ಅಭಿಲಾಷ್ ತಿಟ್ಟಮಾರನಹಳ್ಳಿ ಚನ್ನಪಟ್ಟಣ
ಬೊಂಬೆನಾಡಿನ ರಾಜಕಾರಣ ಚುನಾವಣೆಗೂ ಮುನ್ನವೇ ರಂಗೇರಿರುವುದು ಹಳೆಯ ವಿಚಾರ. ಕ್ಷೇತ್ರದ ಜನರ ಮನಗೆಲ್ಲಲು ಬಿಜೆಪಿ-ಜೆಡಿಎಸ್ ಪೈಪೋಟಿಗೆ ಬಿದ್ದಂತೆ ಕಾರ್ಯತಂತ್ರ ರೂಪಿಸುತ್ತಿವೆ. ಅದರಲ್ಲೂ ಒಂದು ಹೆಜ್ಜೆ ಮುಂದಿಟ್ಟಿರುವ ಬಿಜೆಪಿ ನಾಯಕ, ಎಂಎಲ್‌ಸಿ ಸಿ.ಪಿ. ಯೋಗೇಶ್ವರ್, ಸ್ವಾಭಿಮಾನದ ಹೆಸರಿನಲ್ಲಿ ಜನಾಶೀರ್ವಾದ ಬೇಡಿ ಹಳ್ಳಿಗಳತ್ತ ಸಂಕಲ್ಪ ನಡಿಗೆ ಕೈಗೊಂಡಿದ್ದಾರೆ.
ಹೌದು..., ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಸ್ವಕ್ಷೇತ್ರ ಚನ್ನಪಟ್ಟಣದಲ್ಲಿ ಚುನಾವಣೆ ಜ್ವರ ಜೋರಾಗಿದೆ.
ಎಚ್‌ಡಿಕೆ ಹಾಗೂ ಮೇಲ್ಮನೆ ಸದಸ್ಯ ಸಿಪಿವೈ ಹಣಾಹಣಿಯ ಕ್ಷೇತ್ರದಲ್ಲಿ ಪ್ರತಿನಿತ್ಯ ಒಂದಿಲ್ಲೊಂದು ರಾಜಕೀಯದ ಚಟುವಟಿಕೆಗಳು ಗರಿಗೆದರುತ್ತಿವೆ. ಮುಂಬರುವ ಚುನಾವಣೆ ದೃಷ್ಟಿಯಲ್ಲಿಟ್ಟು ಮತದಾರರ ಮನಸೆಳೆಯುವ ವಿವಿಧ ಚಟುವಟಿಕೆಗಳು ತಾಲೂಕಿನಲ್ಲಿ ಬಿರುಸುಗೊಂಡಿವೆ. ಜೆಡಿಎಸ್ ಮತ್ತು ಬಿಜೆಪಿ ಚುನಾವಣಾ ಗುಂಗಿನಲ್ಲಿ ಮುಳುಗಿವೆ. ಈ ಮಧ್ಯೆ ಕಾಂಗ್ರೆಸ್ ಟಿಕೆಟ್ ಅಕಾಂಕ್ಷಿಯೊಬ್ಬರು ಧರ್ಮಕ್ಷೇತ್ರ ದರ್ಶನ ಹೆಸರಿನಲ್ಲಿ ಮತದಾರರ ಮನಸ್ಸು ಗೆಲ್ಲುವ ಕಾರ್ಯ ಮಾಡುತ್ತಿದ್ದಾರೆ.
