ಬೆಂಗಳೂರು: ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿಕೆ ಕುರಿತು ಕಾಂಗ್ರೆಸ್ ಹಾಗೂ ಬಿಜೆಪಿ ಸದಸ್ಯರ ನಡುವೆ ಏರಿದ ಧ್ವನಿಯಲ್ಲಿ ಆರೋಪ, ಪ್ರತ್ಯಾರೋಪ ನಡೆದು ವಿಧಾನಸಭೆಯಲ್ಲಿ ಕೋಲಾಹಲದ ವಾತಾವರಣ ನಿರ್ಮಾಣವಾಗಿತ್ತು.ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿದ್ದಂತೆಯೇ ಸ್ಪೀಕರ್ ಯು.ಟಿ.ಖಾದರ್ ಕಲಾಪವನ್ನು ಕೆಲ ಕಾಲ ಮುಂದೂಡಿದ ಪ್ರಸಂಗ ನಡೆಯಿತು.
ಬಳಿಕ ಪ್ರತಿಪಕ್ಷ ನಾಯಕ ಆರ್.ಅಶೋಕ ಅವರು, ವಿಧಾನಸಭೆ ಸಭಾಂಗಣದಲ್ಲಿ ಭಾರತ ಸಂವಿಧಾನದ ಪ್ರಸ್ತಾವನೆಯುಳ್ಳ ಎರಡು ಫಲಕ ಅಳವಡಿಸಿದ್ದು, ಅವುಗಳ ಪಕ್ಕದಲ್ಲಿ ರಾಷ್ಟ್ರ ಧ್ವಜ ಹಾಕಲಾಗಿದೆ. ಇದಕ್ಕಾಗಿ ಸಭಾಧ್ಯಕಕ್ಷರನ್ನು ಅಭಿನಂದಿಸುತ್ತೇವೆ. ಸಂವಿಧಾನವನ್ನು ನೋಡುವುದರಿಂದ ನಮ್ಮಲ್ಲಿ ದೇಶಭಕ್ತಿ ಉಕ್ಕುತ್ತದೆ ಎಂದರು.
ಅದಕ್ಕೆ ಡಿಸಿಎಂ ಡಿ.ಕೆ.ಶಿವಕುಮಾರ್, ಸಂವಿಧಾನದ ಬಗ್ಗೆ ಅಶೋಕ್ ಅವರು ಕಾಳಜಿ ವಹಿಸಿರುವುದದಕ್ಕೆ ಅಭಿನಂದನೆ ಸಲ್ಲಿಸುವುದಾಗಿ ಹೇಳಿದರು. ಇದಕ್ಕೆ ಅಶೋಕ್, ತುರ್ತು ಪರಿಸ್ಥಿತಿ ಹೇರಿದವರು ನೀವು ಎಂದು ಟಾಂಗ್ ಕೊಟ್ಟರು.
ಇದಕ್ಕೆ ಪ್ರತಿಕ್ರಿಯಿಸಿದ ಶಿವಕುಮಾರ್, ತುರ್ತು ಪರಿಸ್ಥಿತಿಯ ನಂತರ ಇಂದಿರಾಗಾಂಧಿ, ರಾಜೀವ್ ಗಾಂಧಿ, ಪಿ.ವಿ.ನರಸಿಂಹರಾವ್, ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾರೆ ಎಂದು ಹೇಳಿದರು. ಆಗ ಮಧ್ಯೆ ಪ್ರವೇಶಿಸಿದ ಬಿಜೆಪಿಯ ಎಸ್.ಸುರೇಶ್‌ಕುಮಾರ್, ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಹೈಗ್ರೌಂಡ್ ಪೊಲೀಸ್ ಠಾಣೆಯಲ್ಲಿ ಬಂಧಿತನಾಗಿ ಏರೋಪ್ಲೇನ್ ರುಚಿ ಕಂಡವನು ನಾನು. ತುರ್ತು ಪರಿಸ್ಥಿತಿಯ ಕರಾಳ ಇಮೇಜ್ ನಿಂದ ಕಾಂಗ್ರೆಸ್ ಹೊರ ಬರಲು ಸಾಧ್ಯವೇ ಇಲ್ಲ ಎಂದು ಹರಿಹಾಯ್ದರು.
ಸಚಿವ ದಿನೇಶ್ ಗುಂಡೂರಾವ್ ಮಾತನಾಡಿ, ನೀವು ಅಘೋಷಿತ ತುರ್ತು ಪರಿಸ್ಥಿತಿ ಜಾರಿಗೆ ತಂದಿದ್ದೀರಿ. ಐಟಿ, ಇಡಿ, ಸಿಬಿಐ ದುರುಪಯೋಗಪಡಿಸಿಕೊಂಡಿದ್ದೀರಿ. ಸಂವಿಧಾನದ ಬಗ್ಗೆ ಮಾತನಾಡಲು ನಿಮಗೆ ನೈತಿಕತೆ ಇಲ್ಲವೆಂದು ತಿರುಗೇಟು ನೀಡಿದರು. ಸಚಿವರಾದ ಕೆ.ಜೆ.ಜಾರ್ಜ್, ಡಾ.ಎಂ.ಸಿ.ಸುಧಾಕರ್ ಸೇರಿದಂತೆ ಇತರ ಅಡಳಿತ ಪಕ್ಷದ ಸದಸ್ಯರು ಅದಕ್ಕೆ ದನಿಗೂಡಿಸಿ ಬಿಜೆಪಿಯನ್ನು ತರಾಟೆ ತೆಗೆದುಕೊಂಡರು. ಅದಕ್ಕೆ ಬಿಜೆಪಿ ಸದಸ್ಯರು ಕೂಡ ಏರುದನಿಯಲ್ಲಿ ಚಾಟಿ ಬೀಸಿದರು. ಇದರಿಂದ ಗೊಂದಲದ ವಾತಾವರಣ ಸೃಷ್ಟಿಯಾಗಿ ಸದನ ಮುಂದೂಡಲಾಯಿತು.
