ನವದೆಹಲಿ: ಬಿಹಾರದಲ್ಲಿ ಈಗಾಗಲೇ ಮತದಾರರ ಪಟ್ಟಿ ಪರಿಷ್ಕರಣೆ ಮಾಡಿರುವ ಕೇಂದ್ರ ಚುನಾವಣಾ ಆಯೋಗ ಇದೀಗ ಎರಡನೇ ಹಂತದಲ್ಲಿ 12 ರಾಜ್ಯ ಹಾಗೂ ಕೇಂದ್ರಾಡಳಿ ಪ್ರದೇಶಗಳಲ್ಲಿ ಮತದಾರರ ಪರಿಷ್ಕರಣೆ ಮಾಡುವುದಾಗಿ ಇಂದು (ಅ.27) ಮಹತ್ವದ ಘೋಷಣೆ ಮಾಡಿದೆ.
ಈ ಬಗ್ಗೆ ದೆಹಲಿಯಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಜ್ಞಾನೇಶ್ ಕುಮಾರ್, ಇಂದು ನಾವು ವಿಶೇಷ ತೀವ್ರ ಪರಿಷ್ಕರಣೆಯ ಎರಡನೇ ಹಂತದ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಸೇರಿದ್ದೇವೆ. ಬಿಹಾರದ ಮತದಾರರಿಗೆ ನನ್ನ ಶುಭಾಶಯಗಳನ್ನು ಅರ್ಪಿಸುತ್ತೇನೆ ಮತ್ತು ಯಶಸ್ವಿ SIR ನಲ್ಲಿ ಭಾಗವಹಿಸಿದ 7.5 ಕೋಟಿ ಮತದಾರರಿಗೆ ನಮಸ್ಕರಿಸುತ್ತೇನೆ. ಚುನಾವಣಾ ಆಯೋಗವು ಎಲ್ಲಾ 36 ರಾಜ್ಯಗಳ ಚುನಾವಣಾ ಅಧಿಕಾರಿಗಳನ್ನು ಭೇಟಿ ಮಾಡಿ ಪ್ರಕ್ರಿಯೆಯ ಬಗ್ಗೆ ವಿವರವಾಗಿ ಚರ್ಚಿಸಿದೆ ಎಂದು ತಿಳಿಸಿದ್ದಾರೆ.
ಮುಂದುವರೆದು ಮಾತನಾಡಿದ ಕುಮಾರ್, ಮುಂದಿನ ವರ್ಷ ನಡೆಯಲಿರುವ SIRನಲ್ಲಿ ದೇಶದ ಪ್ರಮುಖ ರಾಜ್ಯಗಳಾದ ತಮಿಳುನಾಡು, ಮಧ್ಯಪ್ರದೇಶ, ಗೋವಾ, ಗುಜರಾತ್, ಪಶ್ಚಿಮ ಬಂಗಾಳ, ಕೇರಳ, ಉತ್ತರ ಪ್ರದೇಶ, ರಾಜಸ್ತಾನ್, ಛತ್ತಿಸ್ಗಢ ರಾಜ್ಯಗಳಲ್ಲಿ ನಡೆಯಲಿದೆ ಎಂದು ಹೇಳಿದ್ದಾರೆ.
ಅಲ್ಲದೆ, ದೇಶದ ಕೇಂದ್ರಡಳಿತ ಪ್ರದೇಶಗಳಾದ ಪುದುಚೇರಿ, ಅಂಡಮಾನ್-ನಿಕೋಬಾರ್, ಲಕ್ಷದ್ವೀಪಗಳಲ್ಲಿಯೂ ನಡೆಯಲಿದೆ.
ಇದನ್ನೂ ಓದಿ: ಶ್ರೇಯಸ್ ಅಯ್ಯರ್ ಆರೋಗ್ಯ ಸ್ಥಿತಿ ಗಂಭೀರ: ತಕ್ಷಣ ಆಸ್ಟ್ರೇಲಿಯಾಗೆ ಹೊರಡಲು ಮುಂದಾದ ಪಾಲಕರು…! Shreyas Iyer
ಬಿಹಾರದಲ್ಲಿ ನಡೆಸಲಾದ SIRನ ಮೊದಲ ಹಂತವು 90,000 ಕ್ಕೂ ಹೆಚ್ಚು ಮತಗಟ್ಟೆಗಳನ್ನು ಒಳಗೊಂಡಿದೆ ಮತ್ತು ಶೂನ್ಯ ಮೇಲ್ಮನವಿಗಳೊಂದಿಗೆ ಯಶಸ್ವಿಯಾಗಿ ಪೂರ್ಣಗೊಂಡಿದೆ ಎಂದು ಜ್ಞಾನೇಶ್ ಕುಮಾರ್ ಹೇಳಿದ್ದಾರೆ. ಅಲ್ಲದೆ, ಬಿಹಾರದಲ್ಲಿ ಮತದಾರರ ಭಾಗವಹಿಸುವಿಕೆಯಿಂದ ಇತರ ರಾಜ್ಯಗಳಿಗೆ ಮಾನದಂಡವನ್ನು ನಿಗದಿಪಡಿಸುತ್ತದೆ ಎಂದು ಕುಮಾರ್ ಸ್ಪಷ್ಟಪಡಿಸಿದ್ದಾರೆ.
SIR ನಡೆಸಲಾಗುವ ಎಲ್ಲಾ ರಾಜ್ಯಗಳ ಮತದಾರರ ಪಟ್ಟಿಗಳನ್ನು ಇಂದು ರಾತ್ರಿ 12 ಗಂಟೆಗೆ ಫ್ರೀಜ್ ಮಾಡಲಾಗುತ್ತದೆ ಎಂದು ಕುಮಾರ್ ಘೋಷಿಸಿದ್ದಾರೆ. SIR ನಡೆಯುವ ರಾಜ್ಯಗಳಲ್ಲಿ, ಇಂದು ಮಧ್ಯರಾತ್ರಿಯಿಂದ ಮತದಾರರ ಪಟ್ಟಿಯನ್ನು ಸ್ಥಗಿತಗೊಳಿಸಲಾಗುತ್ತದೆ. ನಂತರ, ಈ ರಾಜ್ಯಗಳ ಮತದಾರರಿಗೆ ಎಲ್ಲಾ ವಿವರಗಳೊಂದಿಗೆ ವಿಶಿಷ್ಟ ಎಣಿಕೆ ನಮೂನೆಗಳನ್ನು ನೀಡಲಾಗುವುದು ಎಂದು ಮುಖ್ಯ ಚುನಾವಣಾ ಆಯುಕ್ತರು ಮುಂದಿನ ಹಂತವನ್ನು ಘೋಷಿಸುತ್ತಾ ಹೇಳಿದ್ದಾರೆ.ಅಲ್ಲದೆ, ಯಾವುದೇ ಅರ್ಹ ಮತದಾರರು ಪಟ್ಟಿಯಿಂದ ಹೊರಗುಳಿಯದಂತೆ ಮತ್ತು ಯಾವುದೇ ಅನರ್ಹ ಮತದಾರರು ಪಟ್ಟಿಯಲ್ಲಿ ಉಳಿಯದಂತೆ ನೋಡಿಕೊಳ್ಳುವುದು ಎಸ್‌ಐಆರ್ ಗುರಿಯಾಗಿದೆ ಎಂದು ಜ್ಞಾನೇಶ್ ಕುಮಾರ್ ತಿಳಿಸಿದ್ದಾರೆ. (ಏಜೆನ್ಸೀಸ್)