ನ್ಯೂಸ್

ನಿತ್ಯವೂ 7 ಗಂಟೆ ವಿದ್ಯುತ್ ಪೂರೈಸಲು ರೈತರ ಆಗ್ರಹ

Haveri - Kariyappa Aralikatti

ರಾಣೆಬೆನ್ನೂರ: ರೈತರ ಜಮೀನುಗಳ ನೀರಿನ ಪಂಪಸೆಟ್‌ಗಳಿಗೆ ನಿತ್ಯವೂ 7 ಗಂಟೆ ವಿದ್ಯುತ್ ಪೂರೈಯಿಸಬೇಕು ಎಂದು ಆಗ್ರಹಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ನಗರದ ಹೆಸ್ಕಾಂ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ರೈತ ಸಂಘದ ತಾಲೂಕು ಅಧ್ಯಕ್ಷ ಕರಬಸಪ್ಪ ಅಗಸಿಬಾಗಿಲ ಮಾತನಾಡಿ, ರಾಜ್ಯ ಸರ್ಕಾರ ಈ ಹಿಂದೆ ನಿತ್ಯ ಹಗಲಿನಲ್ಲಿ 7 ಗಂಟೆಗಳ ಕಾಲ ರೈತರ ಜಮೀನುಗಳ ಪಂಪಸೆಟ್‌ಗಳಿಗೆ ವಿದ್ಯುತ್ ಪೂರೈಕೆ ಮಾಡುತ್ತಿತ್ತು. ನಂತರದಲ್ಲಿ 1 ಗಂಟೆ ಕಡಿಮೆ ಮಾಡಿ ಹಗಲು 3 ಗಂಟೆ ಹಾಗೂ ರಾತ್ರಿ 3 ಗಂಟೆ ಮಾಡಲಾಗಿತ್ತು. ಆದರೀಗ ಅದು ಕೂಡ ಸರಿಯಾಗಿಲ್ಲ ಬರುತ್ತಿಲ್ಲ.
ಲೋಡ್‌ಶೆಡ್ಡಿಂಗ್, ಲೈನ್ ರೀಪೇರಿ ನೆಪಹೇಳಿಕೊಂಡು ಇಡೀ ದಿನ ವಿದ್ಯುತ್ ಪೂರೈಕೆ ಮಾಡುತ್ತಿಲ್ಲ. ಕಳೆದ 15 ದಿನದಿಂದ ಮಳೆ ಸಂಪೂರ್ಣ ಮಾಯವಾಗಿ ಹೋಗಿದೆ. ಆದ್ದರಿಂದ ಬೆಳೆಗಳಿಗೆ ಬೋರ್‌ವೆಲ್ ಹಾಗೂ ನದಿ ಮೂಲಕ ನೀರು ಹಾಯಿಸಬೇಕು. ಅದಕ್ಕಾಗಿ ಪಂಪಸೆಟ್‌ಗಳ ಅವಶ್ಯಕತೆ ಅಧಿಕವಾಗಿದೆ.
ಆದರೆ, ಹೆಸ್ಕಾಂನವರು ವಿದ್ಯುತ್ ಕಣ್ಣಾಮುಚ್ಚಾಲೇ ಮಾಡುತ್ತಿರುವುದರಿಂದ ಬೆಳೆಗಳಿಗೆ ನೀರು ಹಾಯಿಸಲು ಆಗುತ್ತಿಲ್ಲ. ಇದರಿಂದ ಬೆಳೆಗಳು ಒಣಗಿ ಹಾಳಾಗುವ ಹಂತಕ್ಕೆ ಬಂದಿವೆ. ಆದ್ದರಿಂದ ರಾಜ್ಯ ಸರ್ಕಾರ ಕೂಡಲೇ ಸೂಕ್ತ ಕ್ರಮ ಕೈಗೊಂಡು ನಿತ್ಯವೂ 7 ಗಂಟೆ ಕಾಲ ವಿದ್ಯುತ್ ಪೂರೈಕೆ ಮಾಡಬೇಕು. ಇಲ್ಲವಾದರೆ ರಾಜ್ಯಾದ್ಯಂತ ತೀವ್ರತರನಾದ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಘಟನಾ ಸ್ಥಳಕ್ಕೆ ಬಂದ ತಹಸೀಲ್ದಾರ್ ಎಚ್.ಎನ್. ಶಿರಹಟ್ಟಿ ಹಾಗೂ ಹೆಸ್ಕಾಂ ಎಇ ಗೋಪಾಲ ಅವರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ರೈತ ಮುಖಂಡರಾದ ರಮೇಶಗೌಡ ಕರಬಸಯ್ಯರ, ಸುರೇಶ ದೂಳೆಹೊಳೆ, ಲೋಕೇಶ ಸುತಾರ, ಸುರೇಶ ಹೊನ್ನಪ್ಪಳವರ, ಫಕ್ಕೀರಗೌಡ ಬುದಗಟ್ಟಿ, ಸಿದ್ದಪ್ಪ ಕುಪ್ಪೇಲೂರ, ಯಲ್ಲಪ್ಪ ಯಲಿಗಾರ ಮತ್ತಿತರರು ಪಾಲ್ಗೊಂಡಿದ್ದರು.