ಬೆಂಗಳೂರು:
ಲೋಕಸಭಾ ಚುನಾವಣೆಯಲ್ಲಿ ಮತದಾರನ ಎದುರು ಅದೃಷ್ಟ ಪರೀಕ್ಷೆಗೆ ಇಳಿದಿದ್ದ ಮಾಜಿ ಮುಖ್ಯಮಂತ್ರಿಗಳಾದ ಎಚ್.ಡಿ.ಕುಮಾರಸ್ವಾಮಿ, ಜಗದೀಶ್ ಶೆಟ್ಟರ್ ಮತ್ತು ಬಸವರಾಜ ಬೊಮ್ಮಾಯಿ ಅವರು ಗೆಲುವು ಸಾಧಿಸಿದ್ದಾರೆ.
ಜೆಡಿಎಸ್‌ನಿಂದ ಎಚ್ಡಿಕೆ, ಬಿಜೆಪಿಯಿಂದ ಶೆಟ್ಟರ್ ಮತ್ತು ಬೊಮ್ಮಾಯಿ ಅವರು ಗೆದ್ದಿದ್ದರೂ, ಈ ಮೂವರು ಎನ್‌ಡಿಎ ಮೈತ್ರಿ ಕೂಟದವರು ಎನ್ನುವುದು ವಿಶೇಷ. ಶೆಟ್ಟರ್ ಮತ್ತು ಬೊಮ್ಮಾಯಿ ಇವರಿಬ್ಬರು ಹುಬ್ಬಳ್ಳಿಯವರು ಎನ್ನುವುದು ಮತ್ತೊಂದು ವಿಶೇಷ.
ಕುಮಾರಸ್ವಾಮಿ 2ನೇ ಬಾರಿಗೆ ಸಂಸತ್ ಪ್ರವೇಶ ಮಾಡುತ್ತಿದ್ದರೆ, ಬಿಜೆಪಿಯ ಶೆಟ್ಟರ್ ಮತ್ತು ಬೊಮ್ಮಾಯಿ ಇಬ್ಬರೂ ಇದೇ ಮೊದಲ ಬಾರಿಗೆ ಸಂಸತ್ತಿಗೆ ಆಯ್ಕೆಯಾಗಿದ್ದಾರೆ.
ಕೇಂದ್ರದ ಐವರು ಮಂತ್ರಿಗಳಲ್ಲಿ
ಇಬ್ಬರಿಗೆ ಸೋಲು, ಇಬ್ಬರಿಗೆ ಗೆಲುವು
ಪ್ರಧಾನಿ ಮೋದಿ ಸಂಪುಟದಲ್ಲಿ ಸಚಿವರಾಗಿದ್ದ ರಾಜ್ಯದ ಐವರು ಸಚಿವರಲ್ಲಿ ಮೂವರು ಅದೃಷ್ಠ ಪರೀಕ್ಷೆಗಿಳಿದಿದ್ದರು. ಹುಬ್ಬಳ್ಳಿ ಧಾರವಾಡ ಕ್ಷೇತ್ರದಲ್ಲಿ ಪ್ರಹ್ಲಾದ ಜೋಷಿ, ಬೆಂಗಳೂರು ಉತ್ತರದಲ್ಲಿ ಸ್ಪರ್ಧಿಸಿದ್ದ ಶೋಭಾ ಕರಂದ್ಲಾಜೆ ಗೆಲುವು ಸಾಧಿಸಿದ್ದರೆ, ಬೀದರ್‌ನಲ್ಲಿ ಸ್ಪರ್ಧೆ ಮಾಡಿದ್ದ ಭಗವಂತ ಖೂಬಾ, ಕೇರಳದ ತಿರುವನಂತಪುರಕ್ಕೆ ಅದೃಷ್ಠ ಹರಸಿ ಹೋಗಿದ್ದ ರಾಜೀವ್ ಚಂದ್ರಶೇಖರ್ ಅವರು ಸೋಲುಂಡಿದ್ದಾರೆ. ಚಿತ್ರದುರ್ಗದಿಂದ ಸಂಸದರಾಗಿ ಸಚಿವರೂ ಆಗಿದ್ದ ನಾರಾಯಣಸ್ವಾಮಿ ಈ ಬಾರಿ ಚುನಾವಣೆಗೆ ಸ್ಪರ್ಧೆ ಮಾಡಿರಲಿಲ್ಲ.
ಅಭ್ಯರ್ಥಿಗಳನ್ನು ಬದಲಿಸಿದ್ದ ಕ್ಷೇತ್ರಗಳಲ್ಲಿ
ಬಿಜೆಪಿಗೆ ಬಂಪರ್ ಬೆಳೆ, 2 ಕಡೆ ಸೋಲು
ಲೋಕಸಭೆ ಚುನಾವಣೆ ಅಖಾಡಕ್ಕೆ ಹಾಲಿ ಸಂಸದರನ್ನು ಬದಲಿಸಿ ಹೊಸಬರಿಗೆ ಟಿಕೆಟ್ ನೀಡಿದ್ದ ಬಿಜೆಪಿ ಬಂಪರ್ ಬೆಳೆಯನ್ನು ಪಡೆದಿದದೆ. ಹತ್ತು ಕ್ಷೇತ್ರಗಳಲ್ಲಿ 8 ಕ್ಷೇತ್ರ ಗೆದ್ದಿರುವ ಬಿಜೆಪಿ 2 ಕ್ಷೇತ್ರವನ್ನು ಮಾತ್ರ ಕಳೆದುಕೊಂಡಿದೆ.
ಮೈಸೂರಿನಲ್ಲಿ ಯದುವೀರ್, ಬೆಳಗಾಂನಲ್ಲಿ ಜಗದೀಶ್ ಶೆಟ್ಟರ್, ಹಾವೇರಿಯಲ್ಲಿ ಬಸವರಾಜ ಬೊಮ್ಮಾಯಿ, ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಕೋಟ ಶ್ರೀನಿವಾಸ ಪೂಜಾರಿ, ತುಮಕೂರಿನಲ್ಲಿ ವಿ.ಸೋಮಣ್ಣ, ಮಂಗಳೂರಿನಲ್ಲಿ ಬ್ರಿಜೇಶ್ ಚೌಟ, ಚಿಕ್ಕಬಳ್ಳಾಪುರದಲ್ಲಿ ಡಾ.ಕೆ.ಸುಧಾಕರ್, ಉತ್ತರ ಕನ್ನಡದಲ್ಲಿ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಜಯಗಳಿಸಿದ್ದಾರೆ.
ಕೊಪ್ಪಳ ಮತ್ತು ದಾವಣಗೆರೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಸೋಲುಂಡಿದ್ದಾರೆ. ಮೈತ್ರಿಕೂಟಕ್ಕೆ ಬಿಟ್ಟುಕೊಡಲಾಗಿದ್ದ ಮಂಡ್ಯ ಮತ್ತು ಕೋಲಾರದಲ್ಲಿ ಜೆಡಿಎಸ್ ಜಯಗಳಿಸಿದೆ.