ಮಂಡ್ಯ: ಚುನಾವಣಾ ಕೆಲಸಕ್ಕೆಂದು ಜಿಲ್ಲೆಯಲ್ಲಿ ಕೆಎಸ್‌ಆರ್‌ಟಿಸಿಯ 301 ಬಸ್‌ಗಳನ್ನು ಬಳಸಿಕೊಂಡಿದರ ನೇರ ಪರಿಣಾಮ ಸಾರ್ವಜನಿಕರು ತುರ್ತು ಪ್ರಯಾಣಕ್ಕಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು.
ಜಿಲ್ಲೆಯಲ್ಲಿ ಕೆಎಸ್‌ಆರ್‌ಟಿಸಿ ಸಂಸ್ಥೆಯು 444 ಬಸ್‌ಗಳನ್ನು ಹೊಂದಿದ್ದು, ನಿತ್ಯ 423 ರೂಟ್‌ಗಳಲ್ಲಿ ಬಸ್‌ಗಳ ಕಾರ್ಯಾಚರಣೆ ನಡೆಸುತ್ತಿದೆ. ಆದರೆ, ಚುನಾವಣಾ ಕೆಲಸಕ್ಕೆಂದು ಜಿಲ್ಲಾಡಳಿತ 271 ಹಾಗೂ ಪೊಲೀಸ್ ಇಲಾಖೆಯು 30 ಕೆಎಸ್‌ಆರ್‌ಟಿಸಿ ಬಸ್‌ಗಳನ್ನು ಪಡೆದುಕೊಂಡಿತ್ತು. ಉಳಿದ 143 ಬಸ್‌ಗಳಲ್ಲಿ 3 ದುರಸ್ತಿಯಲ್ಲಿದ್ದ ಕಾರಣ 140 ಬಸ್‌ಗಳು ಮಾತ್ರ ಬುಧವಾರ ಸಾರ್ವಜನಿಕರ ಸೇವೆಗೆ ಲಭ್ಯವಿದ್ದವು.
ಮಸ್ಟರಿಂಗ್ ದಿನವೇ 301 ಬಸ್‌ಗಳನ್ನು ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ತೆಗೆದುಕೊಂಡಿತ್ತು. ಕೆಲವು ಬಸ್‌ಗಳನ್ನು ಕೆಎಸ್‌ಆರ್‌ಟಿ ಸಂಸ್ಥೆಯು ಮಧ್ಯಾಹ್ನದವರೆಗೆ ಕಾರ್ಯಾಚರಣೆ ನಡೆಸಿ ಆ ಬಳಿಕ ಚುನಾವಣಾ ಕರ್ತವ್ಯಕ್ಕೆ ನೀಡಿತ್ತು. ಮಂಗಳವಾರ ಸಾರಿಗೆ ವ್ಯವಸ್ಥೆಯಲ್ಲಿ ಬಸ್‌ಗಳ ಕೊರತೆ ಇತ್ತಾದರೂ ಸಮಸ್ಯೆ ಕಾಣಿಸಿರಲಿಲ್ಲ. ಆದರೆ, ಮತದಾನದ ದಿನವಾದ ಬುಧವಾರ ದಿನವಿಡೀ ಬಸ್‌ಗಳು ಚುನಾವಣಾ ಕಾರ್ಯಕ್ಕೆ ಬಳಕೆಯಾದವು. ಸಮಯಕ್ಕೆ ಸರಿಯಾಗಿ ಬಸ್‌ಗಳು ಬಾರದ ಪ್ರಯಾಣಿಕರು ತೀವ್ರ ತೊಂದರೆ ಅನುಭವಿಸಬೇಕಾಯಿತು. ಇತ್ತ ಸಾರ್ವಜನಿಕರು ಬಸ್‌ಗಳ ಕೊರತೆಯಿಂದಾಗಿ ಜನರು ತಮ್ಮೂರುಗಳಿಗೆ ತೆರಳಲು ಖಾಸಗಿ ವಾಹನಗಳ ಮೊರೆ ಹೋಗುವಂತಾಯಿತು. ರಸ್ತೆ ಬದಿಯಲ್ಲಿ ನಿಂತು ಬೇರೆ ವಾಹನಗಳಿಗೆ ಕೈಯೊಡ್ಡಿ ಡ್ರಾಪ್ ಕೇಳುವ ದೃಶ್ಯಗಳು ಸಾಮಾನ್ಯವಾಗಿ ಕಂಡುಬಂದವು. ಅತ್ತ ಚುನಾವಣೆ ಹಿನ್ನೆಲೆಯಲ್ಲಿ ಬೆಂಗಳೂರು-ಮೈಸೂರು ಹೆದ್ದಾರಿ ಸೇರಿದಂತೆ ಬಹುತೇಕ ರಸ್ತೆಗಳು ಜನರು, ವಾಹನಗಳ ದಟ್ಟಣೆಯಿಲ್ಲದೆ ಬಿಕೋ ಎನ್ನುವಂತಾಗಿತ್ತು.
ಜಿಲ್ಲೆಯಲ್ಲಿ ಕೆಎಸ್‌ಆರ್‌ಟಿಸಿ ಬಸ್‌ಗಳಿಗೆ ತೀವ್ರ ಸಮಸ್ಯೆಯಾಗಿದ್ದ ಕಾರಣ ಬೆಂಗಳೂರಿನಿಅದ ಬಿಎಂಟಿಸಿ ಬಸ್‌ಗಳನ್ನು ಕರೆಸಿಕೊಳ್ಳಲಾಗಿತ್ತು. ಮಂಡ್ಯ ಜಿಲ್ಲಾ ಕೇಂದ್ರದಿಂದ ಎಲ್ಲ ತಾಲೂಕು ಕೇಂದ್ರಗಳಿಗೆ ಹಾಗೂ ಒಂದು ತಾಲೂಕಿನಿಂದ ಮತ್ತೊಂದು ತಾಲೂಕು ಕೇಂದ್ರಗಳಿಗೆ ಬಿಎಂಟಿಸಿ ಬಸ್‌ಗಳು ಕಾರ್ಯಾಚರಣೆ ನಡೆಯಿತು.