ನ್ಯೂಸ್

ಸಂಪಾದಕೀಯ | ತಪ್ಪು ಕಲ್ಪನೆ ನಿವಾರಿಸಿ

ಮೋಹನ್​ ಶೆಟ್ಟಿ

ಭಾರತ ಜಗತ್ತಿನ ಅತಿ ದೊಡ್ಡ ಉತ್ಪಾದಕ ರಾಷ್ಟ್ರ. ಒಟ್ಟು ಜಾಗತಿಕ ಉತ್ಪಾದನೆಯ ಸುಮಾರು ಶೇ. 63ರಷ್ಟು ಅಡಕೆಯನ್ನು ನಮ್ಮ ದೇಶದಲ್ಲಿ ಬೆಳೆಯಲಾಗುತ್ತದೆ. ಭಾರತೀಯರಿಗೆ ಅಡಕೆ ಕೇವಲ ತಿನ್ನುವ ವಸ್ತುವಲ್ಲ. ಬದಲಾಗಿ ಧಾರ್ವಿುಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಆಚರಣೆಗಳಲ್ಲಿಯೂ ಅಡಕೆಗೆ ಮಹತ್ವದ ಸ್ಥಾನ ನೀಡಲಾಗಿದೆ. ಹಾಗಾಗಿ ಇದು ಭಾರತದಲ್ಲಿ ಒಂದು ಪ್ರಮುಖ ವಾಣಿಜ್ಯ ಬೆಳೆಯಾಗಿ ರೂಪುಗೊಂಡಿದೆ. ದೇಶದ ಹಲವು ಸಮಾಜ- ಸಂಪ್ರದಾಯಗಳಲ್ಲಿ ಅಡಕೆ ಹಾಗೂ ವೀಳ್ಯದೆಲೆ ಹಾಸು ಹೊಕ್ಕಾಗಿದೆ. ಶತಮಾನಗಳಿಂದ ಇದನ್ನು ಆಯುರ್ವೆದ ಮತ್ತು ಪಶುವೈದ್ಯಕೀಯ ಔಷಧಗಳಲ್ಲಿಯೂ ಬಳಸಲಾಗುತ್ತದೆ.

