ಸ್ನಾರ್ಕ್ಲಿಂಗ್ ಮತ್ತು ಡೈವಿಂಗ್ ಚಟುವಟಿಕೆಗಳಿಗಾಗಿ ಪ್ರತಿದಿನ ಹತ್ತಾರು ಪ್ರವಾಸಿ ದೋಣಿಗಳು ಈ ಕರಾವಳಿ ಸುತ್ತ ಸಾಗುತ್ತವೆ. ಇವು ಪ್ರವಾಸಿಗರಿಗೆ ಮನರಂಜಾ ಜಲಾಂತರ್ಗಾಮಿ ನೌಕೆಯಾಗಿ ಕಾರ್ಯ ನಿರ್ವಹಿಸುತ್ತವೆ.
Egypts | ಈಜಿಪ್ಟ್‌ನ ಕೆಂಪು ಸಮುದ್ರದ ಹುರ್ಘಾಡಾ ಕರವಾಳಿಯಲ್ಲಿ 45 ಜನರನ್ನು ಹೊತ್ತೊಯ್ಯುತ್ತಿದ್ದ ಪ್ರವಾಸಿ ಜಲಾಂತರ್ಗಾಮಿ ನೌಕೆಯೊಂದು ಮುಳುಗಡೆಯಾಗಿ ಆರು ಪ್ರವಾಸಿಗರು ಸಾವನ್ನಪ್ಪಿರುವುದಾಗಿ ವರದಿಯಾಗಿದೆ. ಘಟನೆಯಲ್ಲಿ ಇತರ 9 ಮಂದಿ ಗಾಯಗೊಂಡಿದ್ದು, ನಾಲ್ವರ ಸ್ಥಿತಿ ಚಿಂತಾಜನಕ ಎನ್ನಲಾಗಿದೆ. ಸ್ಥಳಕ್ಕೆ ಬಂದ ರಕ್ಷಣಾ ಸಿಬ್ಬಂದಿ ತಂಡ ಇಪ್ಪೊತ್ತಂಬತ್ತು ಪ್ರಯಾಣಿಕರನ್ನು ಸುರಕ್ಷಿತವಾಗಿ ರಕ್ಷಣೆ ಮಾಡಿದೆ. ಘಟನೆ ನಡೆದ ಸ್ಥಳಕ್ಕೆ 21 ಆ್ಯಂಬುಲೆನ್ಸ್ಗಳು ಹಾಗೂ ತುರ್ತು ಸೇವೆಗಳನ್ನು ನಿಯೋಜಿಸಲಾಗಿದ್ದು, ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಸಿಂಧ್‌ಬಾದ್ ಹೋಟೆಲ್ ಒಡೆತನದ ಈ ಹಡಗು, ಅಪ್ರಾಪ್ತರು ವಯಸ್ಕರರು ಸೇರಿದಂತೆ 45 ರಷ್ಯಾದ ಪ್ರವಾಸಿಗರನ್ನು ಮತ್ತು ಸಿಬ್ಬಂದಿಯನ್ನು ಹೊತ್ತೊಯ್ಯುತ್ತಿತ್ತು ಎಂದು ಈಜಿಪ್ಟ್‌ನಲ್ಲಿರುವ ರಷ್ಯಾದ ರಾಯಭಾರಿ ಕಚೇರಿ ಮಾಹಿತಿ ನೀಡಿದೆ. ಎಲ್ಲಾ ಪ್ರಯಾಣಿಕರು "ಬಿಬ್ಲಿಯೊ ಗ್ಲೋಬಸ್ ಈಜಿಪ್ಟ್ ಟೂರ್ಸ್" ಕಂಪನಿಯು ಆಯೋಜಿಸಿದ್ದ ಪ್ರವಾಸದಲ್ಲಿ ಭಾಗಿಯಾಗಿದ್ದರು ಎನ್ನಲಾಗಿದೆ.
ಪ್ರವಾಸಿಗರು ಸಮುದ್ರದಲ್ಲಿ ಹೋಗುತ್ತಿದ್ದಾಗ ಮಧ್ಯಾಹ್ನ 1 ಗಂಟೆ ಸುಮಾರಿಗೆ ಹುರ್ಘಾದಾ ಬಂದರಿನ ಬಳಿ ಜಲಾಂತರ್ಗಾಮಿ ಮುಳುಗಿದೆ ಎಂಬ ವರದಿಯಾಗಿದೆ. ಇದೀಗ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗಳು ಮುಂದುವರೆದಿದ್ದು, ಉಳಿದ ಪ್ರಯಾಣಿಕರನ್ನು ಪತ್ತೆಹಚ್ಚಲು ಅಧಿಕಾರಿಗಳು ಕೆಲಸ ಮಾಡುತ್ತಿದ್ದಾರೆ. ಜಲಾಂತರ್ಗಾಮಿ ಮುಳುಗುವಿಕೆಗೆ ಮೂಲ ಕಾರಣ ಏನೆಂಬುದು ಇನ್ನೂ ತಿಳಿದು ಬಂದಿಲ್ಲ. ಘಟನೆಗೆ ನಿಖರ ಕಾರಣವನ್ನು ತಿಳಿಯಲು ತನಿಖೆ ಮುಂದುವರೆದಿದೆ.