ಈ ಹಂತದಲ್ಲಿ ಮತ್ತೆ ಮಧ್ಯ ಪ್ರವೇಶಿಸಿದ ಡಿಸಿಎಂ ಡಿ.ಕೆ.ಶಿವಕುಮಾರ್, ಸಂವಿಧಾನ ಉಳಿಯಬೇಕು. ಅದನ್ನು ರಕ್ಷಣೆ ಮಾಡಬೇಕೆಂಬ ಉದ್ದೇಶದಿಂದ ಶಾಲೆಗಳಲ್ಲಿ ಸಂವಿಧಾನ ಪ್ರಸ್ತಾವನೆ ಪಠಣ ಮಾಡಲಾಗುತ್ತದೆ. ಸಂವಿಧಾನದ ರಕ್ಷಣೆ ಮಾಡುವ ಕೆಲಸವನ್ನು ಬಿಜೆಪಿಯವರೆಲ್ಲರೂ ಮಾಡಲಿ ಎಂದು ಟಾಂಗ್ ಕೊಟ್ಟರು. ಆಗ ಬಿಜೆಪಿ ಸದಸ್ಯರು, ಅಂಬೇಡ್ಕರ್ ಅವರನ್ನು ಚುನಾವಣೆಯಲ್ಲಿ ಸೋಲಿಸಿದ್ದು ಕಾಂಗ್ರೆಸ್ ಎಂದು ವಾಗ್ಬಾಣ ಬಿಟ್ಟರು.
ಪರಿಸ್ಥಿತಿ ಗಂಭೀರ ಸ್ವರೂಪ ಪಡೆಯುತ್ತಲೇ ಸ್ಪೀಕರ್ ಯು.ಟಿ.ಖಾದರ್, ದೊಣ್ಣೆ ಕೊಟ್ಟು ಪೆಟ್ಟು ತಿನ್ನುವಂತಾಗಿದೆ ಎಂದರು.
ಕರಾವಳಿಯನ್ನು ಹಾಜಿ ಮಸ್ತಾನ್ ಮತ್ತಿತರ ಸ್ಮಗ್ಲರ್‌ಗಳು ಆಳುತ್ತಿದ್ದರು. ತುರ್ತು ಪರಿಸ್ಥಿತಿ ಹೇರಿ ಅದನ್ನು ನಿಗ್ರಹಿಸಿದ್ದು ಇಂದಿರಾಗಾಂಧಿ ಅವರು ಎಂದು ಸ್ಪೀಕರ್ ಖಾದರ್ ಹೇಳುತ್ತಿದ್ದಂತೆಯೇ ಬಿಜೆಪಿ ಸದಸ್ಯ ಅರಗ ಜ್ಞಾನೇಂದ್ರ ತೀವ್ರ ಆಕ್ಷೇಪ ವ್ಯಕ್ತಪಡಿಸಿದರಲ್ಲದೆ, ದೇಶಭಕ್ತರನ್ನು ಜೈಲಿನಲ್ಲಿಟ್ಟಿದ್ದರು. ಇಡೀ ದೇಶವನ್ನೇ ಜೈಲು ಮಾಡಿದ್ದರು. ಸಾಮಾನ್ಯ ಜನರಿಗೆ ಕಿರುಕುಳವಾಯಿತು ಎಂಧು ಆಕ್ರೋಶ ವ್ಯಕ್ತಪಡಿಸಿದರು.
ಆಗ ಆರ್. ಅಶೋಕ್, ಪೀಠದಿಂದ ಸಮರ್ಥನೆ ಮಾಡುವುದು ಬೇಡ ಎಂದರು. ಆಗ ಸದನದಲ್ಲಿ ಗಲಾಟೆ ನಡೆಯಿತು.
ಈ ಗದ್ದಲದ ಮಧ್ಯೆ ಕಾಂಗ್ರೆಸ್‌ನ ಟಿ.ಡಿ.ರಾಜೇಗೌಡ, ಬಿಜೆಪಿ ಶಾಸಕ ಹರೀಶ್ ಪೂಂಜಾ ಅವರನ್ನು ಉದ್ದೇಶಿಸಿ ಗೂಂಡಾ ಎಂಬ ಪದ ಬಳಸಿದರು. ಅದರಿಂದ ಬಿಜೆಪಿ ಸದಸ್ಯರು ಮತ್ತಷ್ಟು ಕೆರಳಿ ಕೆಂಡವಾದರು. ಆಗ ಸಭಾಧ್ಯಕ್ಷರು ಸದನದಲ್ಲಿ ಕಾರ್ಯಕಲಾಪವನ್ನು ಹತ್ತು ನಿಮಿಷಗಳ ಕಾಲ ಮುಂದೂಡಿದರು.
ಮತ್ತೆ ಸದನ ಸಮಾವೇಶಗೊಂಡಾಗ ಸ್ಪೀಕರ್ ಖಾದರ್, ಆಕ್ಷೇಪಾರ್ಹ ಶಬ್ದವನ್ನು ಕಡತದಿಂದ ತೆಗೆಯಲಾಗಿದೆ ಎಂದು ಹೇಳಿದರು.