒತ್ತಾಯಿಸಿದರು.
ಆಲೂರು ಸಿದ್ದಾಪುರ ಗ್ರಾಪಂ ಉಪಾಧ್ಯಕ್ಷ ಚಂದ್ರಮೋಹನ್ ಮಾತನಾಡಿ, ಪಂಚಾಯಿತಿ ವ್ಯಾಪ್ತಿಯ ಸರ್ಕಾರಿ ಶಾಲೆಯಲ್ಲಿ ಗ್ರಾ.ಪಂ.ನಿಂದ ಉದ್ಯಾನ ನಿರ್ಮಿಸಲಾಗಿದೆ. ಆದರೆ ಶಾಲೆಯಲ್ಲಿ ಮಕ್ಕಳ ಹಾಜರಾತಿ ಪ್ರಮಾಣ ಕುಸಿಯುತ್ತಿದೆ ಎಂದು ಬೇಸರಿಸಿದರು. ಗ್ರಾಮೀಣ ರಸ್ತೆಗಳು ಹಾಳಾಗುತ್ತಿವೆ. ಆಲೂರು ಸಿದ್ದಾಪುರದಲ್ಲಿ ಚರಂಡಿ ಇದ್ದರೂ ಸರಿಯಾಗಿ ನಿರ್ವಹಣೆ ಮಾಡದಿರುವುದರಿಂದ ಮಾಲಿನ್ಯ ಉಂಟಾಗುತ್ತಿದೆ. ಸಾರಿಗೆ ಬಸ್ ನಿಲ್ದಾಣ ಪ್ರಸ್ತಾವನೆ ನನೆಗುದಿಗೆ ಬಿದ್ದಿರುವುದು ಮುಂತಾದ ಸಮಸ್ಯೆಗಳ ಬಗ್ಗೆ ಪತ್ರಕರ್ತರು ಗಮನ ಸೆಳೆದರು. ಪ್ರೆಸ್ ಕ್ಲಬ್ ಅಧ್ಯಕ್ಷ ಹರೀಶ್‌ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ವರ್ತಕರ ಸಂಘಧ ಅಧ್ಯಕ್ಷ ಸರ್ದಾರ್ ಆಹಮ್ಮದ್ ಸಂವಾದ ಉದ್ಘಾಟಿಸಿದರು.