ನ್ಯೂಸ್

8.8 ಲಕ್ಷ ರೂ. ಉಂಡೇನಾಮ! ಸೈಬರ್​ ವಂಚಕರ ಬಲೆಗೆ ಸಿಕ್ಕಿಬಿದ್ದ ವೃದ್ಧ ಕಂಗಾಲು | Cyber Fraud

Cyber Fraud: ಇತ್ತೀಚಿನ ದಿನಗಳಲ್ಲಿ ಕೇರಳ ರಾಜ್ಯದಲ್ಲಿ ಮತ್ತೊಂದು ಡಿಜಿಟಲ್​ ಅರೆಸ್ಟ್​ ಪ್ರಕರಣ ಬೆಳಕಿಗೆ ಬಂದಿದೆ. ಸೈಬರ್ ವಂಚಕರ ಗ್ಯಾಂಗ್​, ಕೋಝಿಕ್ಕೋಡ್‌ನ ನಿವಾಸಿ 83 ವರ್ಷದ ವೃದ್ಧನಿಗೆ ಬರೋಬ್ಬರಿ 8.8 ಲಕ್ಷ ರೂ. ವಂಚಿಸಿದೆ. ಕೋಝಿಕ್ಕೋಡ್‌ನ ವೆಸ್ಟ್ ಹಿಲ್ ಮೂಲದ ವ್ಯಕ್ತಿಗೆ ಮುಂಬೈನ ಸೈಬರ್ ಕ್ರೈಮ್ ಪೊಲೀಸ್ ಉಪ ಆಯುಕ್ತರಿಂದ ಕರೆ ಬಂದಿದ್ದು, ಮೋಸದ ಜಾಲಕ್ಕೆ ಸಿಕ್ಕಿಬಿದ್ದಿರುವುದು ಸ್ಪಷ್ಟವಾಗಿದೆ.

ಮುಂಬೈನ ನೀರಾವರಿ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ ವೃದ್ಧನಿಗೆ ಮಾನವ ಕಳ್ಳಸಾಗಣೆಯಲ್ಲಿ ತೊಡಗಿರುವುದಾಗಿ ಬೆದರಿಸಿದ ಸೈಬರ್​ ವಂಚಕರು, ಈ ಪ್ರಕರಣದಲ್ಲಿ ನಿಮ್ಮ ಕೈವಾಡವಿಲ್ಲ ಎಂಬುದಕ್ಕೆ ಒಂದಷ್ಟು ದಾಖಲೆಗಳನ್ನು ಪರಿಶೀಲಿಸುವ ಅಗತ್ಯವಿದೆ. ನಿಮ್ಮ ಬ್ಯಾಂಕ್ ದಾಖಲೆಗಳನ್ನು ಕಳುಹಿಸುವಂತೆ ವೃದ್ಧನಿಗೆ ಹೇಳಿದ್ದಾರೆ. ಇದನ್ನು ನಂಬಿದ ವ್ಯಕ್ತಿ, ತಮ್ಮ ಬ್ಯಾಂಕ್ ದಾಖಲೆಗಳನ್ನು ಕೊಟ್ಟಿದ್ದಾರೆ.

ವೃದ್ಧನ ಬ್ಯಾಂಕ್ ದಾಖಲೆಗಳು ಸಿಕ್ಕಿದ್ದೇ ತಡ ಅವರ ಖಾತೆಯಲ್ಲಿದ್ದ 8.8 ಲಕ್ಷ ರೂ. ಹಣವನ್ನು ಕ್ಷಣಮಾತ್ರದಲ್ಲಿ ವರ್ಗಾಯಿಸಿಕೊಂಡಿದ್ದಾರೆ. ತನಿಖೆಯ ಸಮಯದಲ್ಲಿ ವೃದ್ಧನ ಹಣ ತೆಲಂಗಾಣದ ಖಾತೆಗೆ ವರ್ಗಾವಣೆ ಆಗಿರುವುದು ತಿಳಿದುಬಂದಿದೆ ಎಂದು ಎಲತ್ತೂರು ಪೊಲೀಸರು ತಿಳಿಸಿದ್ದಾರೆ. ಘಟನೆಯ ಕುರಿತು ಹೆಚ್ಚಿನ ತನಿಖೆ ಕೈಗೊಂಡಿದ್ದೇವೆ ಎಂದು ಪೊಲೀಸರು ಹೇಳಿದ್ದಾರೆ,(ಏಜೆನ್ಸೀಸ್).