ಬೆಂಗಳೂರು: ನೆಲದ ಸಂಸ್ಕೃತಿ ಉಳಿಸಿ ಬೆಳೆಸುವ ಜತೆಗೆ ವೃತ್ತಿನೈಪುಣ್ಯತೆ, ಆರ್ಥಿಕತೆ ಸಬಲತೆಗೆ ಒತ್ತು ನೀಡಬೇಕೆಂಬ ಪ್ರಧಾನಿ ನರೇಂದ್ರ ಮೋದಿ ಆಶಯ, ದೂರದೃಷ್ಟಿಯುಳ್ಳ ‘ಪಿಎಂ ವಿಶ್ವಕರ್ಮ ಕೌಶಲ ಸಮ್ಮಾನ್ ಯೋಜನೆ’ಗೆ ಅರ್ಹರಾದ ಎಲ್ಲರನ್ನೂ ಜೋಡಿಸಲು ಪರಿಶ್ರಮ ಅಗತ್ಯವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸಲಹೆ ನೀಡಿದರು.
ಪಕ್ಷದ ಕಚೇರಿಯಲ್ಲಿ ಯೋಜನೆ ಕುರಿತು ಏರ್ಪಡಿಸಿದ್ದ ಪ್ರಮುಖರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ದೇಸೀಯ ಕುಲಕಸುಬು ಆಧಾರಿತ ಕುಶಲಕರ್ಮಿಗಳು ಈ ನೆಲದ ಶ್ರೀಮಂತ ಸಂಸ್ಕೃತಿಯ ರಾಯಭಾರಿಗಳು ಎಂದು ಮೋದಿಯವರು ಪರಿಭಾವಿಸಿ ಕುಲಕಸುಬು ಕೌಶಲ್ಯವನ್ನು ಉಳಿಸಿ ಬೆಳೆಸುವ ದೃಷ್ಟಿಯಿಂದ ಈ ಯೋಜನೆಗೆ ಜಾರಿಗೊಳಿಸಿದ್ದು, ಅರ್ಹರಿಗೆ ತಲುಪಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದರು.
ಬಡಗಿ, ಬೋಟ್ ನಿರ್ಮಾಣ, ಕಮ್ಮಾರ, ಶಸಾಸ, ಬೀಗ ತಯಾರಕರು, ಅಕ್ಕಸಾಲಿಗರು, ಕುಂಬಾರ, ಕ್ಷೌರಿಕರು, ಗೊಂಬೆ ತಯಾರಕರು ಸೇರಿ 18 ಸಾಂಪ್ರದಾಯಿಕ ಕುಶಲಕರ್ಮಿಗಳು ಈ ಯೋಜನೆಯ ಲಾಭ ಪಡೆಯಬಹುದಾಗಿದೆ.
ಜಿಲ್ಲಾ ಆಡಳಿತದೊಂದಿಗೆ ಸಮನ್ವಯ ಸಾಧಿಸಿ, ಪ್ರತಿಯೊಬ್ಬ ಬೂತ್ ಅಧ್ಯಕ್ಷರ ಅರ್ಹ ಸಮುದಾಯಗಳ ಮನೆಗೆ ಭೇಟಿ ನೀಡಿ, ಯೋಜನೆ ಮಾಹಿತಿ ಹಂಚಿಕೊಳ್ಳುವ ಜತೆಗೆ ಅರ್ಜಿ ಸಲ್ಲಿಸಲು ನೆರವಾಗಬೇಕು ಎಂದು ಬಿ.ವೈ.ವಿಜಯೇಂದ್ರ ತಿಳಿಸಿದರು.
ಇದೇ ಸಂದರ್ಭದಲ್ಲಿ ಪಿಎಂ ವಿಶ್ವಕರ್ಮ ಯೋಜನೆಯ ರಾಜ್ಯ ಉಸ್ತುವಾರಿ ಕುಲ್‌ಜಿತ್ ಸಿಂಗ್ ಚಹಲ್, ಸಂಚಾಲಕ ಹಾಗೂ ಮಾಜಿ ಶಾಸಕ ಎಸ್.ಎ.ರಾಮದಾಸ್ ಯೋಜನೆಯ ವಿವರ, ಪ್ರಗತಿ ಮಾಹಿತಿಯನ್ನು ಹಂಚಿಕೊಂಡರು.
