ನ್ಯೂಸ್

ಟಿಪ್ಪರ್ ವಾಹನ ಡಿಕ್ಕಿ ಹೊಡೆದು ವೃದ್ಧೆ ಸಾವು

ಬೆಂಗಳೂರು: ಚರ್ಚ್‌ನಲ್ಲಿ ಪ್ರಾರ್ಥನೆ ಮುಗಿಸಿ ಹೊರ ಬಂದ ನಂತರ ರಸ್ತೆ ದಾಟುವಾಗ ಟಿಪ್ಪರ್ ವಾಹನ ಡಿಕ್ಕಿ ಹೊಡೆದು ವೃದ್ಧೆಯೊಬ್ಬರು ಮೃತಪಟ್ಟಿದ್ದಾರೆ

ರಾಮಮೂರ್ತಿನಗರ ನಿವಾಸಿ ಮೇರಿ ವಿಕ್ಟೋರಿಯಾ (೮೩) ಮೃತಪಟ್ಟವರು. ಶುಕ್ರವಾರ ಮಧ್ಯಾಹ್ನ ೧.೩೦ಕ್ಕೆ ರಿಚ್ಮಂಡ್ ರಸ್ತೆಯ ಫಾತೀಮ ಬೇಕರಿ ಬಳಿ ಈ ಘಟನೆ ನಡೆದಿದೆ.

ಚರ್ಚ್‌ಗೆ ಬಂದಿದ್ದ ಮೇರಿ ಅವರು ಪ್ರಾರ್ಥನೆ ಮುಗಿಸಿ ಮನೆಗೆ ಹೋಗಲು ರಿಚ್ಮಂಡ್ ರಸ್ತೆಯ ಫಾತೀಮ ಬೇಕರಿ ಬಳಿ ರಸ್ತೆ ದಾಟುತ್ತಿದ್ದರು. ಈ ವೇಳೆ ಹಿಂದಿನಿಂದ ವೇಗವಾಗಿ ಬಂದ ಟಿಪ್ಪರ್ ವಾಹನ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಗಂಭೀರವಾಗಿ ಗಾಯಗೊಂಡಿದ್ದ ಮೇರಿ ಅವರನ್ನು ಸ್ಥಳೀಯರು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಿಸದೆ ಮೇರಿ ಸಂಜೆ ೫.೩೦ಕ್ಕೆ ಮೃತಪಟ್ಟಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಘಟನೆ ಸಂಬಂಧ ಟಿಪ್ಪರ್ ವಾಹನದ ಚಾಲಕನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಲಾಗಿದೆ. ಈ ಸಂಬಂಧ ಅಶೋಕನಗರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.