ರಾಮನಗರ : ನಗರಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತೊಮ್ಮೆ ಕಮಾಲ್ ಮಾಡಿದ್ದು, ಜೆಡಿಎಸ್ ನಗರ ಪ್ರದೇಶದ ಜನರಿಂದ ದೂರಾಗುವ ಸ್ಪಷ್ಟ ಮುನ್ಸೂಚನೆಯನ್ನು ಫಲಿತಾಂಶ ನೀಡಿದೆ.
ಕಳೆದ ಎರಡೂವರೆ ವರ್ಷಗಳಿಂದಲೂ ನನೆಗುದಿಗೆ ಬಿದ್ದಿದ್ದ ಚುನಾವಣೆ ಕರೊನಾ ಸಂಕಷ್ಟ ಕಾಲದಲ್ಲಿ ನಡೆದರೂ ಪ್ರಮುಖ ನಾಯಕರ ಗೈರು ಹಾಜರಿಯ ನಡುವೆ ಪ್ರಚಾರಕ್ಕೆ ಇಳಿದಿದ್ದ ವಿವಿಧ ಪಕ್ಷಗಳ ಅಭ್ಯರ್ಥಿಗಳು ಜಿದ್ದಾ ಜಿದ್ದಿನಿಂದಲೇ ಹೋರಾಟ ನಡೆಸಿದ್ದರು. ಏ.27ರಂದು ನಡೆದ ಮತದಾನದ ಫಲಿತಾಂಶ ಹೊರ ಬಂದಿದ್ದು, 31 ಸದಸ್ಯ ಬಲದ ನಗರಸಭೆಯಲ್ಲಿ ಓರ್ವ ಸದಸ್ಯೆ ಮೃತಪಟ್ಟಿರುವುದು ಸೇರಿದಂತೆ ಕಾಂಗ್ರೆಸ್ 19 ಸ್ಥಾನಗಳನ್ನು ಗಳಿಸಿ ಬೀಗಿದರೆ ಜೆಡಿಎಸ್ ಕೇವಲ 10 ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. ಇದರ ನಡುವೆ ಪಕ್ಷೇತರ ಅಭ್ಯರ್ಥಿಯೊಬ್ಬರು ಗೆಲುವು ಸಾಧಿಸಿದ್ದಾರೆ.
ಕೈಗೆ ಪ್ಲಸ್: 2013ರಲ್ಲಿ ನಡೆದ ನಗರಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರ ಹಿಡಿದಿತ್ತು. ಈ ವೇಳೆ 16 ಸ್ಥಾನಗಳನ್ನು ಗಳಿಸಿದ್ದ ಕಾಂಗ್ರೆಸ್ ಈ ಬಾರಿ 19 ಸ್ಥಾನಗಳನ್ನು ತನ್ನದಾಗಿಸಿಕೊಂಡಿದೆ. ಕಳೆದ ಬಾರಿ 12 ಸ್ಥಾನಗಳಲ್ಲಿ ಗೆಲುವು ಕಂಡಿದ್ದ ಜೆಡಿಎಸ್ 2 ಸ್ಥಾನಗಳನ್ನು ಕಳೆದುಕೊಂಡು 10 ಸದಸ್ಯರಿಗೆ ತೃಪ್ತಿಪಡುವಂತೆ ಆಗಿದೆ. ಇದರೊಂದಿಗೆ ಕಾಂಗ್ರೆಸ್ ಹೆಚ್ಚುವರಿಯಾಗಿ ಮೂರು ಸ್ಥಾನಗಳನ್ನು ಗೆದ್ದಂತೆ ಆಗಿದ್ದು ಸ್ಪಷ್ಟ ಬಹುಮತದೊಂದಿಗೆ ಅಧಿಕಾರ ಚುಕ್ಕಾಣಿ ಹಿಡಿದಿದೆ.
