ನ್ಯೂಸ್

ಶೀಘ್ರವೇ ಭಾರತಕ್ಕೆ ಟೆಸ್ಲಾ ಎಂಟ್ರಿ! ಮೋದಿ ಭೇಟಿ ಬಳಿಕ ಎಲನ್ ಮಸ್ಕ್​ ಹೇಳಿಕೆ

ನ್ಯೂಯಾರ್ಕ್​: ಮೂರು ದಿನಗಳ ಅಮೆರಿಕ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಟೆಸ್ಲಾ ಸಿಇಒ ಹಾಗೂ ಟ್ವಿಟರ್ ಮಾಲೀಕ ಎಲನ್ ಮಸ್ಕ್ ಅವರನ್ನು ಭೇಟಿಯಾಗಿ, ಮಾತುಕತೆ ನಡೆಸಿದ್ದಾರೆ. ಬಳಿಕ ಸುದ್ದಿಗಾರರೊಂದಿಗೆ ಎಲನ್ ಮಸ್ಕ್ ಮಾತನಾಡುತ್ತಾ, 'ನಾನು ನರೇಂದ್ರ ಮೋದಿ ಅವರ ಅಭಿಮಾನಿ' ಎಂದು ಹೇಳಿದ್ದಾರೆ.

'ನರೇಂದ್ರ ಮೋದಿ ಅವರೊಂದಿಗಿನ ಚರ್ಚೆ ಅದ್ಭುತವಾಗಿತ್ತು. ನಾನು ಅವರನ್ನು ತುಂಬಾ ಇಷ್ಟಪಡುತ್ತೇನೆ. ಕೆಲ ವರ್ಷಗಳ ಹಿಂದೆ ಅವರು ನಮ್ಮ ಕಾರ್ಖಾನೆಗೆ ಭೇಟಿ ನೀಡಿದ್ದರು. ಹೀಗಾಗಿ ಅವರ ಬಗ್ಗೆ ಕೆಲ ವಿಚಾರಗಳನ್ನು ಈ ಮೊದಲೇ ತಿಳಿದುಕೊಂಡಿದ್ದೆ. ಭಾರತದ ಭವಿಷ್ಯದ ಬಗ್ಗೆ ಉತ್ಸುಕನಾಗಿದ್ದೇನೆ. ಭವಿಷ್ಯದಲ್ಲಿ ಭಾರತದಲ್ಲಿ ಉತ್ತಮ ಹೂಡಿಕೆಯಾಗುವ ನಿರೀಕ್ಷೆ ಇದೆ' ಎಂದು ಎಲನ್ ಮಸ್ಕ್ ಹೇಳಿದರು. ಇದೇ ವೇಳೆ ಮುಂದಿನ ವರ್ಷ ಭಾರತಕ್ಕೆ ಭೇಟಿ ನೀಡುವ ಬಗ್ಗೆ ಉತ್ಸುಕನಾಗಿದ್ದೇನೆ ಎಂದು ತಿಳಿಸಿದರು.

ಭಾರತಕ್ಕೆ ಟೆಸ್ಲಾ ಆಗಮನ!

ಪ್ರಧಾನಿ ನರೇಂದ್ರ ಮೋದಿ ಮತ್ತು ಎಲನ್ ಮಸ್ಕ್ ಅವರ ಮಾತುಕತೆ ಸಾಕಷ್ಟು ಮಹತ್ವ ಪಡೆದಿತ್ತು. ಕ್ಯಾಲಿಫೋರ್ನಿಯಾದಲ್ಲಿರುವ ಟೆಸ್ಲಾ ಮೋಟರ್ಸ್​ಗೆ 2015ರಲ್ಲಿ ಮೋದಿ ಭೇಟಿ ನೀಡಿದ್ದಾಗ ಮಸ್ಕ್​ರನ್ನು ಮೊದಲ ಬಾರಿಗೆ ಭೇಟಿಯಾಗಿದ್ದರು.

'ನಾನು ಮುಂದಿನ ವರ್ಷ ಭಾರತಕ್ಕೆ ಭೇಟಿ ನೀಡಲು ನಿರ್ಧರಿಸಿದ್ದೇನೆ. ನರೇಂದ್ರ ಮೋದಿ ಭಾರತದಲ್ಲಿ ಉತ್ತಮ ಕೆಲಸ ಮಾಡುತ್ತಿದ್ದು, ಭಾರತದಲ್ಲಿ ಬಂಡವಾಳ ಹೂಡಿಕೆಗೆ ಅವಕಾಶವನ್ನು ನೀಡಿದ್ದಾರೆ. ಹೊಸ ಕಂಪನಿಗಳ ಸ್ಥಾಪನೆಗೆ ಪ್ರೋತ್ಸಾಹ ನೀಡುತ್ತಿದ್ದಾರೆ. ಆದಷ್ಟು ಬೇಗೆ ಭಾರತದಲ್ಲಿ ಟೆಸ್ಲಾ ಕಂಪೆನಿ ಸ್ಥಾಪಿಸಲಾಗುವುದು. ಈ ವರ್ಷದ ಅಂತ್ಯದೊಳಗೆ ಹೂಡಿಕೆಗೆ ಸೂಕ್ತ ಪ್ರದೇಶವನ್ನು ಅಂತಿಮಗೊಳಿಸಲಾಗುವುದುದಾಗಿ ಎಲನ್ ಮಸ್ಕ್ ತಿಳಿಸಿದ್ದಾರೆ.

'ಮೋದಿಯವರು ಭಾರತದ ಬಗ್ಗೆ ಸಾಕಷ್ಟು ಕಾಳಜಿ ವಹಿಸುತ್ತಾರೆ ಮತ್ತು ಸರಿಯಾದ ನಿರ್ಧಾರಗಳನ್ನೇ ತೆಗೆದುಕೊಳ್ಳುತ್ತಾರೆ. ಈಗ ತಮ್ಮ ದೇಶದಲ್ಲಿ ಹೂಡಿಕೆ ಮಾಡಲು ನಮ್ಮನ್ನು ಒತ್ತಾಯಿಸುತ್ತಿದ್ದಾರೆ. ಇದು ಭಾರತದ ಅಭಿವೃದ್ಧಿಗೆ ಸಹಕಾರಿಯಾಗಲಿದೆ. ಇದೇ ವರ್ಷದಲ್ಲಿ ಟೆಸ್ಲಾ ಕಾರ್ಖಾನೆಯನ್ನು ಭಾರತದಲ್ಲಿ ಸ್ಥಾಪಿಸಲು ಸೂಕ್ತ ಸ್ಥಳವನ್ನು ಗುರುತಿಸುವ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.