ನ್ಯೂಸ್

ಯಶಸ್ವಿಯಾಗಿ ಭಾರ ಹೊರುವ ತಾಲೀಮಿ ನಡೆಸಿದ ಹೊಸ ಆನೆ ಏಕಲವ್ಯ

ಮೈಸೂರು: ವಿಶ್ವವಿಖ್ಯಾತ ದಸರಾ ಜಂಬೂಸವಾರಿ ಮೆರವಣಿಗೆಯ ಪ್ರಮುಖ ಆಕರ್ಷಣೆಯಾದ ಗಜಪಡೆಗೆ ಭಾರ ಹೊರುವ ತಾಲೀಮಿ ಮುಂದುವರದಿದ್ದು, ಭಾನುವಾರ ಹೊಸ ಆನೆ ಏಕಲವ್ಯ ಯಶಸ್ವಿಯಾಗಿ ತಾಲೀಮು ನಡೆಸಿದ್ದಾನೆ.

ಏಕಲವ್ಯ ಮೊದಲ ಬಾರಿಗೆ 300 ಕೆ.ಜಿ.ತೂಕದ ಮರಳಿನ ಮೂಟೆ ಭಾರ ಹೊರುವ ಮೂಲಕ ಅರಮನೆ ಆವರಣದಿಂದ ಬನ್ನಿಮಂಟಪದವರೆಗೆ ಯಶಸ್ವಿಯಾಗಿ ಹೆಜ್ಜೆ ಹಾಕಿದ.

ಸಂಜೆ 4.30ಕ್ಕೆ ಅರಮನೆ ಆವರಣ ಬಿಟ್ಟ ಏಕಲವ್ಯ ಸಂಜೆ 5.42ರ ವೇಳೆಗೆ ಬನ್ನಿಮಂಟಪ ತಲುಪಿದ್ದಾನೆ. ಹೊಸ ಆನೆಯಾದರೂ 1 ಗಂಟೆ 12 ನಿಮಿಷದಲ್ಲಿ ಬನ್ನಿಮಂಟಪ ತಲುಪುವ ಮೂಲಕ ಗಮನ ಸೆಳೆದಿದ್ದಾನೆ. ಆ ಮೂಲಕ ಭವಿಷ್ಯದ ಅಂಬಾರಿ ಆನೆಯಾಗಲು ತಾನು ಸಮರ್ಥನಿದ್ದೇನೆ ಎಂಬ ಸಂದೇಶ ನೀಡಿದ್ದಾನೆ.

ಬನ್ನಿಮಂಟಪದಲ್ಲಿ ಅರ್ಧಗಂಟೆಕಾಲ ವಿಶ್ರಾಂತಿ ಪಡೆದ ಗಜಪಡೆ 6.20ಕ್ಕೆ ಮತ್ತೆ ತಾಲೀಮು ಆರಂಭಿಸಿ, 7.30 ರ ವೇಳೆಗೆ ಅರಮನೆಗೆ ಹಿಂದಿರುಗಿತು.

ಏಕಲವ್ಯ ಭಾರ ಹೊತ್ತು ಗಾಂಭೀರ್ಯದಿಂದ ಮುಂದೆ ನಡೆದರೆ, ಆತನ ಹಿಂದೆ ಕ್ಯಾಪ್ಟನ್ ಅಭಿಮನ್ಯು, ಭೀಮ, ಗೋಪಿ, ಧನಂಜಯ, ಕಂಜನ್, ರೋಹಿತ, ಲಕ್ಷ್ಮೀ, ಪ್ರಶಾಂತ, ಮಹೇಂದ್ರ, ಸುಗ್ರೀವ್, ಲಕ್ಷ್ಮೀ, ಹಿರಣ್ಯ ಹೆಜ್ಜೆ ಹಾಕಿ ಸಾಥ್ ನೀಡಿದವು. ವರಲಕ್ಷ್ಮೀ ಭಾನುವಾರ ತಾಲೀಮಿನಿಂದ ವಿಶ್ರಾಂತಿ ನೀಡಲಾಗಿತ್ತು.

ರಾಜಪಥದಲ್ಲಿದ ನೂರಾರು ಜನ ಆನೆಗಳ ತಾಲೀಮನ್ನು ಕಣ್ತುಂಬಿಕೊಂಡರು. ಭಾರ ಹೊತ್ತು ಸಾಗುತ್ತಿದ್ದ ಏಕಲವ್ಯ ಹಾಗೂ ಆತನ ಹಿಂದೆ ಸಾಗುತ್ತಿದ್ದ ಗಜಪಡೆಯ ಚಿತ್ರಗಳನ್ನು ತಮ್ಮ ಮೊಬೈಲ್‌ಗಳಲ್ಲಿ ಸೆರೆಹಿಡಿದರು. ಅನೇಕರು ಸೆಲ್ಫಿಯನ್ನು ಕ್ಲಿಕ್ಕಿಸಿಕೊಂಡರು. ಈಗಾಗಲೇ ಕ್ಯಾಪ್ಟನ್ ಅಭಿಮನ್ಯು, ಭೀಮಾ, ಮಹೇಂದ್ರ, ಗೋಪಿ, ಧನಂಜಯ, ಸುಗ್ರೀವ ಆನೆಗಳಿಗೆ ಭಾರ ಹೊರಿಸಿ ತಾಲೀಮು ನಡೆಸಲಾಗಿದೆ. ಅಂಬಾರಿ ಹೊರಿಸುವ ತಾಲೀಮು ಆರಂಭಿಸುವುದಕ್ಕೂ ಮುನ್ನ ಕ್ಯಾಪ್ಟನ್ ಅಭಿಮನ್ಯು ಹೊರತಾಗಿ ಉಳಿದ ಭೀಮಾ, ಮಹೇಂದ್ರ, ಗೋಪಿ, ಧನಂಜಯ, ಸುಗ್ರೀವ ಹಾಗೂ ಏಕಲವ್ಯ ಆನೆಗಳಿಗೆ ಮತ್ತೊಂದು ಸುತ್ತಿನ ಭಾರ ಹೊರುವ ತಾಲೀಮು ನಡೆಯಲಿದೆ.