ಆತಂಕ ಇಲ್ಲದೆ ಎಣಿಕೆ : ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ರಾಮನಗರ 31 ವಾರ್ಡ್‌ಗಳ ಮತ ಎಣಿಕೆ ನಡೆಯಿತು. ಬೆಳಗ್ಗೆ 8 ಗಂಟೆಗೆ ಆರಂಭಗೊಂಡ ಮತ ಎಣಿಕೆ ಕಾರ್ಯ ಬಹುತೇಕ 11ಗಂಟೆಗೆ ಪೂರ್ಣಗೊಂಡಿತ್ತು. ಕರೊನಾ ನಡುವೆ ಜನ ಸಂದಣಿ ಇಲ್ಲದ ಕಾರಣ ಮತ ಎಣಿಕೆ ಸಿಬ್ಬಂದಿ ನಿರಾತಂಕವಾಗಿ ಮತ ಎಣಿಕೆ ಮಾಡಿದರು. ಮತ ಎಣಿಕೆ ಕೇಂದ್ರಕ್ಕೆ ಅಭ್ಯರ್ಥಿ, ಇಲ್ಲವೇ ಅವರ ಪರವಾಗಿ ಏಜೆಂಟ್ ಒಬ್ಬರಿಗೆ ಮಾತ್ರ ಪ್ರವೇಶ ಇದುದರಿಂದ ಹಾಗೂ ಎಣಿಕೆ ನಂತರವೂ ಯಾವುದೇ ವಿಜಯೋತ್ಸವಕ್ಕೆ ಅವಕಾಶ ಮಾಡಿಕೊಡದ ಕಾರಣ ಎಲ್ಲೂ ಹೆಚ್ಚಿನ ಜನರು ಕಂಡು ಬರಲಿಲ್ಲ. ಅಲ್ಲದೆ, ಪೊಲೀಸ್ ಸಿಬ್ಬಂದಿ ಸಹ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಸಂಬಂಧ ಪದೇ ಪದೇ ಸೂಚನೆ ನೀಡುತ್ತಾ ಇಡೀ ಎಣಿಕೆ ಕಾರ್ಯ ಯಾವುದೇ ಅಡೆ ತಡೆ ಇಲ್ಲದಂತೆ ಮಾಡಿದರು.
ಸೋತ-ಗೆದ್ದ ಪ್ರಮುಖರು
ರಾಮನಗರ: ನಗರಸಭೆ ಚುನಾವಣೆಯಲ್ಲಿ ಪ್ರಮುಖವಾಗಿ 5ನೇ ವಾರ್ಡ್ ಫಲಿತಾಂಶದ ಮೇಲೆ ಎಲ್ಲರ ಕಣ್ಣು ನೆಟ್ಟಿತ್ತು. ಎಂಇಐನ ಮಾಜಿ ಅಧ್ಯಕ್ಷರೂ ಆದ ಕಾಂಗ್ರೆಸ್ ಮುಖಂಡ ಕೆ.ಶೇಷಾದ್ರಿ ಅವರು ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದೇ ವಿಶೇಷವಾಗಿತ್ತು. ಇಲ್ಲಿನ ಫಲಿತಾಂಶ ಏನಾಗುವುದೋ ಎನ್ನುವ ಆತಂಕ ಕಾಂಗ್ರೆಸ್ ಕಾರ್ಯಕರ್ತರ ಜತೆಗೆ ಇತರೆ ಮುಖಂಡರಿಗೂ ಇತ್ತು. ಆದರೆ ಅಂತಿಮವಾಗಿ ಅವರು ಗೆಲುವಿನ ನಗೆ ಬೀರಿದರು. ಶೇಷಾದ್ರಿ 683 ಮತಗಳನ್ನು ಪಡೆದುಕೊಂಡರೆ, ನರಸಿಂಹಯ್ಯ 