ಶ್ರೀನಿವಾಸಪುರ : ಗ್ರಾಮ ಪಂಚಾಯಿತಿ ಚುನಾವಣೆಗೆ ದಿನಾಂಕ ನಿಗದಿಯಾಗುತ್ತಿರುವಂತೆ ತಾಲೂಕಿನ ಗ್ರಾಮಗಳಲ್ಲಿ ರಾಜಕೀಯ ಚಟುವಟಿಕೆ ಗರಿಗೆದರಲಾರಂಭಿಸಿದ್ದು, ಜಿದ್ದಾ-ಜಿದ್ದಿಗೆ ಹೆಸರಾಗಿರುವ ಶ್ರೀನಿವಾಸಪುರ ತಾಲೂಕಿನಲ್ಲಿ ರಾಜಕೀಯ ಪಕ್ಷಗಳು ಸಮರ್ಥ ಅಭ್ಯರ್ಥಿಗಳ ಹುಡುಕಾಟ ಆರಂಭಿಸಿವೆ.
ತಾಲೂಕಿನಲ್ಲಿ 25 ಗ್ರಾಪಂಗಳಿದ್ದು, ಮೊದಲ ಹಂತದಲ್ಲೇ ಚುನಾವಣೆ ನಡೆಯಲಿದೆ. ಡಿ.7ರಿಂದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಪ್ರಾರಂಭವಾಗಲಿದೆ. ಈಗಾಗಲೆ ಎಲ್ಲ ಗ್ರಾಪಂಗಳಿಗೆ ಆರ್ಒ ಮತ್ತು ಪಿಆರ್ಒಗಳು ನೇಮಕಗೊಂಡಿದ್ದಾರೆ, ಚುನಾವಣಾ ಪ್ರಕ್ರಿಯೆ ಕಾರ್ಯಗಳ ಸಿದ್ಧತೆ ಭರದಿಂದ ಸಾಗಿದೆ.
ಜೆಡಿಎಸ್-ಕಾಂಗ್ರೆಸ್ ಹಣಾಹಣಿ: ಚುನಾವಣೆಯಲ್ಲಿ ರಾಷ್ಟ್ರೀಯ ಪಕ್ಷಗಳ ಚಿಹ್ನೆಗಳನ್ನು ಬಳಸುವಂತಿಲ್ಲವಾದ್ದರಿಂದ, ಪಕ್ಷದ ಬೆಂಬಲಿತ ಕಾರ್ಯಕರ್ತರು ಮತ್ತು ಮುಖಂಡರು ಕಣದಲ್ಲಿ ಸ್ಪರ್ಧೆ ನಡೆಸುತ್ತಾರೆ. ಆದರೆ, ಪಕ್ಷಗಳ ಮುಖಂಡರು ತಮ್ಮ ಬೆಂಬಲಿಗ ಅಭ್ಯರ್ಥಿ ಪರ ಮತಯಾಚನೆ ಮಾಡಬೇಕಾಗಿದೆ. ಶ್ರೀನಿವಾಸಪುರ ತಾಲೂಕಿನಲ್ಲಿ ಪ್ರಬಲ ಪಕ್ಷಗಳಾಗಿರುವ ಜೆಡಿಎಸ್ ಮತ್ತು ಕಾಂಗ್ರೆಸ್ ನಡುವೆ ನೇರ ಹಣಾಹಣಿ ಏರ್ಪಡುವುದು ನಿಶ್ಚಿತ.
ಕಳೆದ ಬಾರಿಗೆ ಹೋಲಿಸಿದರೆ, ಈ ಬಾರಿ ಆಡಳಿತಾರೂಢ ಬಿಜೆಪಿ ಕಡೆಗೆ ಜನರ ಒಲವು ಹೆಚ್ಚುತ್ತಿರುವ ಪರಿಣಾಮ, ಶೇ.75 ಗ್ರಾಪಂಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಕಣಕ್ಕಿಳಿಯಲು ಸಿದ್ಧತೆ ನಡೆಸಿದ್ದಾರೆ. ಹಾಗಾಗಿ, ಈ ಪಕ್ಷದಿಂದಲೂ ತಕ್ಕಮಟ್ಟಿನ ಸುಧಾರಿತ ಪ್ರದರ್ಶನ ಈ ಬಾರಿಯ ಚುನಾವಣೆಯಲ್ಲಿ ನಿರೀಕ್ಷೆಯಿದೆ.
ದಾಯಾದಿಗಳ ಕದನ: ಸ್ಥಳೀಯ ಚುನಾವಣೆಗಳಲ್ಲಿ ಪಕ್ಷಕ್ಕಿಂತ ವ್ಯಕ್ತಿಯ ವರ್ಚಸ್ಸು ಮುಖ್ಯವಾಗುತ್ತದೆ. ಇದರಿಂದಾಗಿ ದಾಯಾದಿಗಳ ಕದನವೂ ಏರ್ಪಡುವುದು ನಿಶ್ಚಿತವಾಗಿದೆ. ವಿಶೇಷವಾಗಿ ಶ್ರೀನಿವಾಸಪುರ ತಾಲೂಕಿನಲ್ಲಿ ಇದುವರೆಗೂ ನಡೆದಿರುವ ಚುನಾವಣೆಗಳನ್ನು ಗಮನಿಸಿದಾಗ ಸ್ಥಳೀಯ ಚುನಾವಣೆಗಳಲ್ಲಿ ದಾಯಾದಿಗಳೇ ಪರಸ್ಪರ ಎದುರಾಳಿಗಳಾದ ಉದಾಹರಣೆ ಹೆಚ್ಚು. ಇದರ ನಡುವೆಯೂ ಪಕ್ಷ ಹಾಗೂ ನಾಯಕರೇ ಮುಖ್ಯ ಎಂದು ಚುನಾವಣೆ ಎದುರಿಸಿರುವ ಹಲವು ಸನ್ನಿವೇಶಗಳೂ ಇವೆ.
