ನ್ಯೂಸ್

ಎಮ್ಮಿ ಅವಾರ್ಡ್ಸ್ 2023: ಇತಿಹಾಸ ನಿರ್ಮಿಸಿದ ನಿರ್ದೇಶಕಿ ಏಕ್ತಾ ಕಪೂರ್!

ನ್ಯೂಯಾರ್ಕ್​: 51 ನೇ ಅಂತಾರಾಷ್ಟ್ರೀಯ ಎಮ್ಮಿ ಪ್ರಶಸ್ತಿ ಸಮಾರಂಭ ಸೋಮವಾರ ರಾತ್ರಿ ನ್ಯೂಯಾರ್ಕ್ ನಗರದಲ್ಲಿ ಅದ್ದೂರಿಯಾಗಿ ನಡೆದಿದ್ದು, ಭಾರತೀಯ ಚಿತ್ರರಂಗದ ಪ್ರಸಿದ್ಧ ನಿರ್ಮಾಪಕಿ ಹಾಗೂ ನಿರ್ದೇಶಕಿಯೂ ಆದ ಏಕ್ತಾ ಕಪೂರ್ ಅವರು ಎಮ್ಮಿ ಅವಾರ್ಡ್​ ಸ್ವೀಕರಿಸುವ ಮೂಲಕ ಇತಿಹಾಸವೊಂದನ್ನು ಸೃಷ್ಟಿಸಿದ್ದು, ಇದೀಗ ಅಪಾರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಎಮ್ಮಿ ಅವಾರ್ಡ್ಸ್ 2023ರ ಸಮಾರಂಭದಲ್ಲಿ ಪ್ರಶಸ್ತಿ ಗೆದ್ದು ಬೀಗಿದ ನಿರ್ದೇಶಕಿ ಏಕ್ತಾ ಕಪೂರ್​ ಅವರಿಗೆ ದೇಶವ್ಯಾಪಿ ಶ್ಲಾಘನೆ, ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ. ಮನರಂಜನಾ ಉದ್ಯಮಕ್ಕೆ ನೀಡಿದ ಮಹತ್ವದ ಕೊಡುಗೆಗಳಿಗಾಗಿ ಬಾಲಿವುಡ್ ನಿರ್ಮಾಪಕಿಗೆ ಅಂತಾರಾಷ್ಟ್ರೀಯ ಎಮ್ಮಿ ನಿರ್ದೇಶನಾಲಯ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.

ಖ್ಯಾತ ಲೇಖಕ ಮತ್ತು ನಟ ದೀಪಕ್ ಚೋಪ್ರಾ ಅವರಿಂದ ಪ್ರಶಸ್ತಿ ಸ್ವೀಕರಿಸಿದ ಏಕ್ತಾ ಕಪೂರ್, ಈ ಪ್ರತಿಷ್ಠಿತ ಗೌರವವನ್ನು ಸಾಧಿಸಿದ ಮೊದಲ ಮಹಿಳಾ ಭಾರತೀಯ ಚಲನಚಿತ್ರ ನಿರ್ಮಾಪಕಿಯಾಗಿ ಹೊರಹೊಮ್ಮಿದ್ದಾರೆ. ಸದ್ಯ ಈ ವಿಷಯ ಇದೀಗ ಟ್ರೇಡಿಂಗ್​ ಆಗುತ್ತಿದ್ದು, ಏಕ್ತಾ ಜತೆಗೆ ವೀರ್ ದಾಸ್ ಅವರು ಅತ್ಯುತ್ತಮ ಹಾಸ್ಯಕ್ಕಾಗಿ ಅಂತಾರಾಷ್ಟ್ರೀಯ ಎಮ್ಮಿ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು.

ನೆಟ್‌ಫ್ಲಿಕ್ಸ್ ಚಿತ್ರವಾದ ವೀರ್​ ದಾಸ್: ಲ್ಯಾಂಡಿಂಗ್​ ಸಿನಿಮಾದಲ್ಲಿನ ಅತ್ಯುತ್ತಮ ಹಾಸ್ಯ ನಟನೆಗೆ​ ವೀರ್ ಪ್ರಶಸ್ತಿಯನ್ನು ಪಡೆದುಕೊಂಡರು. ಈ ಗೌರವವನ್ನು ಸಾಧಿಸಿದ ಮೊದಲ ಭಾರತೀಯ ಹಾಸ್ಯನಟ ಎಂಬ ಹೆಗ್ಗಳಿಕೆಗೆ ಇದೀಗ ದಾಸ್​ ಪಾತ್ರರಾಗಿದ್ದಾರೆ,(ಏಜೆನ್ಸೀಸ್).