ಬೆಂಗಳೂರು: ಲೋಕಸಭೆ ಪ್ರತಿಪಕ್ಷ ನಾಯಕರಾಗಿ ರಾಹುಲ್ ಗಾಂಧಿಯವರ ಆರೋಪ ಗಂಭೀರವಾಗಿದೆ. ಪುರಾವೆ ಸಹಿತ ಬಹಿರಂಗಪಡಿಸಿದ್ದು, ಚುನಾವಣಾ ಆಯೋಗ ಸ್ವಯಂ ಪ್ರೇರಿತ ದಾವೆ ದಾಖಲಿಸಿಕೊಂಡು ತನಿಖೆ ನಡೆಸಬೇಕು ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಎಚ್.ಕೆ.ಪಾಟೀಲ ಪ್ರತಿಪಾದಿಸಿದರು.
ವಿಧಾನಸೌಧದಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿ ಅವರು, ಪುರಾವೆ, ಸಾಕ್ಷಿಸಹಿತ ರಾಹುಲ್ ಗಾಂಧಿ ಆರೋಪಿಸುತ್ತಿದ್ದಾರೆ. ಪ್ರಜಾಪ್ರಭುತ್ವ, ಮತದಾನದ ಪಾವಿತ್ರ್ಯತೆ ದೃಷ್ಟಿಯಿಂದ ಸಂವಿಧಾನ ಬದ್ಧ ಸಂಸ್ಥೆಯಾದ ಆಯೋಗ ತಕ್ಷಣ ಸ್ಪಂದಿಸುವ ನಿರೀಕ್ಷೆ ಹುಸಿಯಾಗಿದೆ ಎಂದರು.
ಆರೋಪಗಳಿಗೆ ಆಯೋಗವು ಒಂದೋ ಟೀಕಿಸಿದೆ ಇಲ್ಲವೇ ಮೌನವಹಿಸಿದೆ. ಅಸಾಮಾನ್ಯ ಬೆಳವಣಿಗೆ, ಸಾಂವಿಧಾನಿಕ ಸಂಸ್ಥೆ ಶೋಭಿಸುವುದಿಲ್ಲ ಎಂಬ ಅಸಹನೆ ಹೊರ ಹಾಕಿದರು.
ದಾಖಲೆ, ಪುರಾವೆಗಳಿದ್ದರೆ ಆಯೋಗಕ್ಕೆ ಅಫಿಡವಿಟ್ ಸಹಿತ ದೂರು ಸಲ್ಲಿಸಲು ಹಿಂಜರಿಕೆ ಏಕೆ ? ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿ, ಮಾಧ್ಯಮಗಳಲ್ಲಿ ಬಂದ ವರದಿಗಳನ್ನು ಆಧರಿಸಿ ನ್ಯಾಯಾಲಯಗಳು ಸ್ವಯಂ ಪ್ರೇರಿತ ಮೊಕದ್ದಮೆ ಹೂಡಿದ ಉದಾಹರಣೆಗಳಿವೆ ಎಂದು ವಾದಿಸಿದರು.
ಈ ಹಿಂದೆ ಚುನಾವಣೆ ಸುಧಾರಣೆಗಳು ಕುರಿತು ವಿಧಾನಸಭೆಯಲ್ಲಿ ನಡೆದ ವಿಶೇಷ ಚರ್ಚೆಯ ವೇಳೆ ಇವಿಎಂ ಪೂರೈಕೆ, ಲಭ್ಯತೆ ಹೊಂದಾಣಿಕೆ ಆಗದ ಬಗ್ಗೆ ಪುರಾವೆ ಸಹಿತ 3,450 ಪುಟಗಳ ಪತ್ರವನ್ನು ಬರೆದಿದ್ದೆ.
ಆದರೆ ಶಾಸನಸಭೆಗೆ ಈ ವಿಷಯ ಚರ್ಚಿಸುವ ಅಧಿಕಾರವೇ ಇಲ್ಲವೆಂಬ ದಾಷ್ಟ್ಯದ ಉತ್ತರವನ್ನು ಆಯೋಗ ನೀಡಿದೆ ಎಂದ ಸಚಿವ ಎಚ್.ಕೆ.ಪಾಟೀಲ ಅವರಿಗೆ ಮುಂದಿನ ಕ್ರಮವೇನು ? ಎಂದು ಪತ್ರಕರ್ತರ ಪ್ರಶ್ನಿಸಿದಾಗ ಮಾಧ್ಯಮಗಳಿಂದ ಅದನ್ನು ನಿರೀಕ್ಷಿಸುತ್ತಿರುವೆ ಎಂದರು.