ನ್ಯೂಸ್

ಎಲೆಕ್ಟ್ರಾನಿಕ್ ವಸ್ತುಗಳು ಬೆಂಕಿಗಾಹುತಿ

Mysuru Rural

ನಂಜನಗೂಡು: ನಗರದ ಜೆಎಂಎಫ್‌ಸಿ ನ್ಯಾಯಾಲಯ ಕಟ್ಟಡದ ಮೊದಲ ಅಂತಸ್ತಿನ ಸರ್ವರ್ ಕೊಠಡಿಯಲ್ಲಿ ಮಂಗಳವಾರ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಕಾಣಿಸಿಕೊಂಡು ಎಲೆಕ್ಟ್ರಾನಿಕ್ ವಸ್ತುಗಳು ಹಾನಿಯಾಗಿವೆ.

ಎಂದಿನಂತೆ ಕೋರ್ಟ್ ಕಾರ್ಯ ಕಲಾಪಗಳು ನಡೆಯುತ್ತಿದ್ದ ವೇಳೆ ಸರ್ವರ್ ಕೊಠಡಿಯಲ್ಲಿ ಬೆಂಕಿ ಹೊತ್ತಿಕೊಂಡು ಹೊಗೆಯಾಡಲು ಶುರುವಾಗಿದೆ. ಇದರಿಂದ ಗಾಬರಿಗೊಂಡ ಸಾರ್ವಜನಿಕರು ಹಾಗೂ ವಕೀಲರು ಹೊರಗೆ ಧಾವಿಸಿದ್ದಾರೆ. ಕೂಡಲೇ ಅಗ್ನಿಶಾಮಕ ಸಿಬ್ಬಂದಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ತಕ್ಷಣ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದರು.

ಸರ್ವರ್ ಕೊಠಡಿಯಲ್ಲಿದ್ದ ಕಂಪ್ಯೂಟರ್ ಸೇರಿದಂತೆ ಇತರ ಎಲೆಕ್ಟ್ರಾನಿಕ್ ವಸ್ತುಗಳು ಭಸ್ಮವಾಗಿವೆ. ಕೊಠಡಿಯನ್ನು ಕೋರ್ಟ್ ಸಿಬ್ಬಂದಿ ಸ್ವಚ್ಛಗೊಳಿಸಿದರು. ಘಟನೆಯಿಂದಾಗಿ ಕೋರ್ಟ್ ಆವರಣದಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು. ಆದರೆ, ನ್ಯಾಯಾಲಯದ ಕಲಾಪಗಳಿಗೆ ಯಾವುದೇ ಅಡ್ಡಿಯಾಗಲಿಲ್ಲ.