ಮನೆ ಮಗನ ನಡಿಗೆ...: ಎಚ್‌ಡಿಕೆ ವಿರುದ್ಧ ಕಳೆದ ಚುನಾವಣೆಯಲ್ಲಿ ಸೋಲುಂಡಿದ್ದ ಸಿ.ಪಿ.ಯೋಗೇಶ್ವರ್, ಮುಂಬರುವ ಚುನಾವಣೆಯಲ್ಲಿ ಸ್ವಾಭಿಮಾನದ ಅಸ್ತ್ರ ಪ್ರಯೋಗಿಸಲು ಮುಂದಾಗಿದ್ದಾರೆ. ಕಳೆದ ಚುನಾವಣೆಯಲ್ಲಿ ಅಚ್ಚರಿ ಎಂಬಂತೆ ಕುಮಾರಸ್ವಾಮಿ ಕ್ಷೇತ್ರದಿಂದ ಸ್ಪರ್ಧಿಸಿ ಸಿ.ಪಿ.ಯೋಗೇಶ್ವರ್‌ಗೆ ಆಘಾತ ನೀಡಿದ್ದರು. ಆದರೆ, ಈ ಬಾರಿ ಕ್ಷೇತ್ರವನ್ನು ತಮ್ಮ ತೆಕ್ಕೆಗೆ ಪಡೆಯಲೇಬೇಕು ಎಂಬ ಹಠಕ್ಕೆ ಬಿದ್ದಿರುವ ಯೋಗೇಶ್ವರ್, ಕ್ಷೇತ್ರದಲ್ಲೇ ಬೀಡುಬಿಟ್ಟು ರಾಜಕೀಯ ತಂತ್ರ ಹೆಣೆಯುತ್ತಿದ್ದಾರೆ. ಇದರ ಮುಂದುವರಿದ ಭಾಗವಾಗಿ, ‘ನಾನು ಈ ಕ್ಷೇತ್ರದ ಮಗ.., ಕುಮಾರಸ್ವಾಮಿ ಹೊರಗಿನವರು’ ಎಂಬ ಭಾವನೆ ಮೂಡಿಸಲು ಖುದ್ದು ಮತದಾರರನ್ನು ಭೇಟಿ ಮಾಡುವ ಉದ್ದೇಶದಿಂದ ‘ಮನೆ ಮಗನ ನಡಿಗೆ... ನಿಮ್ಮ ಮನ ಮುಟ್ಟುವ ಕಡೆಗೆ’ ಎಂಬ ಸ್ಲೋಗನ್ ಅಡಿಯಲ್ಲಿ ಜನಾಶೀರ್ವಾದಕ್ಕೆ ಮುಂದಾಗಿದ್ದಾರೆ.
ಫೆ.1ರಿಂದ ಮಾ.31 ರವರೆಗೆ 2 ತಿಂಗಳು ಸ್ವಾಭಿಮಾನದ ಸಂಕಲ್ಪ ನಡಿಗೆ ಎಂಬ ನಿರಂತರ ಕಾರ್ಯಕ್ರಮ ರೂಪಿಸಿದ್ದಾರೆ. ತಾಲೂಕಿನ ಕೆಂಗಲ್ ಆಂಜನೇಯ ಸ್ವಾಮಿ ದೇವಾಲಯದಿಂದ ಆರಂಭಗೊಳ್ಳುವ ಈ ನಡಿಗೆ ತಾಲೂಕಿನ ಪ್ರತಿಹಳ್ಳಿಯನ್ನು ಮುಟ್ಟುವ ಗುರಿ ಇಟ್ಟುಕೊಂಡಿದೆ. ಪ್ರತಿ ಮತದಾರರನ್ನು ಖುದ್ದು ಭೇಟಿ ಮಾಡುವುದು ಹಾಗೂ ಅಶೀರ್ವಾದ ಬೇಡುವುದು ಉದ್ದೇಶವಾಗಿದೆ. ಸಂಪೂರ್ಣ ಕಾಲ್ನಡಿಗೆಯ ಮೂಲಕವೇ ಗ್ರಾಮಗಳಿಗೆ ಭೇಟಿ ನೀಡುವ ಯೋಗೇಶ್ವರ್, ಆಯಾ ಗ್ರಾಮಗಳಲ್ಲೇ ವಾಸ್ತವ್ಯ ಹೂಡಿ, ಮತದಾರರಿಗೆ ನಾನು ನಿಮ್ಮ ಮನೆಮಗ ಎಂಬುದನ್ನು ಅರಿವು ಮಾಡಿಕೊಡುವ ಉದ್ದೇಶ ಹೊಂದಿದ್ದಾರೆ. ಈಗಾಗಲೇ ಇದಕ್ಕೆ ಬೇಕಾದ ತಯಾರಿ ನಡೆಯುತ್ತಿದೆ. ಒಟ್ಟಾರೆ, ಚುನಾವಣಾ ಪೂರ್ವ ಬೊಂಬೆನಾಡ ರಾಜಕಾರಣ ದಿನದಿಂದ ದಿನಕ್ಕೆ ತೀವ್ರ ಕಾವು ಪಡೆದುಕೊಳ್ಳುತ್ತಿದ್ದು, ಪಕ್ಷಗಳ ಮುಖಂಡರು ಹಾಗೂ ಕಾರ್ಯಕರ್ತರಿಗೆ ಕೊಂಚ ಡಿಮ್ಯಾಂಡ್ ಹೆಚ್ಚಾಗಿದೆ.