ಇಷ್ಟು ಮಹತ್ವವುಳ್ಳ ಅಡಕೆಗೆ ವಿಶ್ವ ಆರೋಗ್ಯ ಸಂಸ್ಥೆಯ ಅಂಗಸಂಸ್ಥೆಯಾದ ಇಂಟರ್​ನ್ಯಾಶನಲ್ ಏಜೆನ್ಸಿ ಫಾರ್ ರಿಸರ್ಚ್ ಆನ್ ಕ್ಯಾನ್ಸರ್ (ಐಎಆರ್​ಸಿ) ಕಳೆದ ವರ್ಷದ ನವೆಂಬರ್​ನಲ್ಲಿ ಪ್ರಕಟಿಸಿದ ವರದಿಯು ‘ಕ್ಯಾನ್ಸರ್​ಕಾರಕ’ ಎಂಬ ಹಣೆಪಟ್ಟಿ ಕಟ್ಟಿತು. ಆ ಮೂಲಕ ಭಾರತದ ಅಡಕೆ ಬೆಳೆಗಾರರನ್ನು ಸಂಕಷ್ಟಕ್ಕೆ ದೂಡಿತು. ಅಡಕೆ ಉದ್ಯಮಕ್ಕೂ ಪೆಟ್ಟು ನೀಡಿತು. ಅಡಕೆಯಿಂದ ಕ್ಯಾನ್ಸರ್ ಬರುವುದಿಲ್ಲ ಎಂಬುದನ್ನು ನಿರೂಪಿಸಲು ಹಲವು ಪ್ರಯತ್ನಗಳು ದೇಶದಲ್ಲಿ ನಡೆಯುತ್ತಿವೆ. ಇದೇ ಹಿನ್ನೆಲೆಯಲ್ಲಿ ಕರ್ನಾಟಕದ ಸಂಸದರ ನಿಯೋಗ ಗುರುವಾರ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದೆ. ಅಡಕೆ ಕ್ಯಾನ್ಸರ್​ಕಾರಕವಲ್ಲ ಎಂಬ ಮಾತನ್ನು ಕೇಂದ್ರ ಸಚಿವರೂ ಸ್ಪಷ್ಟಪಡಿಸಿದ್ದಾರೆ. ಈ ವಾದವನ್ನು ಈಗಾಗಲೇ ಭಾರತದ ಹಲವು ತಜ್ಞರು ಮಂಡಿಸಿದ್ದರೂ ವಿಶ್ವ ಆರೋಗ್ಯ ಸಂಸ್ಥೆಗೆ ಸಂಬಂಧಿಸಿದ ವಿಜ್ಞಾನಿಗಳು ಒಪ್ಪಲು ತಯಾರಿಲ್ಲ.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಡಕೆ ಬಗ್ಗೆ ಈ ರೀತಿಯ ವಿಕ್ಷಿಪ್ತ ವರದಿ ಪ್ರಕಟವಾದುದರ ಹಿಂದೆ ಹಲವು ಪಿತೂರಿಗಳು ಇದ್ದಂತೆ ಕಾಣುತ್ತಿದೆ. ಭಾರತದಲ್ಲಿ ಊಟ-ತಿಂಡಿ ಬಳಿಕ ಎಲೆ ಅಡಕೆ ಜಗಿಯುವುದು ಕೋಟ್ಯಂತರ ಜನರ ಹವ್ಯಾಸ. ಇದನ್ನು ಭಾರತೀಯರಿಂದ ದೂರ ಮಾಡಿದರೆ, ತಾವು ಉತ್ಪಾದಿಸುವ ಸಿಗರೇಟ್ ಮತ್ತಿತರ ಉದ್ಯಮಗಳಿಗೆ ಭಾರತದಲ್ಲಿ ಮಾರುಕಟ್ಟೆ ವಿಸ್ತರಣೆ ಮಾಡಬಹುದು ಎನ್ನುವ ಹುನ್ನಾರ ಪಾಶ್ಚಿಮಾತ್ಯ ದೇಶಗಳಲ್ಲಿ ಇರುವಂತಿದೆ. ಭಾರತದಲ್ಲಿ ಧೂಮಪಾನ ಮಾಡುವವರ ಸಂಖ್ಯೆ ಶೇ.10ರಷ್ಟಿದ್ದು, ಎಲೆ, ಅಡಕೆ, ತಂಬಾಕು ಸೇವಿಸುವವರ ಸಂಖ್ಯೆ ಸುಮಾರು ಶೇ. 18-20ರಷ್ಟಿದೆ. ಅಡಕೆ, ತಂಬಾಕು ತಿನ್ನುವುದು ಕಡಿಮೆಯಾದರೆ ಅಷ್ಟು ಜನ ಧೂಮಪಾನದತ್ತ ಹೊರಳಬಹುದು ಎಂಬುದು ಅವರ ಲೆಕ್ಕಾಚಾರ. ಇದೇ ಕಾರಣಕ್ಕೆ ಪದೇಪದೆ ಅಡಕೆ ಬಗ್ಗೆ ಅಪಪ್ರಚಾರ ಮಾಡುತ್ತಿರುವಂತೆ ಕಂಡುಬರುತ್ತಿದೆ. ಈ ಕಾರಣದಿಂದಾಗಿ ಅಡಕೆ ಬಗೆಗಿನ ತಪ್ಪು ಕಲ್ಪನೆಯನ್ನು ವಿಶ್ವ ಮಟ್ಟದಲ್ಲಿ ಹೋಗಲಾಡಿಸಬೇಕಾಗಿದೆ.

ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಗಂಭೀರ ಪ್ರಯತ್ನ ಮಾಡಬೇಕಿದೆ. ನಿಖರ ಅಧ್ಯಯನ ವರದಿಗಳೊಂದಿಗೆ ಎಲ್ಲ ದೇಶಗಳಿಗೆ ಸಾರಿ ಹೇಳುವ ಅವಶ್ಯಕತೆ ಇದೆ. ಈ ಮೂಲಕ ದೇಶದಲ್ಲಿ ಅಡಕೆ ಬೆಳೆಯನ್ನೇ ನಂಬಿ ಜೀವಿಸುತ್ತಿರುವ ಲಕ್ಷಾಂತರ ಜನರ ಜೀವನಕ್ಕೆ ಮತ್ತಷ್ಟು ಭದ್ರತೆ ಒದಗಿಸಬೇಕಾಗಿದೆ.