ಪಿಎಂ ವಿಶ್ವಕರ್ಮ ಕೌಶಲ ಸಮ್ಮಾನ್ ಯೋಜನೆಯಡಿ 18 ಸಾಂಪ್ರದಾಯಿಕ ಕುಲಕಸುಬು ಅವಲಂಬಿತರು, ಆಸಕ್ತರಿಗೆ ಉತ್ತೇಜಿಸಿ ಸಬಲಗೊಳಿಸಿವುದು ಮುಖ್ಯ ಉದ್ದೇಶ. ಆನ್‌ಲೈನ್ ಅರ್ಜಿ ಸಲ್ಲಿಕೆ ಮತ್ತಿತರ ವಿವರಗಳಿಗೆ ಜಾಲ ತಾಣ (Pmvishwakarma.gov.in)ಕ್ಕೆ ಭೇಟಿ ನೀಡಬಹುದಾಗಿದೆ.
- ಯೋಜನೆಯಡಿ ಆಯ್ಕೆಯಾದ ಅರ್ಹ ಲಾನುಭವಿಗಳಿಗೆ ಮೊದಲ ಕಂತಿನಲ್ಲಿ ಒಂದು ಲಕ್ಷ ರೂ., ಎರಡನೇ ಕಂತಿನಲ್ಲಿ ಎರಡು ಲಕ್ಷ ರೂ.ವರೆಗೆ ಶೇಕಡ 5ರ ಬಡ್ಡಿ ದರದಲ್ಲಿ ಸಾಲ
- ಏಳು ದಿನಗಳ ತರಬೇತಿ, ತರಬೇತಿ ಪೂರ್ಣಗೊಳಿಸಿದವರಿಗೆ 15 ಸಾವಿರ ರೂ. ಮೊತ್ತದ ಕಿಟ್ ಉಚಿತ ವಿತರಣೆ
- ಉತ್ಪನ್ನಗಳಿಗೆ ಮಾರುಕಟ್ಟೆ ಸೌಲಭ್ಯ, ವಹಿವಾಟು ಕುರಿತು ಮಾಹಿತಿ, ವಿವಿಧ ಮಾರುಕಟ್ಟೆ ಸರಪಳಿಗೆ ಸಂಪರ್ಕ ಹಾಗೂ ಸಂವಹನ
- ರಾಜ್ಯದಲ್ಲಿ ಮೊದಲ ಹಂತದಲ್ಲಿ 18 ಜಿಲ್ಲೆಗಳು ಆಯ್ಕೆ. ಆನ್‌ಲೈನ್ ಮೂಲಕ 11 ಲಕ್ಷ ಅರ್ಜಿಗಳ ಸಲ್ಲಿಕೆ, ಪರಿಶೀಲಿಸಿ ಲಾನುಭವಿಗಳ ಆಯ್ಕೆ ಬಾಕಿಯಿದೆ.
- ಎರಡನೇ ಹಂತದ ಇನ್ನುಳಿದ 13 ಜಿಲ್ಲೆಗಳ ಆಯ್ಕೆ. ಕಳೆದ ವಾರದಿಂದ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಕೆ ಪ್ರಕ್ರಿಯೆಗೆ ಚಾಲನೆ
- ರಾಜ್ಯಮಟ್ಟದಲ್ಲಿ ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ ನಿರ್ದೇಶಕ (ಎಂಎಸ್‌ಎಂಇ) ನೋಡಲ್ ಅಧಿಕಾರಿ, ಆರು ವಲಯಗಳಿಗೆ ನೇಮಕವಾದ ಕೇಂದ್ರ ಸರ್ಕಾರದ ತಲಾ ಇಬ್ಬರು ಅಧಿಕಾರಿಗಳ ಮೇಲ್ವಿಚಾರಣೆ
- ಜಿಲ್ಲಾಧಿಕಾರಿ ಜಿಲ್ಲಾಮಟ್ಟದ ಸಮಿತಿಗೆ ಅಧ್ಯಕ್ಷರು, ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಸದಸ್ಯರು ಹಾಗೂ ಮೂವರು ಅಧಿಕಾರೇತರ ಸದಸ್ಯರಿದ್ದಾರೆ.
- ಪ್ರತಿ ಬೂತ್, ಮಂಡಲಮಟ್ಟದಲ್ಲಿ ಅರ್ಹ ಗುರುತಿಸುವ, ಯೋಜನೆಯ ಮಾಹಿತಿ ನೀಡುವ, ಅರ್ಜಿ ಸಲ್ಲಿಕೆಗೆ ಸಹಕರಿಸುವ ಜವಾಬ್ದಾರಿಯು ಅಧಿಕಾರೇತರ ಸದಸ್ಯರಿಂದ ನಿರ್ವಹಣೆ