ನ್ಯೂಸ್

ಇಂದು ದೆಹಲಿ Election Result; ಹ್ಯಾಟ್ರಿಕ್​ ನಿರೀಕ್ಷೆಯಲ್ಲಿ ಆಪ್​, 25 ವರ್ಷಗಳ ಅರಳಲಿದೆಯಾ ಮುದುಡಿದ ತಾವರೆ?

ನವದೆಹಲ: ತೀವ್ರ ಕುತೂಹಲ ಮೂಡಿಸಿರುವ ರಾಷ್ಟ್ರ ರಾಜಧಾನಿ ನವದೆಹಲಿ ವಿಧಾನಸಭೆ ಚುನಾವಣಾ ಫಲಿತಾಂಶ (Election Result) ಇಂದು (ಫೆಬ್ರವರಿ 08) ಹೊರಬೀಳಲಿದ್ದು, ಬಿಜೆಪಿ, ಎಎಪಿ ಹಾಗೂ ಕಾಂಗ್ರೆಸ್​ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಈಗಾಗಲೇ ಚುನಾವಣೋತ್ತರ ಸಮೀಕ್ಷೆಗಳು ಬಿಡುಗಡೆಯಾಗಿದ್ದು, ದೆಹಲಿಯ ಜನರು ಬಿಜೆಪಿ ಪರ ಒಲವು ವ್ಯಕ್ತಪಡಿಸಿರುವ ಬಗ್ಗೆ ವರದಿಗಳನ್ನು ಪ್ರಕಟಿಸಿವೆ. ಇನ್ನೂ ಸಮೀಕ್ಷೆಗಳೆಲ್ಲ ಸುಳ್ಳು ಎಂದು ಹೇಳಿರುವ ಆಪ್​ ನಾಲ್ಕನೇ ಅವಧಿಗೂ ಅಧಿಕಾರ ಮುಂದುವರೆಸುವ ವಿಶ್ವಾಸವನ್ನು ವ್ಯಕ್ತಪಡಿಸಿದೆ. ಗ್ಯಾರಂಟಿಗಳ ಗುಂಗಿನಲ್ಲಿ ಅಬ್ಬರದ ಪ್ರಚಾರ ನಡೆಸಿದ್ದ ಕಾಂಗ್ರೆಸ್​ 2-3 ಸ್ಥಾನ ಗೆಲ್ಲುತ್ತದೆ ಎಂದು ಸಮೀಕ್ಷೆಗಳು ಹೇಳಿದ್ದು, ಅಂತಿಮವಾಗಿ ಜಯ ಯಾರ ಪಾಲಾಗಲಿದೆ ಎಂದು ಕಾದು ನೋಡಬೇಕಿದೆ.

ಬೆಳಗ್ಗೆ ಎಂಟು ಗಂಟೆಗೆ ಮತ ಎಣಿಕೆ ಶುರುವಾಗಲಿದ್ದು, 11 ಗಂಟೆಯ ಹೊತ್ತಿಗೆ ಯಾವ ಪಕ್ಷ ಗದ್ದುಗೆ ಏರುತ್ತದೆ ಎಂಬ ಸ್ಪಷ್ಟ ಚಿತ್ರಣ ಹೊರಬೀಳಲಿದೆ. ಫೆಬ್ರವರಿ 05ರಂದು ನಡೆದ ಮತದಾನದಲ್ಲಿ ಶೇ. 60.54ರಷ್ಟು ವೋಟಿಂಗ್​ ನಡೆದಿತ್ತು. 13,766 ಮತಗಟ್ಟೆಗಳಲ್ಲಿ ನಡೆದ ಮತದಾನದಲ್ಲಿ 699 ಅಭ್ಯರ್ಥಿಗಳ ಭವಿಷ್ಯವನ್ನು ಇವಿಎಂ ಯಂತ್ರಗಳಲ್ಲಿ ಸೀಲ್ ಮಾಡಲಾಗಿದೆ.

2020ರಲ್ಲಿ ನಡೆದ ಚುನಾವಣೆಯಲ್ಲಿ ಅರವಿಂದ್​ ಕೇಜ್ರಿವಾಲ್​ ನೇತೃತ್ವದ ಆಮ್​ ಆದ್ಮಿ ಪಕ್ಷವು 62 ಸ್ಥಾನಗಳಲ್ಲಿ ಗೆಲ್ಲುವ ಮೂಲಕ ತನ್ನ ನೆಲೆಯನ್ನು ಮೂರನೇ ಬಾರಿಗೆ ವಿಸ್ತರಿಸಿತ್ತು. ಐದು ಸ್ಥಾನಗಳಲ್ಲಿ ಬಿಜೆಪಿ ಗೆದ್ದಿತ್ತು. ಮೂರು ಸ್ಥಾನಗಳಲ್ಲಿ ಪಕ್ಷೇತರರು ಜಯಿಸಿದ್ದರು. ಕಾಂಗ್ರೆಸ್ ಮತ್ತೊಮ್ಮೆ ಯಾವುದೇ ಸ್ಥಾನವನ್ನು ಪಡೆಯಲು ವಿಫಲವಾಯಿತು. ಈ ಬಾರಿ ಆಪ್​ನಂತೆಯೇ ಉಚಿತ ಯೋಜನೆಗಳನ್ನು ಘೋಷಿಸಿರುವ ಕಾಂಗ್ರೆಸ್ ಹಾಗೂ ಬಿಜೆಪಿ​ ಪಾಲಿಗೆ ಜಯದ ಬಾಗಿಲು ತೆರೆಯುತ್ತದೆಯಾ ಎಂದು ಕಾದು ನೋಡಬೇಕಿದೆ.

ಸದ್ಯ ಬಿಡುಗಡೆಯಾಗಿರುವ ಸಮೀಕ್ಷೆಗಳ ಪ್ರಕಾರ ಬಿಜೆಪಿ 40-50 ಸ್ಥಾನದಲ್ಲಿ ಜಯಿಸುವ ಮೂಲಕ ಅಧಿಕಾರಕ್ಕೇರುವುದ ಪಕ್ಕಾ ಎಂದು ಭವಿಷ್ಯ ನುಡಿಯಲಾಗಿದೆ. 25-30 ಸ್ಥಾನಗಳಲ್ಲಿ ಎಎಪಿ ಜಯಿಸಲಿದ್ದು, ಕಾಂಗ್ರೆಸ್​ 2-3 ಸ್ಥಾನದಲ್ಲಿ ಗೆಲ್ಲುವುದು ಪಕ್ಕಾ ಎಂದು ಹೇಳಲಾಗಿದೆ. ಅಂತಿಮವಾಗಿ ಮತದಾರ ಯಾರತ್ತ ಒಲವು ತೋರಿದ್ದಾನೆ ಎಂಬುದು ಫಲಿತಾಂಶ ಪ್ರಕಟವಾದ ಬಳಿಕ ತಿಳಿಯಲಿದೆ.