ಆಯನೂರು: ಸಮೀಪದ ವೀರಗಾರನ ಭೈರನಕೊಪ್ಪದಲ್ಲಿ ಗಂಡು ಆನೆಯ ಕಳೇಬರ ಮಂಗಳವಾರ ಪತ್ತೆಯಾಗಿದೆ. ಕಾಡಾನೆಯು ಮೂರು ದಿನಗಳ ಹಿಂದೆಯೇ ಮೃತಪಟ್ಟಿರಬಹುದೆಂದು ಶಂಕಿಸಲಾಗಿದೆ.
ಚರಂಡಿಯಲ್ಲಿ ಆನೆಯ ಮೃತ ದೇಹ ಪತ್ತೆಯಾಗಿದೆ. ಪಕ್ಕದ ಜಮೀನಿನಲ್ಲಿ ಮೆಕ್ಕೆಜೋಳ ಬೆಳೆಯಲಾಗಿದೆ. ವಾಸನೆ ಬರುತ್ತಿದ್ದುದರಿಂದ ಜಮೀನಿನ ಮಾಲೀಕ ಹತ್ತಿರಹೋಗಿ ಗಮನಿಸಿದಾಗ ಗೊತ್ತಾಗಿದೆ. ಎರಡು ವರ್ಷಗಳ ಹಿಂದೆ ಚೆನ್ನಳ್ಳಿ ಭಾಗದಲ್ಲಿ ಎರಡು ಆನೆಗಳು ವಿದ್ಯುತ್ ಸ್ಪರ್ಶದಿಂದ ಮೃತಪಟ್ಟಿದ್ದವು.
ಸ್ಥಳಕ್ಕೆ ಶಿವಮೊಗ್ಗ ವನ್ಯಜೀವಿ ವಿಭಾಗದ ಸಿಸಿಎಫ್ ಸಿ.ಟಿ.ಹನುಮಂತಯ್ಯ, ಎಸಿಎಫ್ ಪ್ರಸನ್ನ ಸಿ. ಪಟಗಾರ್, ಉಪವಿಭಾಗದ ಎಸಿಎಫ್ ಗುರುರಾಜ್, ಆರ್‌ಎಫ್‌ಒ ವಿನಯ್ ಭೇಟಿ ನೀಡಿ ಪರಿಶೀಲಿಸಿದರು.
ಸಿಸಿಎಫ್ ಸಿ.ಟಿ.ಹನುಮಂತಯ್ಯ ಮಾತನಾಡಿ, ಹೆದ್ದಾರಿ ಪಕ್ಕದಲ್ಲಿರುವ ಸರ್ವೇ ನಂ.33ರಲ್ಲಿ ಜೋಳದ ಜಮೀನಿನ ಪಕ್ಕದ ಚರಂಡಿಯಲ್ಲಿ 30ರಿಂದ 35 ವರ್ಷದ ಗಂಡು ಆನೆ ಕಳೇಬರ ಪತ್ತೆಯಾಗಿದೆ. ಮೇಲ್ನೋಟಕ್ಕೆ ವಿದ್ಯುತ್ ಸ್ಪರ್ಶದಿಂದ ಆನೆ ಸತ್ತಿದೆ. ಸೊಂಡಿಲಿನ ಕೆಳಗೆ ವಿದ್ಯುತ್ ತಂತಿ ಬಿದ್ದಿದೆ. ದೊಡ್ಡ ಗಾತ್ರದ ಆನೆ ಚರಂಡಿ ದಾಟುವ ಸಂದರ್ಭದಲ್ಲಿ ಜಾರಿ ಬಿದ್ದು ಕೂಡ ಸತ್ತಿರಬಹುದು. ಪಕ್ಕದಲ್ಲಿರುವ ಜೋಳದ ಜಮೀನಿನ ಮಾಲೀಕ ಹಾಕಿರುವ ವಿದ್ಯುತ್ ಮಾರ್ಗವಿದ್ದು, ಅದಕ್ಕೆ ಸ್ಪರ್ಶಿಸಿರುವ ಸಾಧ್ಯತೆ ಇದೆ. ಬುಧವಾರ ಇಲಾಖೆ ಸಿಬ್ಬಂದಿ, ವೈದ್ಯರ ತಂಡ ಆಗಮಿಸಲಿದ್ದು, ಮರಣೋತ್ತರ ಪರೀಕ್ಷೆ ನಡೆಸಲಿದ್ದಾರೆ. ಯಾವ ಕಾರಣದಿಂದ ಆನೆ ಸತ್ತಿದೆ ಎಂಬುದು ತಿಳಿಯಲಿದ್ದು, ಆನಂತರ ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದರು.
ವಿದ್ಯುತ್ ಸ್ಪರ್ಶದಿಂದ ಆನೆಯ ಸೊಂಡಿಲು, ಹೃದಯ, ಮಿದುಳು ಡ್ಯಾಮೇಜ್ ಆಗಿ ರಕ್ತ ಸ್ರಾವ ಆಗಿರುವ ಸಾಧ್ಯತೆ ಇರುತ್ತೆ. ಈ ಭಾಗದಲ್ಲಿ ಆನೆಗಳು ಸಂಚಾರ ಹೆಚ್ಚಾಗಿದೆ. ಸೂಕ್ತ ಸ್ಥಳಕ್ಕೆ ಹಿಮ್ಮೆಟ್ಟಿಸುವ ಕಾರ್ಯಾಚರಣೆ ಮಾಡಲಾಗಿದೆ. ಅಧಿಕಾರಿಗಳು ಪ್ರಯತ್ನ ಮಾಡುತ್ತಿದ್ದಾರೆ ಎಂದು ತಿಳಿಸಿದರು.
8ರಿಂದ 10 ಆನೆಗಳು ಎರಡು ತಂಡಗಳಾಗಿ ಸಂಚರಿಸುತ್ತಿವೆ. ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಇಲಾಖೆಯಿಂದ ಮಾಡಲಾಗಿದೆ. ಕಾನೂನು ಬಹಳ ಕಠಿಣವಾಗಿದೆ. ಜನರು ಸಹ ಎಚ್ಚರಿಕೆಯಿಂದ ಇರಬೇಕು. ಪ್ರಕರಣಕ್ಕೆ ಸಂಬಂಧಿಸಿ ವಿಚಾರಣೆ ನಡೆಸಲಾಗುವುದು. ಆನೆಗಳನ್ನು ಸೆರೆಹಿಡಿಯಲು ಸರ್ಕಾರದ ಅನುಮತಿ ಬೇಕು ಎಂದು ತಿಳಿಸಿದರು.