ಸದ್ದು ಮಾಡಲು ಕೈ ಯತ್ನ: ಈ ಎರಡು ಪಕ್ಷಗಳ ಅಬ್ಬರದ ಮಧ್ಯೆ ಕ್ಷೇತ್ರದಲ್ಲಿ ಕಾಂಗ್ರೆಸ್ ಸದ್ದು ಕೊಂಚ ಕಡಿಮೆಯಾಗಿದೆ. ಪಕ್ಷದ ಅಭ್ಯರ್ಥಿ ಅಂತಿಮವಾಗದ ಕಾರಣ ಪಕ್ಷದ ಟಿಕೆಟ್ ಆಕಾಂಕ್ಷಿತರು ಸಣ್ಣಪುಟ್ಟ ಕಾರ್ಯಕ್ರಮ ಹೊರತುಪಡಿಸಿ, ಮತದಾರರ ಬಳಿ ಇನ್ನೂ ತೆರಳುತ್ತಿಲ್ಲ. ಈ ಮಧ್ಯೆ ಪಕ್ಷದ ಟಿಕೆಟ್‌ಗೆ ಪ್ರಬಲ ಅಕಾಂಕ್ಷಿಯಾಗಿರುವ ಉದ್ಯಮಿ ಪ್ರಸನ್ನ ಪಿ. ಗೌಡ, ಉಚಿತವಾಗಿ ಧರ್ಮಕ್ಷೇತ್ರಗಳ ದರ್ಶನಕ್ಕೆ ಅವಕಾಶ ಮಾಡಿಕೊಡುವ ಮೂಲಕ ಸದ್ದಿಲ್ಲದೇ ಮತದಾರರನ್ನು ಸೆಳೆಯುವ ಯತ್ನ ಮಾಡುತ್ತಿದ್ದಾರೆ.
ಜೆಡಿಎಸ್ ಕೂಡ ಮುಂದೆ: ಇನ್ನು ಜೆಡಿಎಸ್ ಪಕ್ಷ ಕೂಡ ಚುನಾವಣೆ ಸಂಬಂಧ ತಾಲೂಕಿನಲ್ಲಿ ಸಕ್ರಿಯಗೊಂಡಿದೆ. ಎಚ್.ಡಿ. ಕುಮಾರಸ್ವಾಮಿ ಅನುಪಸ್ಥಿತಿಯಲ್ಲೂ ತಾಲೂಕು ಜೆಡಿಎಸ್ ಅಧ್ಯಕ್ಷ ಎಚ್.ಸಿ. ಜಯಮುತ್ತು ಸೇರಿ ಪಕ್ಷದ ಸ್ಥಳೀಯ ನಾಯಕರು ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಸುತ್ತಾಟ ನಡೆಸುತ್ತಿದ್ದಾರೆ. ಯುವ ನಾಯಕ ನಿಖಿಲ್ ಕುಮಾರಸ್ವಾಮಿ ಅವರನ್ನು ಅಗತ್ಯ ವೇಳೆಯಲ್ಲಿ ಬಳಸಿಕೊಂಡು, ಪಕ್ಷ ಸಂಘಟನೆಯಲ್ಲಿ ನಿರತರಾಗಿದ್ದಾರೆ. ಗ್ರಾಮ ಹಾಗೂ ವಾರ್ಡ್‌ವಾರು ಮುಖಂಡರು ಹಾಗೂ ಕಾರ್ಯಕರ್ತರನ್ನು ಹುರಿದುಂಬಿಸುವ ಕೆಲಸವಾಗುತ್ತಿದೆ. ಯೋಗೇಶ್ವರ್ ಸ್ವಾಭಿಮಾನದ ಅಸ್ತ್ರಕ್ಕೆ ಪ್ರತಿಯಾಗಿ ಅಭಿವೃದ್ಧಿ ಅಸ್ತ್ರ ಪ್ರಯೋಗಿಸಲು ಮುಂದಾಗಿದ್ದಾರೆ.