ಅರಸಾಳು ಪಿಎಸಿಎಸ್ ನಿರ್ದೇಶಕರ ಚುನಾವಣೆಗೆ ಸಂಬಂಧಿಸಿ ಕಾಂಗ್ರೆಸ್-ಬಿಜೆಪಿ ಬೆಂಬಲಿತರ ಮಧ್ಯೆ ಚರ್ಚೆ ನಡೆಯುತ್ತಿರುವುದು.  
ನ್ಯೂಸ್

ಸಹಮತ ಇಲ್ಲದೆ ಒಂದು ಕ್ಷೇತ್ರಕ್ಕೆ ಚುನಾವಣೆ

ಶಿವಕುಮಾರ ಎಸ್.ಪಿ.

ರಿಪ್ಪನ್‌ಪೇಟ: ಅರಸಾಳು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರ ಚುನಾವಣೆಯಲ್ಲಿ ಕಾಂಗ್ರೆಸ್-ಬಿಜೆಪಿ ಮುಖಂಡರ ಒಳಒಪ್ಪಂದದಂತೆ ಬಹುತೇಕ ಅಭ್ಯರ್ಥಿಗಳು ಅವಿರೋಧ ಆಯ್ಕೆಯಾಗಿದ್ದಾರೆ. ಆದರೆ ಎಸ್‌ಸಿ ಮೀಸಲು ಒಂದು ಕ್ಷೇತ್ರದಲ್ಲಿ ಮಾತ್ರ ಮಾತುಕತೆ ಫಲಪ್ರದ ಆಗದಿದ್ದರಿಂದ ಎರಡು ಕಡೆಯ ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ಡಿ.15ರಂದು ಸಹಕಾರ ಸಂಘದ ನಿರ್ದೇಶಕರ ಆಯ್ಕೆಗಾಗಿ ಚುನಾವಣೆ ನಿಗದಿಯಾಗಿತ್ತು. ಆರ್ಥಿಕವಾಗಿ ಸುಸ್ಥಿತಿಯಲ್ಲಿಲ್ಲದ ಸಹಕಾರ ಸಂಘಕ್ಕೆ ಚುನಾವಣೆ ನಡೆದರೆ ಮತ್ತಷ್ಟು ಹೊರೆಯಾಗುತ್ತದೆ ಎಂದರಿತ ಕಾಂಗ್ರೆಸ್ ಮತ್ತು ಬಿಜೆಪಿ ಮುಖಂಡರು ಅವಿರೋಧ ಆಯ್ಕೆಗೆ ಒಡಂಬಡಿಕೆ ಮಾಡಿಕೊಂಡಿದ್ದರು. ಅದರಂತೆ ಬಿಜೆಪಿ 7 ಹಾಗೂ ಕ್ರಾಂಗ್ರೆಸ್ ಬೆಂಬಲಿತರಿಗೆ 5 ಸ್ಥಾನ ಹಂಚಿಕೊಳ್ಳುವ ತೀರ್ಮಾನವಾಗಿದೆ.

ಡಿ.8ರಂದು ನಾಮಪತ್ರ ಸಲ್ಲಿಕೆಗೆ ಅಂತಿಮ ದಿನವಾಗಿತ್ತು. 12 ನಿರ್ದೇಶಕ ಸ್ಥಾನಗಳಿಗೆ 25 ಜನ ಉಮೇದುವಾರಿಕೆ ಸಲ್ಲಿಸಿದ್ದು, ಎಲ್ಲವೂ ಕ್ರಮಬದ್ಧವಾಗಿದ್ದವು. ನಾಮಪತ್ರ ವಾಪಸ್ ಪಡೆಯಲು ಅಂತಿಮ ದಿನವಾದ ಮಂಗಳವಾರ ಎರಡೂ ಪಕ್ಷಗಳಿಂದ 12 ಮಂದಿ ನಾಮಪತ್ರ ವಾಪಸ್ ಪಡೆದಿದ್ದಾರೆ. ಆದರೆ ಎಸ್‌ಸಿ ಮೀಸಲು ಕ್ಷೇತ್ರದಿಂದ ಆಕಾಂಕ್ಷಿಯಾಗಿದ್ದ ಸಂತೋಷ್ ಮತ್ತು ಚಂದ್ರಪ್ಪ ನಾಮಪತ್ರ ಹಿಂಪಡೆಯದೆ ಇದ್ದುದ್ದರಿಂದ ಒಂದು ಮೀಸಲು ಕ್ಷೇತ್ರಕ್ಕೆ ಚುನಾವಣೆ ನಡೆಯಲಿದೆ

ಯಾರ‌್ಯಾರು ಅವಿರೋಧ ಆಯ್ಕೆ?: ಗಿರೀಶ್, ಜಲಂಧರ, ಜ್ಯೋತಿ, ಟೀಕೇಶಪ್ಪ, ಡಿ.ಎಂ.ಗೊನ್ಸಾಲ್ವಿಸ್, ದಿನೇಶ, ದೊಡ್ಡಯ್ಯ ಗೌಡ, ನಾಗರಾಜ, ಮಹಮ್ಮದ್ ಷರ್ೀ, ರಾಜು, ಕೀರ್ತಿರಾಜ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಮುಖಂಡರಲ್ಲಿ ಮಾತಿನ ಚಕಮಕಿ: ಕೊಟ್ಟ ಮಾತಿನಂತೆ ಬಿಜೆಪಿಯವರು ಎಸ್‌ಸಿ ಮೀಸಲು ಕ್ಷೇತ್ರದ ಅಭ್ಯರ್ಥಿಯ ನಾಮಪತ್ರ ವಾಪಸ್ ತೆಗೆಸುವಲ್ಲಿ ಬದ್ಧತೆ ತೋರಿಲ್ಲ ಎಂದು ಆಕ್ಷೇಪಿಸಿದ ಕಾಂಗ್ರೆಸ್ ಮುಖಂಡರು ಅಸಮಾಧಾನ ವ್ಯಕ್ತಪಡಿಸಿದರು. ಇದಕ್ಕೆ ಬಿಜೆಪಿ ನಾಯಕರು ಸಮಜಾಯಿಷಿ ನೀಡಲು ಮುಂದಾದರು. ಆಗ ಕೆಲಕಾಲ ಗೊಂದಲ ಉಂಟಾಗಿತ್ತು. ಆನಂತರ ಚುನಾವಣಾಧಿಕಾರಿ ಅವಿರೋಧ ಆಯ್ಕೆ ಮತ್ತು ಚುನಾವಣೆಯಲ್ಲಿ ಉಳಿದ ಅಭ್ಯರ್ಥಿಗಳ ಪಟ್ಟಿಯನ್ನು ನೋಟಿಸ್ ಲಕದಲ್ಲಿ ಪ್ರಕಟಿಸಿದ ನಂತರ ಅಸಮಾಧಾನದಿಂದಲೇ ಹೊರನಡೆದರು.