ನವದೆಹಲಿ: ಸಿಇಒ ಸ್ಥಾನಕ್ಕೆ ಒಬ್ಬ ಮೂರ್ಖ ಸಿಕ್ಕಿದ ತಕ್ಷಣ ನಾನು ಆ ಸ್ಥಾನದಿಂದ ಇಳಿಯುತ್ತೇನೆ ಎಂದು ಹೇಳಿ, ನಿನ್ನೆಯಷ್ಟೇ ತನ್ನ ಸಾಕುನಾಯಿಯೊಂದನ್ನೇ ಸಿಇಒ ಎಂದು ಬಿಂಬಿಸಿಕೊಂಡಿದ್ದ ಟ್ವಿಟರ್ ಮುಖ್ಯಸ್ಥ ಎಲಾನ್ ಮಸ್ಕ್ ಕುರಿತು ಇನ್ನೊಂದು ಸುದ್ದಿ ಹೊರಬಿದ್ದಿದೆ. ಅದೇನೆಂದರೆ ಮಸ್ಕ್ ಭಾರತಲ್ಲಿನ ಮೂರು ಕಚೇರಿಗಳ ಪೈಕಿ ಎರಡನ್ನು ಮುಚ್ಚಿದ್ದಾರೆ.
ರಾಜಕೀಯದ ಕೇಂದ್ರವಾಗಿರುವ ನವದೆಹಲಿ ಹಾಗೂ ಆರ್ಥಿಕತೆಯ ಕೇಂದ್ರವಾಗಿರುವ ಮುಂಬೈನಲ್ಲಿ ಇರುವ ಟ್ವಿಟರ್ ಕಚೇರಿಗಳನ್ನು ಮಸ್ಕ್ ಬಂದ್ ಮಾಡಿದ್ದು, ಮನೆಯಿಂದಲೇ ಕೆಲಸ ಮಾಡುವಂತೆ ಉದ್ಯೋಗಿಗಳಿಗೆ ತಿಳಿಸಿದ್ದಾರೆ ಎನ್ನಲಾಗಿದೆ. ಈ ಮೂಲಕ ಮಸ್ಕ್ ಟ್ಟಿಟರ್ಗೆ ಸಂಬಂಧಿಸಿದಂತೆ ಆರ್ಥಿಕವಾಗಿ ಸದೃಢವಾಗಲು ಪರದಾಡುತ್ತಿದ್ದಾರೆ ಎನ್ನಲಾಗಿದೆ.
ಭಾರತದಲ್ಲಿರುವ ಟ್ವಿಟರ್ ಕಚೇರಿಗಳಲ್ಲಿನ ಸುಮಾರು 200 ಉದ್ಯೋಗಿಗಳ ಪೈಕಿ ಈಗಾಗಲೇ ಶೇ. 90 ಮಂದಿಯನ್ನು ಮನೆಗೆ ಕಳಿಸಿರುವ ಮಸ್ಕ್, ಈಗ ಎರಡು ಕಚೇರಿಗಳನ್ನು ಕೂಡ ಬಂದ್ ಮಾಡಿದ್ದಾರೆ. ಸದ್ಯ ಬೆಂಗಳೂರಿನಲ್ಲಿರುವ ಟ್ವಿಟರ್ ಕಚೇರಿ ಮಾತ್ರ ಭಾರತದಲ್ಲಿರುವ ಟ್ವಿಟರ್ನ ಏಕೈಕ ಕಚೇರಿ ಆಗಿದ್ದು, ಮಸ್ಕ್ ಈ ನಡೆ ಇನ್ನಷ್ಟು ಕುತೂಹಲ ಕೆರಳಿಸಿದೆ.