ಪ್ರತಿಷ್ಠೆಯ ಕಣ: ಲೋಕಸಭೆ, ವಿಧಾನಸಭೆ ಚುನಾವಣೆಗಳಿಗಿಂತಲೂ ವಿಭಿನ್ನವಾಗಿವಾಗಿರುವ ಗ್ರಾಪಂ ಚುನಾವಣೆಯನ್ನು ಗ್ರಾಮಗಳಲ್ಲಿ ಪ್ರತಿಷ್ಠೆಯಾಗಿ ತೆಗೆದುಕೊಳ್ಳಲಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಗ್ರಾಪಂ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆ ಸಂದರ್ಭದಲ್ಲಿ ಕುದುರೆ ವ್ಯಾಪಾರ ಜೋರಾಗಿರುವುದರಿಂದ, ಮತದಾರರಿಗೂ ಅಭ್ಯರ್ಥಿಗಳ ಮೇಲೆ ವಿಶ್ವಾಸ ಇಲ್ಲದಂತಾಗಿದೆ. ಆದರೂ, ಯಾರನ್ನಾದರೂ ಒಬ್ಬರನ್ನು ಗೆಲ್ಲಿಸಲೇಬೇಕಾದ ಅನಿವಾರ್ಯತೆಯಲ್ಲಿ ಮತ ಚಲಾವಣೆ ಮಾಡುತ್ತಾರೆ. ಕಳೆದ 10 ವರ್ಷಗಳ ಹಿಂದಿನ ದಿನಗಳನ್ನು ನೆನಪಿಸಿಕೊಂಡರೆ ತಾಲೂಕಿನಲ್ಲಿ ಜಿದ್ದಾಜಿದ್ದಿ ಕಡಿಮೆಯಾಗಿದ್ದರೂ ಗ್ರಾಪಂ ಚುನಾವಣೆಗಳಲ್ಲಿ ಅದರ ಕಾವು ಮತ್ತೆ ಕಾಣಿಸುವ ಸಾಧ್ಯತೆ ತಳ್ಳಿ ಹಾಕುವಂತಿಲ್ಲ.
ಶಾಸಕ, ಮಾಜಿ ಶಾಸಕರ ಪ್ರಚಾರ ಇಲ್ಲ: ಶಾಸಕ ಕೆ.ಆರ್.ರಮೆಶ್ಕುಮಾರ್ ಹಾಗೂ ಮಾಜಿ ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಅವರು ಈ ಚುನಾವಣೆಯ ಪ್ರಚಾರಕ್ಕೆ ಹೋಗುವುದಿಲ್ಲ. ಆದರೆ, ಅವರವರ ಬೆಂಬಲಿತ ಅಭ್ಯರ್ಥಿಗಳನ್ನು ಗೆಲ್ಲಿಸುವಂತೆ ಮುಖಂಡರಿಗೆ ಆದೇಶಗಳನ್ನು ನೀಡುತ್ತಾರೆ. ಸಾಮಾನ್ಯ ಕ್ಷೇತ್ರದಿಂದ ಸ್ಪರ್ಧಿಸುವ ಅಭ್ಯರ್ಥಿಗಳಿಂದ ಹಣ ಹಾಗೂ ತುಂಡು-ಗುಂಡಿನ ಪಾರ್ಟಿಗಳು ರಾಜಾರೋಷವಾಗಿ ನಡೆಯುವುದನ್ನು ತಳ್ಳಿಹಾಕುವಂತಿಲ್ಲ. ಸರ್ಕಾರ ಪ್ರತಿ ಗ್ರಾಪಂಗೆ 1.5 ಕೋಟಿ ರೂಪಾಯಿ ನೇರ ಅನುದಾನ ಹಾಗೂ ನರೇಗಾ ಕಾಮಗಾರಿಗಳನ್ನು ನಿಬಾಯಿಸುವ ಹೊಣೆ ನೀಡುವುದಾಗಿ ತಿಳಿಸಿರುವುದರಿಂದ ಗುತ್ತಿಗೆದಾರರು ಹೆಚ್ಚಿನ ಸಂಖ್ಯೆಯಲ್ಲಿ ಸ್ಪರ್ಧಿಸಲು ತುದಿಗಾಲಿನಲ್ಲಿ ನಿಂತಿದ್ದರು. ಆದರೆ ಚುನಾವಣಾ ಆಯೋಗವು ಗುತ್ತಿಗೆದಾರರು ಸ್ಪರ್ಧಿಸುವಂತಿಲ್ಲ ಎಂದು ಆದೇಶ ನೀಡಿರುವುದರಿಂದ ಅವರ ಬೆಂಬಲದೊಂದಿಗೆ ಪೈಫೋಟಿ ಹೆಚ್ಚುವ ಲಕ್ಷಣ ಗೋಚರಿಸುತ್ತಿದೆ.