419 ಮತಗಳನ್ನು ತಮ್ಮದಾಗಿಸಿಕೊಂಡರು. ಇನ್ನು ನಗರಸಭೆ ಮಾಜಿ ಅಧ್ಯಕ್ಷ ಚೇತನ್ ಕುಮಾರ್ ಅವರು ಗೆಲುವು ಸಾಧಿಸುತ್ತಾರೆ ಎಂದು ಅಂದಾಜಿಸಲಾಗಿತ್ತಾದರೂ ಅವರು 11ನೇ ವಾರ್ಡ್‌ನಲ್ಲಿ ಜೆಡಿಎಸ್ ಅಭ್ಯರ್ಥಿ ಎದುರು ಸೋಲು ಕಂಡರು. ಮತ್ತೊಬ್ಬ ಮಾಜಿ ಅಧ್ಯಕ್ಷ ಲೋಹಿತ್ ಬಾಬು ತಮ್ಮ ಪತ್ನಿ ಅರ್ಚನಾ ಅವರನ್ನು ವಾರ್ಡ್ ನಂ 8ರಿಂದ ಕಣಕ್ಕೆ ಇಳಿಸಿದ್ದರಾದರೂ ಮತದಾರರು ಮನ್ನಣೆ ನೀಡಲಿಲ್ಲ. ಇನ್ನು ನಗರಸಭೆ ಮಾಜಿ ಸದಸ್ಯರಾಗಿದ್ದ ಜೆಡಿಎಸ್‌ನ ಎ.ರವಿ, ಬಿ.ಉಮೇಶ್ ಸಹ ಸೋಲು ಕಂಡರು.
ಇವರೇ ಟಾಪರ್ : ರಾಮನಗರ ನಗರಸಭೆಯಲ್ಲಿ ಅತಿ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸಿದ ಕೀರ್ತಿ 18ನೇ ವಾರ್ಡ್‌ನ ಕಾಂಗ್ರೆಸ್ ಅಭ್ಯರ್ಥಿ ಮೊಹಮದ್ ಆರೀಫ್ ಅವರಿಗೆ ಸಲ್ಲುತ್ತದೆ. ಇವರು ತಮ್ಮ ಎದುರಾಳಿ ಜೆಡಿಎಸ್‌ನ ಪರ್ವಿಜ್ ಪಾಷ ವಿರುದ್ಧ 953 ಮತಗಳ ಅಂತದಿಂದ ಗೆಲುವು ಸಾಧಿಸಿದ್ದಾರೆ. ಇಲ್ಲಿ ಆರೀಫ್ 1501 ಮತಗಳನ್ನು ಪಡೆದುಕೊಂಡರೆ ಪರ್ವೀಜ್ 548 ಮತಗಳನ್ನು ಗಳಿಸಿದ್ದಾರೆ. ಇನ್ನು ಮತ ಎಣಿಕೆಗೂ ಮುನ್ನ ಮೃತಪಟ್ಟ ಕಾಂಗ್ರೆಸ್‌ನ ಅಭ್ಯರ್ಥಿ ಲೀಲಾ 917 ಮತಗಳನ್ನು ಪಡೆದು ಜೆಡಿಎಸ್‌ನಿಂದ ಸ್ಪರ್ಧಿಸಿ 107 ಮತಗಳನ್ನು ಪಡೆದ ಅನುಸೂಯ ಅವರನ್ನು 810 ಮತಗಳಿಂದ ಸೋಲಿಸಿದ್ದಾರೆ. 20ನೇ ವಾರ್ಡ್‌ನ ಕಾಂಗ್ರೆಸ್‌ನ ಆಯಿಷಾ ಬಾನು 1275 ಮತಗಳನ್ನು ಪಡೆದರೆ ಜೆಡಿಎಸ್‌ನ ಪ್ರಮೀಳಾ 553 ಮತಗಳನ್ನು ಪಡೆದುಕೊಂಡಿದ್ದು, ಇಲ್ಲಿನ ಗೆಲುವಿನ ಅಂತರ 722 ಮತಗಳು.