ನ್ಯೂಸ್

ಗ್ರಾಮಾಯಣ | ಅವಿರೋಧ ಆಯ್ಕೆಯ ಮೇಲೆ ಆಯೋಗ ಕಣ್ಣು

ಬೆಂಗಳೂರು: ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ನೀತಿ ಸಂಹಿತೆ ಉಲ್ಲಂಘಿಸಿ ಅವಿರೋಧ ಆಯ್ಕೆಯಾಗಿದ್ದಲ್ಲಿ ಅಂತಹ ಸದಸ್ಯತ್ವವನ್ನೇ ಅಸಿಂಧುಗೊಳಿಸಲು ಚುನಾವಣಾ ಆಯೋಗ ಮುಂದಾಗಿದೆ. ಹಳ್ಳಿ ಫೈಟ್​ಗೆ ಅಖಾಡ ಸಜ್ಜಾಗಿರುವಂತೆಯೇ ರಾಜ್ಯದ ಹಲವೆಡೆ ಅಭಿವೃದ್ಧಿ ಹೆಸರಿನಲ್ಲಿ ಅವಿರೋಧ ಆಯ್ಕೆ, ಸದಸ್ಯತ್ವ ಹರಾಜು, ಚುನಾವಣಾ ಅಕ್ರಮಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಇದಕ್ಕೆ ಕಡಿವಾಣ ಹಾಕುವುದು ಆಯೋಗದ ಉದ್ದೇಶವಾಗಿದೆ. ಯಾವುದೇ ಗ್ರಾಮ ಪಂಚಾಯಿತಿ ಸದಸ್ಯರು ನಿಯಮಗಳಿಗೆ ವಿರುದ್ಧವಾಗಿ ಹರಾಜಿನಲ್ಲಿ ಅವಿರೋಧವಾಗಿ ಆಯ್ಕೆ ಗೊಂಡಿರುವುದು ಸಾಬೀತಾದಾರೆ ಅಂತವರು ಸದಸ್ಯತ್ವವನ್ನೇ ಕಳೆದುಕೊಳ್ಳಲಿದ್ದಾರೆ.

ತನಿಖೆಗೆ ಸೂಚನೆ: ಮಾಧ್ಯಮಗಳಲ್ಲಿ ವರದಿಯಾದ ಪ್ರಕರಣಗಳು ಸೇರಿದಂತೆ ಎಲ್ಲೆಲ್ಲಿ ಅವಿರೋಧ ಆಯ್ಕೆಯಾಗಿವೆಯೋ ಆ ಎಲ್ಲ ಪ್ರಕರಣಗಳನ್ನು ತನಿಖೆಗೆ ಒಳಪಡಿಸುವಂತೆ ರಾಜ್ಯ ಚುನಾವಣಾ ಆಯೋಗ ಜಿಲ್ಲಾಧಿಕಾರಿಗಳಿಗೆ ಸೂಚಿಸಿದೆ.

ಅಭಿವೃದ್ಧಿ ನೆಪ: ರಸ್ತೆ, ಚರಂಡಿ, ಶುದ್ಧ ಕುಡಿಯುವ ನೀರಿನ ಘಟಕ, ದೇವಸ್ಥಾನಗಳ ಜೀಣೋದ್ಧಾರ, ಸಮುದಾಯ ಭವನ ನಿರ್ವಣ, ಹಾಲು ಉತ್ಪಾದನಾ ಕೇಂದ್ರ ನಿರ್ವಣ, ಶಾಲೆಗಳಿಗೆ ಕಾಂಪೌಂಡ್ ನಿರ್ಮಾಣ ಸೇರಿದಂತೆ ಬೇರೆ ಬೇರೆ ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ಪಡೆಯಲು ಚುನಾವಣೆ ನಡೆಸದೆ ಸದಸ್ಯತ್ವ ಹರಾಜು ಹಾಕುತ್ತಿರುವ ಪ್ರಕರಣಗಳಿಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ಎಂಸಿಸಿ ತಂಡಕ್ಕೂ ಸೂಚನೆ: ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಅಕ್ರಮಗಳನ್ನು ತಡೆಗಟ್ಟಲು ತಾಲೂಕು ಮತ್ತು ಹೋಬಳಿ ಮಟ್ಟದಲ್ಲಿ ನೀತಿ ಸಂಹಿತೆ ಉಲ್ಲಂಘನೆ ನಿಗಾ ತಂಡ(ಎಂ.ಸಿ.ಸಿ.)ಗಳು ಕಾರ್ಯನಿರ್ವಹಿಸುತ್ತಿವೆ. ಇವುಗಳಿಗೂ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳುವಂತೆ ನಿರ್ದೇಶಿಸಲಾಗಿದೆ.

ಏನೆಲ್ಲ ತನಿಖೆ?

  • ಅವಿರೋಧ ಆಯ್ಕೆ ಹಿಂದೆ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಾಗಿದೆಯೆ?
  • ಸದಸ್ಯತ್ವ ಹರಾಜು ಹಾಕಲಾಗಿದೆಯೇ?
  • ಯಾವುದಾದರೂ ಪ್ರಭಾವ ಬಳಸಲಾಗಿದೆಯೇ?
  • ಗ್ರಾಮಸ್ಥರು ಒಗ್ಗೂಡಿ ಅವಿರೋಧ ಆಯ್ಕೆ ಮಾಡಿದ ಪ್ರಕರಣವಾಗಿದೆಯೇ?
  • ಯಾವ ಕಾರಣಕ್ಕಾಗಿ ಅವಿರೋಧ ಆಯ್ಕೆಯಾಗಿದೆ ?