ನ್ಯೂಸ್

VIDEO| ಪ್ರಯಾಣಿಕರು ತುಂಬಿದ್ದ ಬಸ್​ನತ್ತ ನುಗ್ಗಿದ ಒಂಟಿ ಸಲಗ: ಮುಂದೆ ನಡೆದದ್ದು…

ಬೆಂಗಳೂರು: ಆನೆ ಎಷ್ಟು ಶಾಂತ ಸ್ವಭಾವದ ಪ್ರಾಣಿಯೋ ಅಷ್ಟೇ ಆಕ್ರಮಣಕಾರಿಯೂ ಹೌದು. ರಸ್ತೆಯಲ್ಲಿ ಹೋಗುತ್ತಿದ್ದ ಆನೆಯೊಂದು ಪ್ರಯಾಣಿಕರೇ ತುಂಬಿದ್ದ ಬಸ್​ನತ್ತ ನುಗ್ಗಿ ಬಂದು ಕೊನೆ ಕ್ಷಣದಲ್ಲಿ ಸುಮ್ಮನೇ ಹೋಗಿದ್ದು, ಬಸ್​​ನೊಳಗಿದ್ದವರು ಬಚಾವ್​​ ಆಗಿರುವ ಘಟನೆ ನಡೆದಿದೆ.

ಈ ಕುರಿತು ಐಎಎಸ್ ಅಧಿಕಾರಿ ಸುಪ್ರಿಯಾ ಸಾಹು ಸ್ನೇಹಿತರೊಬ್ಬರು ಕಳುಹಿಸಿರುವ ವಿಡಿಯೊವೊಂದನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ. ರಸ್ತೆ ಬದಿ ಹೋಗುತ್ತಿದ್ದ ಆನೆಯು ಬಸ್ಸಿನಲ್ಲಿ ಪ್ರಯಾಣಿಕರನ್ನು ಪರೀಕ್ಷಿಸಲು ನಿರ್ಧರಿಸಿ ಏಕಾಏಕಿ ಬಸ್​ ಕಡೆಗೆ ಬಂದಾಗ, ಬಸ್ ಚಾಲಕನ ನೇತೃತ್ವದಲ್ಲಿ ಎಲ್ಲರೂ ಶಾಂತಿಮತ್ತು ಉತ್ತಮ ಪ್ರಜ್ಞೆಯನ್ನು ಪ್ರದರ್ಶಿಸಿದ್ದರಿಂದ, ಸಹಬಾಳ್ವೆಯಿಂದ ಎಲ್ಲವೂ ಸರಿಹೋಯಿತು ಎಂಬ ಅಡಿಬರಹವನ್ನು ನೀಡಿದ್ದಾರೆ.

ರಸ್ತೆಯ ಬದಿಯಲ್ಲಿ ನಿಂತಿದ್ದ ಬಸ್ಸಿನಲ್ಲಿ ಪ್ರಯಾಣಿಕರು ತುಂಬಿದ್ದರು. ಚಾಲಕ ಸೇರಿದಂತೆ ಎಲ್ಲರೂ ತಮ್ಮ ಪ್ರಯಾಣವನ್ನು ಮುಂದುವರೆಸಲು ಆನೆಯು ಶಾಂತಿಯುತವಾಗಿ ಹೋಗುವುದನ್ನು ರಸ್ತೆಯ ಮೂಲೆಯಲ್ಲಿ ಕಾಯುತ್ತಿದ್ದರು. ಆದರೆ, ಆನೆ ದೂರದಿಂದಲೇ ಬಸ್‌ನ್ನು ಗುರುತಿಸಿ ಅದರತ್ತ ಧಾವಿಸಿದೆ. ಆದರೆ, ಬಸ್ಸಿನೊಳಗೆ ಏನಾಗುತ್ತಿದೆ ಎಂಬುದನ್ನೆಲ್ಲ ಸೂಕ್ಷ್ಮವಾಗಿ ಗಮನಿಸಿದ ಆನೆ ತನ್ನ ದಾರಿಯಲ್ಲಿ ಸಾಗಿದೆ. ಇದರಿಂದ ಬಸ್ಸಿಗಾಗಲಿ, ಪ್ರಯಾಣಿಕರಿಗಾಗಲಿ ಯಾವುದೇ ತೊಂದರೆಯಾಗಿಲ್ಲ.

ದೃಶ್ಯದಲ್ಲಿ ಏನಿದೆ?

ಈ ವಿಡಿಯೋಗೆ ನೆಟ್ಟಿಗರು ತರಹೇವಾರಿ ಕಾಮೆಂಟ್​ಗಳನ್ನು ಮಾಡುತ್ತಿದ್ದು, ಇತರ ಪ್ರಾಣಿಗಳ ಆವಾಸ ಸ್ಥಾನದಲ್ಲಿದ್ದಾಗ, ನಾವು ಅವುಗಳನ್ನು ತೊಂದರೆಗೊಳಿಸದಿದ್ದರೆ ಅವು ನಮಗೆ ತೊಂದರೆ ಕೊಡುವುದಿಲ್ಲ ಎಂದು ಪ್ರತಿಕ್ರಿಯೆ ನೀಡಿದ್ದಾರೆ.(ಏಜೆನ್ಸೀಸ್)