ಬೇಲೂರು: ಒಂಟಿ ಕಾಡಾನೆಯೊಂದು ಏಕಾಏಕಿ ನಡೆಸಿದ ದಾಳಿಗೆ ಓರ್ವ ವ್ಯಕ್ತಿ ಬಲಿಯಾಗಿದ್ದು, ಈ ದುರ್ಘಟನೆ ಬೇಲೂರು ತಾಲೂಕಿನ ಬಿಕ್ಕೋಡು ಹೋಬಳಿ ಕಬ್ಬಿನಮನೆಯಲ್ಲಿ ಸಂಭವಿಸಿದೆ.
ಬಿಕ್ಕೋಡು ಹೋಬಳಿಯ ಬಳಿ ಬೀಡು ಬಿಟ್ಟಿರುವ ಕಾಡಾನೆಯೊಂದು ಸಂಚಾರ ಮಾಡುತ್ತಿದ್ದು, ಕಬ್ಬಿನಮನೆಯಲ್ಲಿ ವಾಸವಿದ್ದ ವಸಂತ ಎಂಬುವವರ ಮೇಲೆ ದಾಳಿ ಮಾಡಿ, ಹತ್ಯೆಗೈದಿದೆ. ರಾತ್ರಿ 8:00 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಈ ಘಟನೆಯ ಬೆನ್ನಲ್ಲೇ ಇದೀಗ ಅರೇಹಳ್ಳಿ ಹೋಬಳಿಯ ಬಾಳಗುಲಿ ಸುತ್ತಮುತ್ತಲಿನ ಪ್ರದೇಶದಲ್ಲಿ ಮತ್ತೊಂದು ಒಂಟಿ ಕಾಡಾನೆಯ ಸಂಚಾರ ಕಂಡುಬಂದಿದ್ದು, ಈ ಜಾಗಗಳಲ್ಲಿ ಕೆಲಸ ಮಾಡುವ ಕೂಲಿ ಕಾರ್ಮಿಕರು ಹಾಗೂ ಸಂಚರಿಸುವ ವಾಹನ ಸವಾರರು ಜಾಗರೂಕತೆ ವಹಿಸಬೇಕೆಂದು ಬೇಲೂರು ಅರಣ್ಯ ಇಲಾಖೆ ಹಾಗೂ ಎಲಿಫೆಂಟ್ ಟಾಸ್ಕ್ ಫೋರ್ಸ್ ಎಚ್ಚರಿಕೆ ಸಂದೇಶ ರವಾನಿಸಿದೆ.