ಬೆಂಗಳೂರು:
ವಿಶ್ವದ ಅತಿದೊಡ್ಡ ಗಣತಂತ್ರ ವ್ಯವಸ್ಥೆಯನ್ನು ನಾವು ಅಳವಡಿಸಿಕೊಂಡಿದ್ದೇವೆ. ಒಂದು ರಾಷ್ಟ್ರ, ಒಂದು ಚುನಾವಣೆ ಪ್ರಸ್ತಾವವು ಭಾರತದ ಪ್ರಜಾಸತ್ತಾತ್ಮಕ ಮತ್ತು ಒಕ್ಕೂಟ ವ್ಯವಸ್ಥೆಗೆ ಅಪಾಯವನ್ನುಂಟು ಮಾಡುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಬೇರೆ ಬೇರೆ ರಾಜ್ಯಗಳ ವಿಧಾನಸಭೆಗಳು ಅವುಗಳದ್ಧೇ ಆದ ಅಧಿಕಾರ ಅವಧಿಗಳನ್ನು ಹೊಂದಿರುತ್ತವೆ ಮತ್ತು ಏಕರೂಪ ಚುನಾವಣಾ ವೇಳಾಪಟ್ಟಿಯು ರಾಷ್ಟ್ರೀಯ ವಿಷಯಗಳ ಮೇಲೆ ಹೆಚ್ಚಾಗಿ ಗಮನಹರಿಸುವ ಮತ್ತು ಸ್ಥಳೀಯ ಕಾಳಜಿಗಳನ್ನು ನಿರ್ಲಕ್ಷಿಸುವ ಮೂಲಕ ರಾಜ್ಯಗಳ ಸ್ವಯತ್ತತೆಯನ್ನು ದುರ್ಬಲಗೊಳಿಸಬಹುದು ಎಂದರು.
ಚುನಾವಣಾ ಸಿಬ್ಬಂದಿಯನ್ನು ನಿರ್ವಹಿಸುವುದು, ಮತದಾರರ ಬೇಸರ, ಕಡಿಮೆಗೊಂಡ ಸರ್ಕಾರದ ಉತ್ತರದಾಯಿತ್ವ ಹಾಗೂ ಆರ್ಥಿಕ ಮತ್ತು ಸಾಮಾಜಿಕ ಅಡತಡೆಗಳು ಏಕಕಾಲಿಕ ಚುನಾವಣೆಗಳಿಗೆ ಸಂಬಂಧಿಸಿದ ಗುರುತರ ಗಂಡಾಂತರಗಳಾಗಿವೆ. ಹಾಗಾಗಿ ಭಾರತದ ಪ್ರಜಾಸತ್ತಾತ್ಮಕ ಪ್ರಕ್ರಿಯೆಗಳು ಮತ್ತು ಒಕ್ಕೂಟ ಸಮಗ್ರತೆ ರಕ್ಷಿಸಲು ಈ ಕಠೋರ ನೀತಿಯನ್ನು ಅನುಷ್ಠಾನಗೊಳಿಸಬಾರದೆಂಬ ನಿರ್ಣಯವನ್ನು ಮಂಡಿಸುವುದರ ಮೂಲಕ ಕೇಂದ್ರ ಸರ್ಕಾರವನ್ನು ಈ ಸದನವು ಒತ್ತಾಯಿಸುತ್ತದೆ ಎಂದು ತಿಳಿಸಿದರು.