ಬೆಂಗಳೂರು: ರಾಜ್ಯದಲ್ಲಿ ಘಟಕ ಸ್ಥಾಪನೆಗೆ ಜವಳಿ ಉದ್ಯಮಿಗಳ ಆಕರ್ಷಣೆಗೆ ಅಗತ್ಯ ನೆರವು ಕೋರಿ ಶೀಘ್ರದಲ್ಲಿ ಮುಖ್ಯಮಂತ್ರಿಗೆ ಭೇಟಿಯಾಗುವೆ. ಮಧ್ಯಪ್ರದೇಶ, ತಮಿಳುನಾಡು ಸೇರಿ ವಿವಿಧ ರಾಜ್ಯಗಳಲ್ಲಿನ ನೀತಿ ವರದಿ ಸಿದ್ದಪಡಿಸಬೇಕು ಎಂದು ಇಲಾಖೆ ಅಧಿಕಾರಿಗಳಿಗೆ ಜವಳಿ ಸಚಿವ ಶಿವಾನಂದ ಪಾಟೀಲ ನಿರ್ದೇಶನ ನೀಡಿದರು.
ವಿಧಾನಸೌಧ ಸಮಿತಿ ಕೊಠಡಿಯಲ್ಲಿ ಕರ್ನಾಟಕ ನೂತನ ಜವಳಿ ಮತ್ತು ಸಿದ್ದ ಉಡುಪು ನೀತಿ ಅನುಷ್ಠಾನ ಕುರಿತ ಉನ್ನತ ಮಟ್ಟದ ಸಬಲೀಕರಣ ಸಮಿತಿ ಸಭೆ ಅಧ್ಯಕ್ಷತೆವಹಿಸಿ ಮಂಗಳವಾರ ಮಾತನಾಡಿದ ಅವರು, ಬೇರೆ ರಾಜ್ಯಗಳು ನೀಡುತ್ತಿರುವ ಸೌಲಭ್ಯ, ಪ್ರೋತ್ಸಾಹಕಗಳ ಮಾಹಿತಿಯು ವರದಿಯಲ್ಲಿರಲಿ ಎಂದು ಸೂಚಿಸಿದರು.
ಬಾಂಗ್ಲಾ ದೇಶದಲ್ಲಿನ ಪ್ರತಿಕೂಲ ಪರಿಸ್ಥಿತಿ ಪರಿಣಾಮ ಅಲ್ಲಿನ ಜವಳಿ ಉದ್ಯಮ ಬೇರೆಡೆಗೆ ಸ್ಥಳಾಂತರವಾಗುತ್ತಿದ್ದು, ಕರ್ನಾಟಕಕ್ಕೆ ಸೆಳೆಯಲು ಪ್ರಯತ್ನಿಸಿ, ತಮಿಳುನಾಡಿನಲ್ಲಿ ಉದ್ಯಮ ಸುಸ್ಥಿತಿಯಲ್ಲಿರುವ ಬಗ್ಗೆ ಅಧ್ಯಯನ ಮಾಡಬೇಕು ಎಂದು ಸಚಿವ ಶಿವಾನಂದ ಪಾಟೀಲ ತಿಳಿಸಿದ್ದಾರೆ. ವಿಳಂಬದಿಂದ ಉದ್ಯಮಿಗಳು ಹಿಂದೇಟು
ಇಲಾಖೆಯ ನೆರವು ಸಹಕಾರ ನೀಡುವುದು ವಿಳಂಬವಾದರೆ ಉದ್ಯಮಿಗಳು ರಾಜ್ಯದಲ್ಲಿ ಬಂಡವಾಳ ಹೂಡಿಕೆ ಮಾಡಲು ಸಹಜವಾಗಿ ಹಿಂದೇಟು ಹಾಕುತ್ತಾರೆ. ಇದನ್ನು ಗಮನದಲ್ಲಿಟ್ಟುಕೊಂಡು ಕೆಲಸ ಮಾಡಿ ಎಂದು ಸಲಹೆ ನೀಡಿದರು.
ಮಹಾರಾಷ್ಟ್ರ ಮಾದರಿಯಲ್ಲೇ ವಿದ್ಯುತ್ ನೀತಿ ಅನುಸರಣೆ ಅಗತ್ಯವಿದೆ. ಕಳೆದ ಎರಡೂವರೆ ವರ್ಷಗಳಲ್ಲಿ ಎಷ್ಟು ಉದ್ಯಮಿಗಳು ಹೂಡಿದರು, ಹಿಂದೆ ಸರಿದರು ಎಂಬ ಬಗ್ಗೆ ಕಾರಣ ಸಹಿತ ಒಂದೆರಡು ದಿನಗಳಲ್ಲಿ ಮಾಹಿತಿ ಕೊಡಬೇಕು ಎಂದರು.
ಬೆಂಗಳೂರಿನ ಕಬ್ಬನ್ ಪೇಟೆ, ಕಾಟನ್ ಪೇಟೆ ಮತ್ತಿತರ ಕಡೆ ಇರುವ ನೇಕಾರರಿಗೆ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು. ಪೂರ್ಣ ಪ್ರಮಾಣದಲ್ಲಿ ಇರುವ ನೇಕಾರರ ಕಾಲನಿಗೆ ವಿನಾಯಿತಿ ನೀಡುವಂತೆ ಮಾಲಿನ್ಯ ನಿಯಂತ್ರಣ ಮಂಡಳಿಗೆ ಮನವರಿಕೆ ಮಾಡಿಕೊಡಬೇಕು ಎಂದು ಸಚಿವ ಶಿವಾನಂದ ಪಾಟೀಲ ಸೂಚಿಸಿದರು.
ಕಲಬುರಗಿಯಲ್ಲಿ ಪಿಎಂ ಮಿತ್ರ ಪಾರ್ಕ್ ಯೋಜನೆಯನ್ನು ತ್ವರಿತವಾಗಿ ಅನುಷ್ಠಾನಕ್ಕೆ ತರಲು ಅಗತ್ಯ ಕ್ರಮ ಕೈಗೊಳ್ಳಬೇಕು, ಇದಕ್ಕಾಗಿ ಒಂದು ಸಾವಿರ ಎಕರೆ ಜಮೀನು ನೀಡಲಾಗಿದೆ. ಬೇರೆ ರಾಜ್ಯಗಳಲ್ಲಿ ಕೈಗೊಂಡ ಕ್ರಮಗಳಲ್ಲಿ ಉತ್ತಮವಾದುದನ್ನು ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಪಿಎಂ ಮಿತ್ರ ಪಾರ್ಕ್ ಪ್ರಗತಿ ಪರಿಶೀಲಿಸಿದ ಸಚಿವ ಶಿವಾನಂದ ಪಾಟೀಲ ಅವರಿಗೆ ಕಂದಾಯ ಇಲಾಖೆಯಿಂದ ಇಸಿ ಲಭ್ಯವಾಗಿದ್ದು, 1.3 ಕಿಮೀ ರಸ್ತೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗಿದೆ. ಕುಡಿಯುವ ನೀರು ಪೂರೈಕೆ ಪೈಪ್‌ಲೈನ್ ನಿರ್ಮಾಣ ಮಾಡಲು ಭೀಮಾ ನದಿಗೆ ಬ್ಯಾರೇಜ್ ನಿರ್ಮಿಸಬೇಕಿದೆ ಎಂದು ಅಧಿಕಾರಿಗಳು ವಿವರಿಸಿದರು.